ಶಿರಸಿ: ಕೋವಿಡ್-19ರ ಕಾರಣದಿಂದ ಸಂಕಷ್ಟದಲ್ಲಿದ್ದ ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು, ಅವರ ಬದುಕಿಗೆ ಆಸರೆಯಾಗಬೇಕು, ಯಕ್ಷಗಾನ ಕಲಾಸಕ್ತರಿಗೂ ಪ್ರಯೋಗಗಳ ಮೂಲಕ ಮನ ತಣಿಸಬೇಕು ಎಂಬ ಕನಸಿಗೆ ಇಲ್ಲೊಬ್ಬರು ಕಲಾವಿದರೇ ಉತ್ತರ ಕಂಡುಕೊಂಡಿದ್ದಾರೆ. ಇದು ಸಾಮಾಜಿಕ ಜಾಲ ತಾಣಗಳಲ್ಲಿ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. ಯಕ್ಷಗಾನ ವೃತ್ತಿಪರ ಕಲಾವಿದರೊಬ್ಬರು ಹುಟ್ಟು ಹಾಕಿದ ಅಭಿನೇತ್ರಿ ಸಂಸ್ಥೆ ಮೂಲಕ ಯಕ್ಷಗಾನ ಪ್ರದರ್ಶನ ನಡೆಸಲು ಯೋಜಿಸಿ ಈಗ ಜನರಿದ್ದಲ್ಲೇ ಪ್ರದರ್ಶನ ಕಾಣುತ್ತಿದೆ!
ಏನಿದು ಪ್ರಯೋಗ?: ಇದು ಟಿಕೆಟ್ ಯಕ್ಷಗಾನ ಪ್ರದರ್ಶನದಂತೆ. ಟೆಂಟ್ ಆಟಗಳಲ್ಲಿ ಒಮ್ಮೆ ಟಿಕೆಟ್ ಖರೀದಿಸಿದರೆ ಆ ರಾತ್ರಿ ಮಾತ್ರ ಯಕ್ಷಗಾನ ನೋಡಬಹುದು. ಆದರೆ, ಇಲ್ಲಿ ಹಾಗಲ್ಲ, ಒಮ್ಮೆ ಒಂದು ಟಿಕೆಟ್ ಖರೀದಿಸಿದರೆ ತಿಂಗಳುಗಳ ಕಾಲ ಎಷ್ಟು ಸಲ ಬೇಕಾದರೂ ನೋಡಬಹುದು. ಮೊಬೈಲ್ ಮೂಲಕ ಹಣ ಪಾವತಿಸಿದರೆ ಯಕ್ಷಗಾನ ಬೆರಳತುದಿಗೆ ಬರಲಿದೆ.
ಈ ಆನ್‌ಲೈನ್ ಟಿಕೆಟ್ ಪ್ರಯೋಗ ಈಗ ರಾಜ್ಯ, ಹೊರ ರಾಜ್ಯ, ಹೊರ ದೇಶದ ಕಲಾವಿದರ ಮನ ತಣಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗುತ್ತಿದೆ. ಕಳೆದ ಜುಲೈ 12ರಂದು ಪ್ರಥಮ ಪ್ರದರ್ಶನ ಕಂಡ ಈ ಯಕ್ಷಗಾನ ವೀಕ್ಷಣೆಗೆ 130 ರೂ. ಪಾವತಿಸಿದರೆ ಆ.14ರ ತನಕ ಒಂದು ತಿಂಗಳ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ವೀಕ್ಷಿಸಲು ಅವಕಾಶ ನೀಡಲಾಗಿದೆ. ತೆಂಕು ಬಡಗಿನ ಬೆಡಗಿನ ಯಕ್ಷಗಾನ ಸುದರ್ಶನ ವಿಜಯ ಈಗಾಗಲೇ ಎರಡೇ ದಿನದಲ್ಲಿ ಇನ್ನೂರಕ್ಕೂ ಅಧಿಕ ಪ್ರೇಕ್ಷಕರ ಮನ ತಣಿಸುತ್ತಿದೆ.
ತೆಂಕು ಬಡಗಿನ ಬೆಡಗು: ಯಕ್ಷಗಾನದ ವೃತ್ತಿಪರ ಕಲಾವಿದ ನೀಲಕೋಡ ಶಂಕರ ಹೆಗಡೆ ಅವರ ಕನಸಿನ ಕೂಸು ಅಭಿನೇತ್ರಿ ಕಲಾ ಸಂಸ್ಥೆ. ಈ ಸಂಸ್ಥೆ ಮೂಲಕ ಆರಂಭಿಸಲಾದ ಈ ಡಿಜಿಟಲ್ ಯಕ್ಷಗಾನ ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೇ ನೀಡುತ್ತಿರುವ ಶಾಲೆ ಡಾಟ್ ಕಾಮ್ (
https://shaale.com/live/sudarshanavijay) ನಲ್ಲಿ ಇದೀಗ ಪ್ರಥಮ ಪ್ರಯೋಗ ಯಶಸ್ಸಿಯಾಗ ಓಡುತ್ತಿದೆ. ಈಗ ಪ್ರದರ್ಶನ ಕಾಣುತ್ತಿರುವ ಸುದರ್ಶನ ವಿಜಯ ಯಕ್ಷಗಾನಕ್ಕೆ ತೆಂಕು ಬಡಗಿನ ಕಲಾವಿದರ ಮಿಳಿತವಿದೆ.
ಕಾವ್ಯಶ್ರೀ ಅಜೇರು, ಶಂಕರ ಬ್ರಹ್ಮೂರು, ಸುನೀಲ್ ಭಂಡಾರಿ, ಪ್ರಸನ್ನ ಹೆಗ್ಗಾರು, ಕೃಷ್ಣಪ್ರಕಾಶ ಉಳಿತ್ತಾಯ, ಶ್ರೀನಿವಾಸ ಪ್ರಭು, ಶ್ರೀಪತಿ ಅಜೇರ ಅವರ ಹಿಮ್ಮೇಳದ ಯಕ್ಷಗಾನದಲ್ಲಿ ವಾಸುದೇವ ರಂಗ ಭಟ್ಟ, ಪ್ರದೀಪ ಆಮಗ, ನೀಲ್ಕೋಡ ಶಂಕರ ಹೆಗಡೆ, ನಾಗೇಂದ್ರ ಮೂರೂರು, ಮಾಗೋಡ ಅಣ್ಣಪ್ಪ ಇತರರು ಮುಮ್ಮೇಳದಲ್ಲಿದ್ದಾರೆ. ಇನ್ನೊಂದಕ್ಕೆ ಸಿದ್ಧತೆ: ಪ್ರಥಮ ಪ್ರಯೋಗಕ್ಕೆ ಜನ ಮನ್ನಣೆ ಸಿಗುತ್ತಿರುವ ಬೆನ್ನಲ್ಲೇ ಇನ್ನೊಂದು ಯಕ್ಷಗಾನ ಪ್ರದರ್ಶನಕ್ಕೆ ನೀಲ್ಕೊಡ ಮುಂದಾಗಿದ್ದಾರೆ. ಡಾ| ವಸಂತ ಭಾರಧ್ವಜ ಕಬ್ಬಿನಾಲೆ ಅವರು ಬರೆದ ಅಹಿಂಸಾಶ್ವಮೇಧ ಹಾಗೂ ಭಾನುಮತಿ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆ. 15ರಿಂದ ಈ ಪ್ರದರ್ಶನ ಶಾಲೆ ಡಾಟ್ ಕಾಮ್ ಮೂಲಕ ಪ್ರೇಕ್ಷಕರ ಕೈಗೆ ಸಿಗಲಿದೆ. ಒಂದು ಪ್ರದರ್ಶನ ಸಂಪೂರ್ಣ ಯಶಸ್ವಿಗೆ ಕನಿಷ್ಠ 500 ಜನರ ವೀಕ್ಷಣೆ ಆಗಬೇಕು. ಹಾಗೆ ಆಗುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ನೀಲ್ಕೋಡ ಶಂಕರ ಹೆಗಡೆ.
ಇದೊಂದು ಹೊಸ ಪ್ರಯೋಗ. ಕೋವಿಡ್ ಕಷ್ಟ ಎದುರಿಸಲು, ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ಆರಂಭಿಸಲಾಗಿದೆ. ಕಲಾಪ್ರೇಮಿಗಳ ಪ್ರತಿಕ್ರಿಯೆ ಚೆನ್ನಾಗಿದೆ.-
ಶಂಕರ ಹೆಗಡೆ ನೀಲ್ಕೋಡ, ಅಭಿನೇತ್ರಿ ಮುಖ್ಯಸ್ಥ
ಕೋವಿಡ್ ಕಷ್ಟ ಯಕ್ಷಗಾನ ಕಲಾವಿದರಿಗೂ ಕಾಡುತ್ತಿದೆ. ಗೆಜ್ಜೆ ಕಟ್ಟಲಾಗದ ನೋವಿನ ಜೊತೆಗೆ ಬದುಕಿಗೂ ಸಂಕಷ್ಟವಾದ ವೇಳೆಯಲ್ಲಿ ಈ ಪ್ರಯೋಗ ಹೊಸ ಭರವಸೆ ಮೂಡಿಸುತ್ತಿದೆ. –
ನಾಗೇಂದ್ರ ಮೂರೂರು, ಕಲಾವಿದ
–ರಾಘವೇಂದ್ರ ಬೆಟ್ಟಕೊಪ್ಪ