Advertisement

ಅಧಿಕಾರಿಗಳ ಶ್ರಮ-ಶ್ರದ್ಧೆ ಅಭಿನಂದನಾರ್ಹ: ನಿರಾಣಿ

07:34 AM May 11, 2020 | Suhan S |

ಬೀಳಗಿ: ಕೋವಿಡ್‌-19 ತಡೆಗಾಗಿ ಮಾ.22ರಿಂದ ಕೈಗೊಂಡ ಲಾಕ್‌ ಡೌನ್‌ ವೇಳೆಯಿಂದ ಈವರೆಗೂ ತಾಲೂಕಿನಾದ್ಯಂತ ಕೋವಿಡ್  ಸೋಂಕು ಪತ್ತೆಯಾಗದೆ, ತಾಲೂಕು ಸಂಪೂರ್ಣ ಹಸಿರು ವಲಯದಲ್ಲಿರಲು ಕಾರಣವಾಗಿರುವ ಎಲ್ಲ ಅಧಿಕಾರಿಗಳ ಶ್ರಮ, ಶ್ರದ್ಧೆ ಹಾಗೂ ಸಾರ್ವಜನಿಕರ ಸಹಕಾರವನ್ನು ತುಂಬು ಹೃದಯದಿಂದ ಅಭಿನಂದಿಸುವುದಾಗಿ ಶಾಸಕ ಮುರುಗೇಶ ನಿರಾಣಿ ಹೇಳಿದರು.

Advertisement

ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಶನಿವಾರ ಕರೆದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿ ಬಳಗಕ್ಕೆ ಅಭಿನಂದನಾ ಪತ್ರ ನೀಡಿ ಅವರು ಮಾತನಾಡಿ, ಕೋವಿಡ್ ನಿರ್ಮೂಲನೆಗೆ ಸರ್ಕಾರ ತೆಗೆದುಕೊಂಡ ನಿಯಮ-ಸೂಚನೆ ವ್ಯವಸ್ಥಿತವಾಗಿ ಪಾಲಿಸುವಲ್ಲಿ ತಾಲೂಕು ಮುಂಚೂಣಿ ಸ್ಥಾನ ಕೈಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಎಲ್ಲ ಕಚೇರಿಗಳನ್ನು ಒಂದೇ ಸಮುಚ್ಛಯದಲ್ಲಿ ತರುವ ದೃಷ್ಟಿಯಿಂದ ಮಿನಿ ವಿಧಾನಸೌಧದ ಇನ್ನೊಂದು ಮಹಡಿ ನಿರ್ಮಾಣ, ತಾಲೂಕು ಆಸ್ಪತ್ರೆಗೆ ಹೆಚ್ಚುವರಿ ಕಟ್ಟಡ, ಪಾಲಿಟೆಕ್ನಿಕ್‌ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಕೂಡಲೇ ಕೆಲಸ ಆರಂಭಿಸಲಾಗುವುದು. ಬಡವರ ಕೈಗೆ ಕೆಲಸ ನೀಡುವ ಉದ್ದೇಶದಿಂದ ನರೇಗಾ ಯೋಜನೆಯಡಿ ಹೆಚ್ಚಿನ ಕೆಲಸ ಆರಂಭಿಸಲು ಆಯಾ ಗ್ರಾಪಂಗಳಿಗೆ ಸೂಚಿಸಲಾಗಿದೆ. ತಾಲೂಕಿನ ಟೆಲೆಂಡ್‌ವರೆಗೂ ಕಾಲುವೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಕೋವಿಡ್ ತಡೆಗೆ ಮುಂದೆಯೂ ಅನುಸರಿಸಬೇಕಾದ ಕ್ರಮಗಳ ಕುರಿತು ವಿವಿಧ ಇಲಾಖಾಧಿಕಾರಿಗಳು ಸಲಹೆ ನೀಡಿದರು. ಹೊರ ಜಿಲ್ಲೆಯಿಂದ 1729, ಹೊರ ರಾಜ್ಯದಿಂದ 654 ಹಾಗೂ ಹೊರದೇಶದಿಂದ 9 ಜನ ಸೇರಿ ಒಟ್ಟು 2748 ಜನ ತಾಲೂಕಿಗೆ ಆಗಮಿಸಿದ್ದಾರೆ. 2385 ಜನ ಹೋಂ ಕ್ವಾರಂಟೈನ್‌ ಅವಧಿ  ಮುಗಿಸಿದ್ದು, 356 ಜನರ ಕ್ವಾರೆಂಟೈನ್‌ನಲ್ಲಿದ್ದಾರೆ ಎಂದು ತಾಪಂ ಇಒ ಎಂ.ಕೆ. ತೊದಲಬಾಗಿ ವಿವರಿಸಿದರು.

ತಹಶೀಲ್ದಾರ್‌ ಭೀಮಪ್ಪ ಅಜೂರ, ಸಿಪಿಐ ಸಂಜೀವ ಬಳಿಗಾರ, ಪಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ತಾಲೂಕು ಆರೋಗ್ಯಾಧಿಕಾರಿ ಡಾ| ದಯಾನಂದ ಕರೆಣ್ಣವರ, ಆಹಾರ ನಿರೀಕ್ಷಕ ಹುರಕಡ್ಲಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next