Advertisement
ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಗುಣಮಟ್ಟದಿಂದ ಕೂಡಿಲ್ಲ. ಸರಿಯಾದ ಸಮಯಕ್ಕೆ ಆಹಾರ ವಿತರಣೆಯಾಗುತ್ತಿಲ್ಲ ಹಾಗೂ ಕಡಿಮೆ ಪ್ರಮಾಣದ ಆಹಾರ ವಿತರಿಸಲಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ನಗರ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು/ ನಿರೀಕ್ಷಕರು/ಉಪನಿರೀಕ್ಷಕರನ್ನು ಒಳಗೊಂಡ 28 ಅಧಿಕಾರಿಗಳ ತಂಡ ನಗರದಲ್ಲಿ 121 ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
Related Articles
Advertisement
ಜತೆಗೆ, ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗಾಗಿಯೇ ಪಾಲಿಕೆಯಿಂದ ಪ್ರತ್ಯೇಕ ವಿಭಾಗ ರಚಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್ ಹಾಗೂ ಜೂನಿಯರ್ ಕಮಿಷನರ್ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಲಾಗಿದೆ. ತಂಡದಲ್ಲಿ ನಿವೃತ್ತ ಸೇನಾಧಿಕಾರಿಗಳೂ ಇರಲಿದ್ದು, ಪ್ರತಿದಿನ ಕ್ಯಾಂಟೀನ್‌ಗಳ ಕಾರ್ಯವೈಖರಿಯ ಬಗ್ಗೆ ವರದಿ ನೀಡುತ್ತಾರೆ ಎಂದಿದ್ದಾರೆ.
ಕ್ಯಾಂಟೀನ್‌ನಲ್ಲಿ ಕ್ಯಾಮೆರಾ: ಸುರಕ್ಷತೆ ದೃಷ್ಟಿಯಿಂದ ಪ್ರತಿ ಕ್ಯಾಂಟೀನ್ ಹಾಗೂ ಅಡುಗೆ ಮನೆಗಳಲ್ಲಿ ಆಹಾರ ತಯಾರಿಸುವ, ತೂಕ ಹಾಕುವ ಹಾಗೂ ಕ್ಯಾಂಟೀನ್‌ಗಳ ಪ್ರವೇಶ ದ್ವಾರದ ಬಳಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದರೊಂದಿಗೆ ಗ್ರಾಹಕರಿಗೆ ಆಹಾರ ಪೂರೈಕೆ ಮಾಡುವ ಮೊದಲು ಆಹಾರ ತೂಕ ಮಾಡಲು ಸಣ್ಣ ಗಾತ್ರದ ಡಿಜಿಟಲ್ ತೂಕ ಹಾಕುವ ಯಂತ್ರಗಳನ್ನು ಕ್ಯಾಂಟೀನ್‌ಗಳಲ್ಲಿ ಇರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಟಿಕ್ಕರ್ ಬೋರ್ಡ್, ಪಿಒಎಸ್ ಅಳವಡಿಕೆ: ಕ್ಯಾಂಟೀನ್‌ಗಳೆದುರು ಗ್ರಾಹಕರ ಕಾಯುವಿಕೆ ತಪ್ಪಿಸಲು ಹಾಗೂ ಆಹಾರ ವಿತರಣೆಯಲ್ಲಿ ಅಕ್ರಮ ನಡೆಯದಂತೆ ಕ್ಯಾಂಟೀನ್‌ನಲ್ಲಿ ಲಭ್ಯವಿರುವ ಆಹಾರ ಪ್ರಮಾಣದ (ಪ್ಲೇಟ್‌ಗಳ ಸಂಖ್ಯೆ) ಕುರಿತು ಮಾಹಿತಿ ನೀಡಲು ಡಿಜಿಟಲ್ ಟಿಕ್ಕರ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಟೋಕನ್ ನೀಡುವ ವ್ಯವಸ್ಥೆ ಸ್ಥಗಿತಗೊಳಿಸಿ ಪಾಯಿಂಟ್ ಆಫ್ ಸೇಲ್ ಯಂತ್ರಗಳನ್ನು ನೀಡಿರುವುದರಿಂದ ಪ್ರತಿ ಪ್ಲೇಟ್‌ಗೂ ರಸೀದಿ ಬರಲಿದೆ. ಹೀಗಾಗಿ ವಿತರಣೆಯಾದ ಪ್ಲೇಟ್‌ಗಳ ನಿಖರ ಮಾಹಿತಿ ಲಭ್ಯವಾಗುತ್ತದೆ.
ಪಾರದರ್ಶಕತೆಗೆ ಆ್ಯಪ್ ಬಳಕೆ: ಅಡುಗೆಮನೆಗಳಿಂದ ಆಹಾರ ಸರಬರಾಜಾಗುವ ಮೊದಲು ಸರಬರಾಜಿಗೆ ಮೊದಲು ಆಹಾರ ತೂಕ ಮಾಡುವ ಹಾಗೂ ಕ್ಯಾಂಟೀನ್‌ಗಳಿಗೆ ತಲುಪಿದ ನಂತರ ಆಹಾರ ತೂಕ ಮಾಡುವ ಫೋಟೋಗಳನ್ನು ತೆಗೆದು ಆ್ಯಪ್‌ಗೆ ಅಪ್‌ಲೋಡ್ ಮಾಡುವ ಹೊಣೆಯನ್ನು ಸಿಬ್ಬಂದಿಗೆ ವಹಿಸಲಾಗಿದೆ. ಇದರೊಂದಿಗೆ ನೋಡಲ್ ಅಧಿಕಾರಿಗಳು ಕ್ಯಾಂಟೀನ್‌ಗಳಲ್ಲಿ ವಿತರಣೆಯಾದ ಆಹಾರ ಹಾಗೂ ಉಳಿದಿರುವ ಪ್ಲೇಟ್‌ಗಳ ಕುರಿತು ಆ್ಯಪ್ ಮೂಲಕ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವ ವ್ಯವಸ್ಥೆ ಇರುವುದರಿಂದ ಯಾವುದೇ ಕಾರಣಕ್ಕೂ ಅವ್ಯವಹಾರ ನಡೆಯಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ.
* ವೆಂ. ಸುನೀಲ್ ಕುಮಾರ್