Advertisement

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ವಿದ್ಯಾರ್ಥಿಸ್ನೇಹಿ ‘ದೀಕ್ಷಾ’ಆಪ್ ಲೋಕಾರ್ಪಣೆ

04:53 PM May 25, 2021 | Team Udayavani |

ಬೆಂಗಳೂರು: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ‘ದೀಕ್ಷಾ’-ಆಪ್  ನ್ನು (DIKSHA-app)  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬುಧವಾರ ಚಾಲನೆ ನೀಡಿದರು.

Advertisement

ಮಂಗಳವಾರ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ರಾಜ್ಯದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ‘ಪರೀಕ್ಷಾ ಅಭ್ಯಾಸ’ ಎಂಬ ವಿನೂತನ ಕಾರ್ಯಕ್ರಮವನ್ನು ಅಳವಡಿಸಿ ದೀಕ್ಷಾ ವೇದಿಕೆಯ ಮೂಲಕ ಲೋಕಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಪಿಯುಸಿ ವಿದ್ಯಾರ್ಥಿಗಳಿಗೆ ಮುಂಬರಲಿರುವ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತಮ ರೀತಿಯಲ್ಲಿ ಆತ್ಮವಿಶ್ವಾಸದಿಂದ ಸಿದ್ಧರಾಗುವುದಕ್ಕೆ ಈ ಆಪ್ ಸಹಕಾರಿಯಾಗಲಿದೆ ಎಂದರು.

ಅದೇ ರೀತಿಯಾಗಿ ಡಿಎಸ್ಇಆರ್ ಟಿ ಯು 10ನೇ ತರಗತಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಿದ್ಧತೆ ಮಾಡುವುದಕ್ಕಾಗಿ “ಫೋಕಸ್” ಎಂಬ ಪುನರ್ಮನನ ಕಾರ್ಯಕ್ರಮವನ್ನು ದೀಕ್ಷಾದಲ್ಲಿ ಪ್ರಸ್ತುತಪಡಿಸಿದೆ. ಪ್ರತಿಯೊಂದು ವಿಷಯಕ್ಕೆ ಇ- ಪಠ್ಯಪುಸ್ತಕ, ಕನಿಷ್ಠ 2 ಮಾಡೆಲ್ ಪ್ರಶ್ನೆಪತ್ರಿಕೆಗಳು, ವಿವರಾಣಾತ್ಮಕ ವಿಡಿಯೋಗಳು, ಅಧ್ಯಾಯವಾರು ಅಭ್ಯಾಸ ಪ್ರಶ್ನೋತ್ತರಗಳು ಅದರಲ್ಲಿ ದೊರೆಯಲಿವೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಮಂಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವುದಕ್ಕೆ ಸಹಾಯ ಮಾಡಲು ಪಿಸಿಎಂಬಿ (PCMB) ವಿಷಯಕ್ಕೆ ಸುಮಾರು 9000 ಬಹು ಆಯ್ಕೆ ಪ್ರಶ್ನೆಗಳನ್ನು (ಎಂಸಿಕ್ಯು) ಅಧ್ಯಾಯವಾರು ಒದಗಿಸಲಾಗಿದೆ. ದೇಶದಲ್ಲಿಯೇ ಇದೊಂದು ವಿನೂತನ ಪ್ರಯೋಗವಾಗಿದ್ದು, ನಮ್ಮ ಕರ್ನಾಟಕದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಇದನ್ನು ಪ್ರಥಮವಾಗಿ ಜಾರಿಗೊಳಿಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಎಲ್ಲ ಪಠ್ಯಾಂಶಗಳನ್ನು ‘DIKSHA-app’ದಲ್ಲಿ ಪಡೆದುಕೊಳ್ಳಬಹುದಾಗಿದ್ದು, ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಸಚಿವರು ಕೋರಿದರು.

Advertisement

ಏನಿದು ದೀಕ್ಷಾ-ಆಪ್ ಪ್ರೋಗ್ರಾಂ: DIKSHA ಪೋರ್ಟಲ್ ಅನ್ನು https://diksha.gov.in/ ಇಲ್ಲಿ ನೋಡಬಹುದಾಗಿದೆ. ಆಂಡ್ರಾಯಿಡ್ ಫೋನ್ ಗಳಲ್ಲಿ DIKSHA ಆಪ್ ಅನ್ನು ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. DIKSHA ಆಪ್ ಅಥವಾ ಪೋರ್ಟಲ್ ನಲ್ಲಿ ನಿಮಗೆ ಬೇಕಿರುವ ಬೋರ್ಡ್, ಮಾಧ್ಯಮ, ಭಾಷೆ ಮತ್ತು ತರಗತಿಗಳನ್ನು ಆಯ್ಕೆ ಮಾಡಿಕೊಂಡು, ವಿವಿಧ ಬಗೆಯ ಪಠ್ಯಾಂಶಗಳನ್ನು ಪಡೆದುಕೊಳ್ಳಬಹುದು.

ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕಲಿಕಾ ಸಂಪನ್ಮೂಲಗಳನ್ನು ಒದಗಿಸಿ, ಅವರ ಕಲಿಕೆಯನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಈ ಪ್ರೋಗ್ರಾಂ ರೂಪಿಸಲಾಗಿದೆ. ಕೋವಿಡ್ ಪಿಡುಗಿನ ಈ ಕಷ್ಟಕರ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ನಿಯಮಿತವಾಗಿ ಹೋಗುವುದಕ್ಕೆ ಸಾಧ್ಯವಾಗಿಲ್ಲ. ಶಿಕ್ಷಣ ಇಲಾಖೆಯು ಚಂದನ ಟಿವಿಯ ಮೂಲಕ ಆನ್ ಲೈನ್ ಪಾಠಗಳನ್ನು ನಡೆಸುತ್ತಿದೆ. ಆದರೆ ಎಲ್ಲ ವಿದ್ಯಾರ್ಥಿಗಳಿಗೆ ಎಲ್ಲಾ ಪಾಠಗಳನ್ನು ವೀಕ್ಷಿಸುವುದು ಸಾಧ್ಯವಾಗಿರುವುದಿಲ್ಲ. ದೀಕ್ಷಾ ಪೋರ್ಟಲ್ ನಲ್ಲಿ ಅಳವಡಿಸಲಾಗಿರುವ ಈ ಎಲ್ಲಾ ಇ-ಕಲಿಕಾ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳು ತಮಗೆ ಸಾಧ್ಯವಾದಾಗ ಮತ್ತು ಅಗತ್ಯವಿದ್ದಾಗ ನೋಡಿಕೊಳ್ಳಬಹುದು.

1ರಿಂದ 12ನೇ ತರಗತಿಗಳಿಗೆ: ಎಲ್ಲ ಬಗೆಯ ಪಠ್ಯಾಂಶಗಳು ಅಂದರೆ ಇ-ಪಠ್ಯಪುಸ್ತಕಗಳು (ಇಟಿಬಿ), ವಿವರಣಾತ್ಮಕ ಪಠ್ಯಾಂಶಗಳು, ಕಲಿಕಾ ಸಂಪನ್ಮೂಲಗಳು, ಅಭ್ಯಾಸ ಪ್ರಶ್ನೆಗಳು, ಪ್ರಶ್ನೆ ಕೋಶ ಮತ್ತು ಶಿಕ್ಷಕರಿಗೆ ಪಾಠ ಯೋಜನೆ ಇನ್ನಿತರ ಸಂಪನ್ಮೂಲಗಳನ್ನು ದೀಕ್ಷಾ ಪೋರ್ಟಲ್ ನಲ್ಲಿ ಅಳವಡಿಸಲಾಗಿದೆ. ಕ್ವಶ್ಚನ್ ಬ್ಯಾಂಕಿನಲ್ಲಿ ಅಧ್ಯಾಯವಾರು ಬಹು ಆಯ್ಕೆ ಪ್ರಶ್ನೆಗಳು (ಎಂಸಿಕ್ಯು), ಕಿರುಉತ್ತರಗಳು (Very Short Answer), ಸಂಕ್ಷೀಪ್ತ ಉತ್ತರಗಳು (Short Answers), ದೀರ್ಘ ಉತ್ತರಗಳು (Long Answers); ಹೀಗೆ ನಾಲ್ಕು ರೀತಿಯ ಪ್ರಶ್ನೆಗಳು ಸೇರಿವೆ.

ಫೋಕಸ್ ಪ್ರೋಗ್ರಾಂ: 10ನೇ ತರಗತಿಯ ವಿದ್ಯಾರ್ಥಿಗಳು ಮಂಡಳಿಯ ಪರೀಕ್ಷೆಗೆ ಸಿದ್ಧರಾಗುವುದಕ್ಕೆ ಸಹಾಯವಾಗಲೆಂದು ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯಗಳ ಪ್ರತಿ ಅಧ್ಯಾಯಕ್ಕೆ ಸುಮಾರು 30 ಪ್ರಶ್ನೆಗಳನ್ನು ಸೇರಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಹಲವಾರು ಕ್ಲಿಷ್ಟಕರ ಪರಿಕಲ್ಪನೆಗಳನ್ನು ಪುನರ್ಮನನ ಮಾಡುತ್ತ, ಪರೀಕ್ಷೆಗೆ ಆತ್ಮವಿಶ್ವಾಸದಿಂದ ಸಿದ್ಧರಾಗುವುದಕ್ಕೆ ಸಾಧ್ಯಗೊಳಿಸುತ್ತದೆ.

ದ್ವಿತೀಯ ಪಿಯುಸಿಗೆ:   ಪಿಸಿಎಂಬಿ ವಿಷಯಗಳಿಗೆ, ಪ್ರತಿ ಅಧ್ಯಾಯಕ್ಕೂ ಸಮಾರು 80-100 ಪ್ರಶ್ನೆಗಳನ್ನು ಅಪ್ಲೋಡ್ ಮಾಡಲಾಗಿದೆ. ಇದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ KCET, COMEDK, JEE, NEET, ಹೀಗೆ ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ರೀತಿಯಲ್ಲಿ ಸಿದ್ಧತೆ ಮಾಡುವುದಕ್ಕೆ ಸಹಾಯವಾಗುತ್ತದೆ.

10ನೇ ತರಗತಿಯ ಸುಮಾರು 9 ಲಕ್ಷ ವಿದ್ಯಾರ್ಥಿಗಳು, 1ರಿಂದ – 10ನೇ ತರಗತಿ: ಸುಮಾರು 85 ಲಕ್ಷ ವಿದ್ಯಾರ್ಥಿಗಳು, ಪಿಯುಸಿ (ಪ್ರಥಮ & ದ್ವಿತೀಯ): ಸುಮಾರು 13 ಲಕ್ಷ ವಿದ್ಯಾರ್ಥಿಗಳು  ದೀಕ್ಷಾ-ಆಪ್ ನ ಪ್ರಯೋಜನ ಪಡೆಯಲಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ  ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಆರ್.  ಸ್ನೇಹಲ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next