Advertisement

ಶಿಥಿಲಗೊಂಡ ಎಚ್‌.ಡಿ.ಕೋಟೆ ತಾಪಂ ಕಟ್ಟಡ

03:29 PM Jan 03, 2023 | Team Udayavani |

ಎಚ್‌.ಡಿ.ಕೋಟೆ: ಛಾವಣಿ ಕುಸಿದು ಬೀಳುತ್ತಿದೆ, ಕಟ್ಟಡದ ಗೋಡೆಗಳು ಶಿಥಿಲಾವಸ್ಥೆ ತಲುಪಿವೆ, ಇಡೀ ಕಟ್ಟಡ ಯಾವಾಗ ಎಲ್ಲಿ ಕುಸಿದು ಬೀಳುವುದೋ ಅನ್ನುವ ಸ್ಥಿತಿ ತಲುಪಿ, ಭಯದ ನಡುವೆಯೂ ಜೀವದ ಹಂಗು ತೊರೆದು ಶಿಥಿಲಾವಸ್ಥೆ ಕಟ್ಟಡದ ಒಳಗೆ ತಲೆಯ ಮೇಲೆ ಅಪಾಯ ಹೊತ್ತು ಕಚೇರಿ ಸಿಬ್ಬಂದಿ ಪ್ರತಿದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

ತಾಲೂಕು ಕೇಂದ್ರ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಪಂ ಕಟ್ಟಡ ಶಿಥಿಲಾವಸ್ಥೆ ತಲುಪಿ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುವ ತಾಪಂ ಸಿಬ್ಬಂದಿ ತಾಪಂ ಕಟ್ಟಡದಲ್ಲಿ ಯಾವಾಗ ಎಲ್ಲಿ ಏನು ಸಂಭವಿಸುವುದೋ ಅನ್ನುವ ಭೀತಿಯಲ್ಲಿ ಪ್ರತಿಕ್ಷಣ ಕಳೆಯುವಂತಾಗಿದೆ.

ತಾಲೂಕು ಇಡೀ ಗ್ರಾಪಂಗಳ ನಿಯಂತ್ರಣದ ಹೊಣೆ ಹೊತ್ತಿರುವ ತಾಪಂ ಕಟ್ಟಡ ತೀರ ಶಿಥಿಲಗೊಂಡಿದ್ದು, ಶಿಥಿಲಗೊಂಡ ಕಟ್ಟಡದಲ್ಲಿ ಕಚೇರಿ ನೌಕರರು ಜೀವ ಭಯದಲ್ಲಿಯೇ ಕರ್ತವ್ಯ ನಿರ್ವಹಿಸಿ ಎಷ್ಟು ಬೇಗ ಸಂಜೆಯಾಗಿ ನಾವು ಸುರಕ್ಷಿತವಾಗಿ ಮನೆ ಸೇರಿಕೊಳ್ಳುತ್ತೇವೆಯೋ ಅನ್ನುವ ಭಯದಲ್ಲಿದ್ದಾರೆ.

ಶಿಥಿಲಗೊಂಡಿದೆ ಓಬೀರಾಯನ ಕಾಲದ ತಾಪಂ ಕಟ್ಟಡ: ತಾಲೂಕು ಕೇಂದ್ರ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಪಂ ಕಟ್ಟಡ ತೀರ ಹಳೆಯದಾಗಿದ್ದು, ಇಡೀ ಕಟ್ಟಡ ಯೋಗ್ಯವಲ್ಲದ ಸ್ಥಿತಿ ತಲುಪುತ್ತಿದ್ದಂತೆಯೇ ಸುಮಾರು 1.98 ಕೋಟಿ ಅಂದಾಜು ವೆಚ್ಚದಲ್ಲಿ ನೂತನ ಕಟ್ಟಡದ ಕಾಮಗಾರಿಗೆ 2018-19ನೇ ಸಾಲಿನಲ್ಲಿ ಅನುಮೋದನೆ ದೊರೆತು 2020ನೇ ಸಾಲಿನಲ್ಲಿ ಕಾಮಗಾರಿ ಆರಂಭಗೊಂಡಿತು. ಇಲ್ಲಿಯ ತನಕ ಜಿಪಂನ 1 ಕೋಟಿ ಅನುದಾನ, ತಾಪಂನ 78 ಲಕ್ಷ ಅನುದಾನ ಸೇರಿ ಒಟ್ಟು 1.78 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಗುತ್ತಿಗೆದಾರರಿಗೆ ಹಣ ಸಂದಾಯವಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಆಮೆ ವೇಗದಲ್ಲಿ ಸಾಗಿದ ಕಾಮಗಾರಿ: ಪತ್ರಿಕೆಗಳಲ್ಲಿ ಕಾಮಗಾರಿ ಅಪೂರ್ಣ ಕುರಿತು ಸುದ್ದಿಯಾದಾಗ ಮಾತ್ರ ಕೊಂಚಕೊಂಚ ಚುರುಕಾದ ಕಾಮಗಾರಿ ಬಳಿಕ ವಿಳಂಬ ನೀತಿ ಅನುಸರಿಸಿ ಹೇಗೋ ಈಗ ಅಂತಿಮ ಘಟ್ಟ ತಲುಪಿದೆ. ಆದರೆ ಪರಿಪೂರ್ಣವಾದ ಕಾಮಗಾರಿಯಾಗಿಲ್ಲ, ಕಾಮಗಾರಿ ಕಳಪೆಯಾಗಿದೆ. ಹಾಗಾಗಿ 3ನೇ ಪಾರ್ಟಿಯಿಂದ ತನಿಖೆ ನಡೆಸಬೇಕು ಅನ್ನುವ ಒತ್ತಾಯ ಇಲಾಖೆ ಮತ್ತು ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿ ಬರುತ್ತಿದೆ. ಆರಂಭದಿಂದಲೂ ಇಲ್ಲಿಯ ತನಕ ಅಮೆ ವೇಗದಲ್ಲಿ ಕಾಮಗಾರಿ ಸಾಗುತ್ತಿದೆ.

Advertisement

ಹಣ ಸಂದಾಯವಾದರೂ ಕಾಮಗಾರಿ ಪೂರ್ಣ ಗೊಂಡಿಲ್ಲ: 1.98 ಕೋಟಿ ಅನುದಾನದ ಕಾಮಗಾರಿ ಮೊತ್ತದಲ್ಲಿ 1.78 ಕೋಟಿ ಈಗಾಗಲೇ ಗುತ್ತಿಗೆದಾರರಿಗೆ ಸಂದಾಯವಾಗಿದೆ. ಇನ್ನು 20 ಲಕ್ಷ ಮಾತ್ರ ಬಾಕಿ ಪಾವತಿಸಬೇಕಿದೆ, ಆದರೂ ಕಟ್ಟಡದ ಕಾಮಗಾರಿ ಪೂರ್ಣಗೊಂಡಿಲ್ಲ. ಶೌಚಾಲಯದ ಸಂಪರ್ಕ ಕಲ್ಪಿಸಿಲ್ಲ, ಇಡೀ ಕಟ್ಟಡಲ್ಲಿ ವಿದ್ಯುತ್‌ ಸಂಪರ್ಕದ ಪಾಯಿಂಟ್‌ ಗಳನ್ನು ನಿರ್ಮಿಸಿಲ್ಲ, ಇವೆಲ್ಲವನ್ನೂ ಮೀರಿ ಕಟ್ಟಡದ ಮೊಲದ ಅಂತಸ್ತಿನಲ್ಲಿ ತಾಪಂ ಅಧ್ಯಕ್ಷರ ಕೊಠಡಿ ನಿರ್ಮಿಸಬೇಕೆಂಬ ಷರತ್ತಿದ್ದರೂ ಅಧ್ಯಕ್ಷರ ಕೊಠಡಿ ಕಾಮಗಾರಿ ಆರಂಭಿಸಿಯೇ ಇಲ್ಲ.

ತಾಪಂ ಸಿಬ್ಬಂದಿ ಸುರಕ್ಷತಾ ದೃಷ್ಟಿಯಿಂದ ಕಳೆದ 3 ವರ್ಷಗಳ ಹಿಂದೆ ಸುಮಾರು 2 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡ ಕಟ್ಟಡದ ಕಾಮಗಾರಿ ವಿಳಂಬಕ್ಕೆ ನಿಖರವಾದ ಕಾಣರವೂ ತಿಳಿದು ಬಂದಿಲ್ಲ. ಹಣ ಪಡೆದುಕೊಂಡು ನೂತನ ಕಟ್ಟಡದ ಕಾಮಗಾರಿ ವಿಳಂಬಗೊಂಡಿದೆ ಆದರೆ ಇತ್ತ ಓಬಿರಾಯನ ಕಾಳದ ಶಿಥಿಲಾವಸ್ಥೆ ತಾಪಂ ಕಟ್ಟಡದಲ್ಲಿ ಸಿಬ್ಬಂದಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಸಬೇಕಾದ ಅನಿವಾರ್ಯತೆ ಇದೆ. ಕೂಡಲೆ ತಾಲೂಕಿನ ಶಾಸಕರೂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಇತ್ತ ಗಮನ ಹರಿಸಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಹಳೆಯ ಕಟ್ಟಡದ ಆಡಳಿತ ನೂತನ ಕಟ್ಟಡಕ್ಕೆ ಸ್ಥಳಾಂತರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಶಿಥಿಲ ಕಟ್ಟಡದಿಂದ ಅಪಾಯವಾಗುವುದು ಕಟ್ಟಿಟ್ಟ ಬುತ್ತಿ.

ಹಳೆಯ ತಾಪಂ ಕಟ್ಟಡ ತೀರ ಶಿಥಿಲ ಗೊಂಡಿದೆ. ನೂತನ ಕಟ್ಟಡದ ಕಾಮ  ಗಾರಿಗೆ ಇಲ್ಲಿಯ ತನಕ 1.80 ಕೋಟಿ ಹಣ ಗುತ್ತಿಗೆದಾರರಿಗೆ ಸಂದಾಯ ಮಾಡ ಲಾಗಿದೆ. ಇನ್ನು 20 ಲಕ್ಷ ಬಾಕಿ ಇದ್ದು ಕಾಮಗಾರಿ ಪೂರ್ಣ ಗೊಂಡಿಲ್ಲ. ವಿದ್ಯುತ್‌, ಶೌಚಾಲಯ, ಮೊದಲ ಅಂತಸ್ತಿನ ಕಾಮಗಾರಿ ಬಾಕಿ ಇಳಿದುಕೊಂಡಿದೆ. ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. -ಜೆರಾಲ್ಡ್‌ ರಾಜೇಶ್‌, ತಾಪಂ, ಕಾರ್ಯನಿರ್ವಹಣಾಧಿಕಾರಿ

– ಎಚ್‌.ಬಿ.ಬಸವರಾಜು.

Advertisement

Udayavani is now on Telegram. Click here to join our channel and stay updated with the latest news.

Next