ರಾಮನಗರ/ಕನಕಪುರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದಲ್ಲಿ ಇ.ಡಿ ಅಧಿಕಾರಿಗಳು ಮಂಗಳವಾರ ಡಿಕೆಶಿ ತಾಯಿ ಗೌರಮ್ಮ ಅವರ ವಿಚಾರಣೆ ನಡೆಸಿದರು.
ನ್ಯಾಯಾಲಯದ ಆದೇಶದ ಮೇರೆಗೆ ಮಹಿಳಾ ಅಧಿಕಾರಿ ಸೇರಿ ಐವರು ಇ.ಡಿ ಅಧಿಕಾರಿಗಳು ಮಧ್ಯಾಹ್ನ 12.30ರ ವೇಳೆಗೆ 2 ಕಾರುಗಳಲ್ಲಿ ಕನಕಪುರ ತಾಲೂಕು ಕೋಡಿಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ಆಗಮಿಸಿ, ಗೌರಮ್ಮ ಅವರನ್ನು ವಿಚಾರಣೆಗೊಳಪಡಿಸಿದರು. ವಿಚಾರಣೆಗೂ ಮುನ್ನ ಕುಟುಂಬದ ವೈದ್ಯರು 85 ವರ್ಷ ವಯಸ್ಸಿನ ಗೌರಮ್ಮ ಅವರ ಆರೋಗ್ಯದ ತಪಾಸಣೆ ನಡೆಸಿದರು. ವಿಚಾರಣೆ ರಾತ್ರಿವರೆಗೂ ನಡೆದಿದ್ದು, ಸಂಪೂರ್ಣ ವಿಚಾರಣೆಯ ಆಡಿಯೋ, ವೀಡಿಯೋ ರೆಕಾರ್ಡ್ ಮಾಡಲಾಗಿದೆ.
ವಿಚಾರಣೆ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಸೋಮವಾರವೇ ಕೋಡಿಹಳ್ಳಿಗೆ ಬಂದು ತಾಯಿ ಗೌರಮ್ಮ ಅವರ ಜೊತೆಗಿದ್ದರು. ಇ.ಡಿ ಅಧಿಕಾರಿಗಳು ಕೇಳಬಹುದಾದ ಪ್ರಶ್ನೆಗಳು, ಉತ್ತರಗಳನ್ನು ಸಂಯಮದಿಂದಲೇ ಕೊಡುವ ಅವಶ್ಯಕತೆ ಬಗ್ಗೆ ತಿಳಿಸಿಕೊಟ್ಟು ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ಇವರೊಟ್ಟಿಗೆ ಡಿಕೆಶಿ ಪತ್ನಿ ಉಷಾ, ಪುತ್ರಿ ಐಶ್ವರ್ಯ ಸಹ ಇದ್ದಾರೆ ಎನ್ನಲಾಗಿದೆ. ಆದರೆ, ವಿಚಾರಣೆ ವೇಳೆ ಡಿ.ಕೆ.ಸಹೋದರರು ಪ್ರತ್ಯೇಕ ಕೊಠಡಿಯಲ್ಲಿದ್ದರು ಎನ್ನಲಾಗಿದೆ. ವಿಚಾರಣೆ ಹಿನ್ನೆಲೆಯಲ್ಲಿ ಮನೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಹಿಂದೆಯೇ ಗೌರಮ್ಮ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಗಾಗಿ ದೆಹಲಿಗೆ ಬರುವಂತೆ ಸಮನ್ಸ್ ಜಾರಿಗೊಳಿಸಿತ್ತು. ಆದರೆ, ತಮಗೆ 85 ವರ್ಷವಾಗಿರುವ ಕಾರಣ ತಮ್ಮ ಪರವಾಗಿ ಪ್ರತಿನಿಧಿ ಕಳುಹಿಸಿಕೊಡಲು ಅವಕಾಶ ಕಲ್ಪಿಸಬೇಕು. ಇಲ್ಲವೇ, ಸ್ವಗೃಹದಲ್ಲಿ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಗೌರಮ್ಮ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಗೌರಮ್ಮ ಅವರ ವಿಚಾರಣೆಯನ್ನು ಅವರ ನಿವಾಸದಲ್ಲೇ ನಡೆಸುವಂತೆ ಆದೇಶ ನೀಡಿತ್ತು.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿಕೆಶಿಯವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ತಾಯಿ ಗೌರಮ್ಮ ಅವರಿಂದ ತಮಗೆ 22 ಕೋಟಿ 11 ಲಕ್ಷ 74 ಸಾವಿರದ 303 ರೂ.ಬಾಕಿ ಬರಬೇಕಾಗಿದೆ. ಅಲ್ಲದೆ, ಡಿಕೆಶಿ ಪುತ್ರಿ ಐಶ್ವರ್ಯ ಅವರು, ಅಜ್ಜಿ ಗೌರಮ್ಮಗೆ 36 ಲಕ್ಷ 67 ಸಾವಿರದ 860 ರೂ. ಬಾಕಿ ಕೊಡಬೇಕು ಎಂದು ಘೋಷಿಸಿಕೊಂಡಿದ್ದಾರೆ.