Advertisement

ಡಿಜಿಟಲ್‌ ಪೇಮೆಂಟ್‌; ಪರಿಹಾರ ಸಿಕ್ಕೀತೇ?

12:30 AM Feb 18, 2019 | |

ಇತ್ತ ಎಟಿಎಂನಲ್ಲಿ ನಾಲ್ಕು ಸಾವಿರ ಪಡೆಯಲು ಕಾರ್ಡ್‌ ತುರುಕಿದವನಿಗೆ ನೋಟು ಎಣಿಕೆಯ ಶಬ್ಧ ಮಾತ್ರ ಕೇಳಿಸುತ್ತದೆ. ಹಣ ಬರಲಿಲ್ಲ. ಸುಮಾರು 30 ನಿಮಿಷ ಅಲ್ಲೇ ಇದ್ದರೂ ಹಣ ಸಿಕ್ಕದ್ದರಿಂದ ಇನ್ನೊಮ್ಮೆ ಅದೇ ಮೊತ್ತಕ್ಕೆ ಯತ್ನ ಮಾಡಿದರೂ ಬರಿಗೈಯಲ್ಲಿ ಮನೆಗೆ ತೆರಳಬೇಕಾಯಿತು. ಮರುದಿನ ಖಾತೆ ಪರಿಶೀಲಿಸಿದಾಗ 8 ಸಾವಿರ ಮಾಯ! ಬ್ಯಾಂಕ್‌ಗೆ ದೂರು ನೀಡಿದಾಗ, ಅವರು ದಾಖಲೆ ನೋಡಿ- ನಿಮ್ಮ ವ್ಯವಹಾರ ಯಶಸ್ವಿಯಾಗಿ ನಡೆದಿದೆಯಲ್ಲ ಎನ್ನುತ್ತಾರೆ ! 

Advertisement

ಇಂದು ಪ್ರತಿ ನಗರದಲ್ಲಿ ಕೇಳಿಬರುವ ಘಟನೆಗಳ ಕೆಲವು ತುಣುಕುಗಳಿವು. ವಾಹನ ಖರೀದಿಗೆ ಹೊರಟವನೊಬ್ಬನಿಗೆ ಪೇಟಿಎಂನಿಂದ ಪಾವತಿ ಮಾಡಿದರೆ ಐದು ಸಾವಿರ ರೂ.ಗಳ ಕ್ಯಾಷ್‌ಬ್ಯಾಕ್‌ ಎಂಬ ಆಫ‌ರ್‌ ಇದ್ದುದರಿಂದ ಡೆಬಿಟ್‌ ಕಾರ್ಡ್‌ ಬಳಸಿದರೆ ವ್ಯವಹಾರ ಫ‌ಲ ಎಂಬ ಸಂದೇಶ ಲಭಿಸುತ್ತದೆ. ಆದರೆ ಖಾತೆಯಿಂದ 50 ಸಾವಿರ ರೂ. ಮಾಯ! ಸುಮಾರು ಮೂರು ತಿಂಗಳು ಬ್ಯಾಂಕ್‌ಗೆ ಅಲೆದಾಡಿದ ಮೇಲೆ 50 ಸಾವಿರದ ಅಸಲು ಮಾತ್ರ ಸಿಕ್ಕಿದೆ. ಇತ್ತ ಎಟಿಎಂನಲ್ಲಿ ನಾಲ್ಕು ಸಾವಿರ ಪಡೆಯಲು ಕಾರ್ಡ್‌ ತುರುಕಿದವನಿಗೆ ನೋಟು ಎಣಿಕೆಯ ಶಬ್ಧ ಮಾತ್ರ ಕೇಳಿಸುತ್ತದೆ. ಹಣ ಬರಲಿಲ್ಲ. ಸುಮಾರು 30 ನಿಮಿಷ ಅಲ್ಲೇ ಇದ್ದರೂ ಹಣ ಸಿಕ್ಕದ್ದರಿಂದ ಇನ್ನೊಮ್ಮೆ ಅದೇ ಮೊತ್ತಕ್ಕೆ ಯತ್ನ ಮಾಡಿದರೂ ಬರಿಗೈಯಲ್ಲಿ ಮನೆಗೆ ತೆರಳಬೇಕಾಯಿತು. ಮರುದಿನ ಖಾತೆ ಪರಿಶೀಲಿಸಿದಾಗ 8 ಸಾವಿರ ಮಾಯ! ಬ್ಯಾಂಕ್‌ಗೆ ದೂರು ನೀಡಿದಾಗ, ಅವರು ದಾಖಲೆ ನೋಡಿ- ನಿಮ್ಮ ವ್ಯವಹಾರ ಯಶಸ್ವಿಯಾಗಿ ನಡೆದಿದೆಯಲ್ಲ ಎನ್ನುತ್ತಾರೆ ! ಅನ್ಯ ಎಟಿಎಂನಲ್ಲಿ ಮಾಸಿಕ ಐದು ವ್ಯವಹಾರ ಮಾತ್ರ ಉಚಿತ ಎಂಬ ಕಠಿಣ ನಿಯಮಗಳಿರುವ ಈ ಕಾಲದಲ್ಲಿ ಎಟಿಎಂ ಮಿಷನ್‌ ಒಂದು ಕ್ಯಾಷ್‌ ವಿತ್‌ಡ್ರಾವಲ್‌ಗೆ ಬೆರಳು ತಾಕಿಸಿದರೆ ಬಾಲೆನ್ಸ್‌ ಮಾಹಿತಿಯ ರಸೀದಿ ಬರುತ್ತದೆ. ಯಂತ್ರದ ಪ್ರಮಾದದ ಪ್ರತಿ ವಹಿವಾಟಿಗೆ ಗ್ರಾಹಕ 28 ರೂ. ದಂಡ ತೆರುವ ಸ್ಥಿತಿಗೆ ಪರಿಹಾರ ಬೇಡವೇ?

ಹೊಸ ವರ್ಷಕ್ಕೆ ಹೊಸ ವ್ಯವಸ್ಥೆ!
ಇಂತಹ ಸಮಸ್ಯೆ ಬಗೆಹರಿಸಿಕೊಳ್ಳಲು ಬ್ಯಾಂಕಿನ ಆಂತರಿಕ ದೂರು ಪರಿಹಾರ ವ್ಯವಸ್ಥ ಇದೆ. ಬ್ಯಾಂಕಿಂಗ್‌ ಒಂಬುಡ್ಸ್‌ಮನ್‌ ಮಾದರಿಯ ಸೌಲಭ್ಯವಿದೆ. ಗ್ರಾಹಕ ದೂರು ಪರಿಹಾರ ನ್ಯಾಯಾಲಯಗಳು ಹಾಗೂ ಇತರ ಸಾಂಪ್ರದಾಯಿಕ ನ್ಯಾಯಾಲಯಗಳ ಸಹಾಯವನ್ನು ಪಡೆಯುವುದು ಸಾಧ್ಯವಿದೆ. ದಾಖಲೆಗಳೆಲ್ಲ ಸೇವಾ ನ್ಯೂನ್ಯತೆ ಎಸಗಿದವರ ಬಳಿಯಲ್ಲಿಯೇ ಇರುವಾಗ ನ್ಯಾಯ ಪಡೆಯುವುದು ಸುಲಭದ ಕೆಲಸವಲ್ಲ. ದೇಶದ ರಿಸರ್ವ್‌ ಬ್ಯಾಂಕ್‌ ಈ ರೀತಿ ಡಿಜಿಟಲ್‌ ಮಾದರಿಯ ವ್ಯವಹಾರದ ಲೋಪದೋಷಗಳ ವಿಚಾರದಲ್ಲಿ ಗ್ರಾಹಕರಿಗೆ ನ್ಯಾಯ ಒದಗಿಸಲು ಹೊಚ್ಚಹೊಸದಾದ “ಡಿಜಿಟಲ್‌ ಒಂಬುಡ್ಸ್‌ಮನ್‌’ ವ್ಯವಸ್ಥೆಯನ್ನು ಇದೇ ಜನವರಿ 31ರಿಂದ ದೇಶದಾದ್ಯಂತ ಅನ್ವಯವಾಗುವಂತೆ ಜಾರಿಗೊಳಿಸಿದೆ.

2007ರ ಪೇಮೆಂಟ್‌ ಮತ್ತು ಸೆಟಲ್‌ಮೆಂಟ್‌ ಸಿಸ್ಟಂ ಕಾಯ್ದೆಯ ಸೆಕ್ಷನ್‌ 18ರಲ್ಲಿ ದತ್ತವಾದ ಅಧಿಕಾರವನ್ನು ಬಳಸಿ ಡಿಜಿಟಲ್‌ ಒಂಬುಡ್ಸ್‌ಮನ್‌ಗೆ ಶ್ರೀಕಾರ ಹಾಕಲಾಗಿದೆ. ರಿಸರ್ವ್‌ ಬ್ಯಾಂಕ್‌ ತನ್ನ ಮುಖ್ಯ ಜನರಲ್‌ ಮ್ಯಾನೇಜರ್‌ ಅಥವಾ ಜನರಲ್‌ ಮ್ಯಾನೇಜರ್‌ ಅಧಿಕಾರಿಯನ್ನು ಗರಿಷ್ಠ ಮೂರು ವರ್ಷಗಳ ಅವಧಿಗೆ ಒಂಬುಡ್ಸ್‌ಮನ್‌ ಹುದ್ದೆಗೆ ನೇಮಕ ಮಾಡುತ್ತದೆ. ಒಂಬುಡ್ಸ್‌ಮನ್‌ಗಳ ಸ್ಥಳ ಹಾಗೂ ಕಾರ್ಯಕ್ಷೇತ್ರವನ್ನು ಖುದ್ದು ಆರ್‌ಬಿಐ ನಿಗದಿಪಡಿಸುತ್ತದೆ. ಇಡೀ ಡಿಜಿಟಲ್‌ ಒಂಬುಡ್ಸ್‌ಮನ್‌ನ ಕಚೇರಿ, ಸಿಬ್ಬಂದಿ ವೇತನ, ಇತರ ವೆಚ್ಚಗಳನ್ನು ನಿರ್ವಹಿಸುವುದು ಕೂಡ ಆರ್‌ಬಿಐ. ಪ್ರತಿ ವರ್ಷದ ಜೂನ್‌ 30ಕ್ಕೆ ಹಿಂದಿನ ಆರ್ಥಿಕ ವರ್ಷದ ಖರ್ಚು ವೆಚ್ಚ, ದೂರು ನಿರ್ವಹಣೆಯ ಸಂಪೂರ್ಣ ಮಾಹಿತಿಯನ್ನು ಡಿಓ ಆರ್‌ಬಿಐಗೆ ಸಲ್ಲಿಸಬೇಕು. 

ಗ್ರಾಹಕರಿಗೆ ಸಂಪೂರ್ಣ ಉಚಿತವಾಗಿ ಲಭ್ಯವಿರುವ ವ್ಯವಸ್ಥೆಯಲ್ಲಿ ಒಂಬುಡ್ಸ್‌ಮನ್‌ಗೆ ಮೂರು ರೀತಿಯಲ್ಲಿ ದೂರುಗಳನ್ನು ನಿರ್ವಹಿಸುವ ಅಧಿಕಾರವನ್ನು ಕೊಡಲಾಗಿದೆ. ಎರಡು ಪಕ್ಷದವರನ್ನೂ ಕೂರಿಸಿಕೊಂಡು ರಾಜಿ ಒಪ್ಪಂದಕ್ಕೆ ಬರುವಂತೆ ಮಾಡಬಹುದು. ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸಬಹುದು ಅಥವಾ ದೂರಿನ ಹಿನ್ನೆಲೆಯಲ್ಲಿ ಪರಿಹಾರ ಒದಗಿಸುವ ಅವಕಾಶವನ್ನೂ ಕೊಡಲಾಗಿದೆ. ಡಿಜಿಟಲ್‌ ವ್ಯವಹಾರದಲ್ಲಿ ಹಣವನ್ನು ವಾಪಾಸು ಖಾತೆಗೆ ಮರಳಿಸುವಲ್ಲಿ ಆದ ವಿಳಂಬ, ವ್ಯಾಲೆಟ್‌ ಅಥವಾ ಕಾರ್ಡ್‌ಗಳಿಗೆ ಮರಳದ ಹಣ, ಮೊಬೈಲ್‌ ಆನ್‌ಲೈನ್‌ ವಹಿವಾಟು ವೈಫ‌ಲ್ಯ ತರಹದ ಎಲ್ಲ ಡಿಜಿಟಲ್‌ ವಹಿವಾಟಿನ ಸೇವಾ ವೈಫ‌ಲ್ಯಗಳ ವಿರುದ್ಧವಾಗಿ ಇಲ್ಲಿ ದೂರಬಹುದು.

Advertisement

ನಿಗದಿತ ಅರ್ಜಿಯಲ್ಲಿ ದೂರು
ಪ್ರತಿ ಬ್ಯಾಂಕ್‌, ದೂರು ನಿರ್ವಹಣೆಗೆ ನೇಮಕ ಮಾಡಿರುವ ನೋಡಲ್‌ ಆಫೀಸರ್‌, ಆಂತರಿಕ ಪರಿಹಾರ ವ್ಯವಸ್ಥೆಯ ಸಂಪೂರ್ಣ ವಿವರವನ್ನು ತಮ್ಮ ಶಾಖೆಗಳಲ್ಲಿ ಪ್ರದರ್ಶಿಸುತ್ತಿರಬೇಕು. ಅದೇ ರೀತಿ ಶಾಖೆ ಹಾಗೂ ವೆಬ್‌ನಲ್ಲಿ ಡಿಜಿಟಲ್‌ ವ್ಯವಹಾರದ ಶುಲ್ಕಗಳ ವಿವರವನ್ನು ಘೋಷಿಸಿರುವುದು ಕೂಡ ಕಡ್ಡಾಯ. ಬ್ಯಾಂಕ್‌ನ ಆಂತರಿಕ ದೂರು ನಿರ್ವಹಣೆ ವ್ಯವಸ್ಥೆಗೆ ಕೊಟ್ಟ ದೂರಿಗೆ ಪರಿಹಾರ ಹೇಳದಿದ್ದರೆ, ಅವಧಿ ಮೀರಿದ್ದರೆ, ಪರಿಹಾರ ತೃಪ್ತಿದಾಯಕವಲ್ಲದಿದ್ದರೆ ಡಿಓಗೆ ಮೊರೆಹೋಗಬಹುದು. ನಿಗದಿತ ಅರ್ಜಿ ಸಮೂನೆಯಲ್ಲಿ ದೂರು ಸಲ್ಲಿಸುವ ಗ್ರಾಹಕ ತನ್ನ ಪರವಾಗಿ ಅನ್ಯ ವ್ಯಕ್ತಿಯನ್ನು ತನ್ನ ಪರವಾಗಿ ವಕಾಲತ್ತು ವಹಿಸುವಂತೆ ತೀರ್ಮಾನಿಸಲು ಅವಕಾಶ ಕೊಡಲಾಗಿದೆ. ಬ್ಯಾಂಕ್‌ ಒದಗಿಸಿದ ಪರಿಹಾರ ದಿನಾಂಕದಿಂದ ಒಂದು ವರ್ಷದೊಳಗೆ ದೂರು ಸಲ್ಲಿಸಲು ಕಾಲಮಿತಿ ಹಾಕಲಾಗಿದೆ. ಒಂದೊಮ್ಮೆ 1963ರ ಭಾರತೀಯ ಕಾಲಮಿತಿ ಕಾಯ್ದೆಯಲ್ಲಿ ಸೂಚಿಸಿದಂತೆ ಸಮಿತಿ ಉಲ್ಲಂಘನೆಯನ್ನು ಪಕ್ಕಕ್ಕೆ ಸರಿಸಿ ವಿಶೇಷ ಅವಕಾಶ ಕೊಡುವ ಕೋರಿಕೆಯನ್ನು ಮನ್ನಿಸಲು ಒಂಬುಡ್ಸ್‌ಮನ್‌ ಸ್ವತಂತ್ರ. ಡಿಓಗೆ ಆನ್‌ಲೈನ್‌ನಲ್ಲಿ ದೂರು ದಾಖಲಿಸಲು ಅವಕಾಶದೆ. ಡಿಓಗೆ ಸಲ್ಲಿಸುವ ಅರ್ಜಿ ನಮೂನೆ ಈ ವೆಬ್‌ ವಿಳಾಸದಲ್ಲಿ ಲಭ್ಯವಿದೆ.
ಕ್ಲಿಕ್‌ ಮಾಡಿ… https://rbidocs.rbi.org.in/rdocs/Content/PDFs/COMPLAINT31012019.pdf

ಕೆಲವು ಪ್ರಕರಣಗಳನ್ನು ಡಿಓ ಪರಿಗಣಿಸುವುದಿಲ್ಲ. ಈಗಾಗಲೇ ಇತ್ಯರ್ಥವಾದ ಪ್ರಕರಣಗಳ ಮರುಪರಿಶೀಲನೆಗೆ ಅನುಮತಿ ಇಲ್ಲ. ಬೇರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೇ ಪ್ರಕರಣದಲ್ಲಿ ನ್ಯಾಯ ಸಲ್ಲಿಕೆಗೆ ದೂರು ದಾಖಲಾಗಿದ್ದರೆ ಇಲ್ಲಿ ಅದನ್ನು ಪರಿಗಣಿಸುವುದಿಲ್ಲ. ಪೇಮೆಂಟ್‌ ಮತ್ತು ಸೆಟಲ್‌ಮೆಂಟ್‌ ಸಿಸ್ಟಂ ಕಾಯ್ದೆಯ ಸೆಕ್ಷನ್‌ 24ರೊಳಗೆ ದೂರು ಬರುವಂತಿರಬಾರದು. ಗ್ರಾಹಕರಿಬ್ಬರ ನಡುನ ವ್ಯವಹಾರ ವಾದ‌ ಡಿಜಿಟಲ್‌ ಒಂಬುಡ್ಸ್‌ಮನ್‌ ವ್ಯಾಪ್ತಿಯ ಹೊರಗೆ ನಿಲ್ಲುತ್ತದೆ. 

ಒಂದು ಲಕ್ಷ ಪರಿಹಾರ!
ಡಿಓ ಅರ್ಜಿ ಸ್ವೀಕರಿಸಿದ ತಕ್ಷಣ ಆರೋಪಿ ಬ್ಯಾಂಕಿಂಗ್‌ ವ್ಯವಸ್ಥೆಗೆ ನೋಟಿಸ್‌ ಜಾರಿ ಮಾಡುತ್ತದೆ. ಈ ಸಂದರ್ಭದಲ್ಲೂ ಸಹ ಬ್ಯಾಂಕ್‌ ರಾಜಿ ಸೂತ್ರವನ್ನು ಮುಂದಿಟ್ಟು ಗ್ರಾಹಕರನ್ನು ಒಪ್ಪಿಸಬಹುದು. ಈ ಕುರಿತು ಚಟುವಟಿಕೆ ನಡೆಸಿ ಒಂದು ತಿಂಗಳ ಅವಧಿಯೊಳಗೆ ಡಿಓಗೆ ಮಾಹಿತಿ ನೀಡದಿದ್ದರೆ ಡಿಜಿಟಲ್‌ ಒಂಬುಡ್ಸ್‌ಮನ್‌ ಸಂತ್ರಸ್ತ ದೂರುದಾರರಿಗೆ ಪರಿಹಾರ ಘೋಷಿಸುವ ಮಾರ್ಗ ತೆರೆದಂತೆ. ಒಂದು ಲಕ್ಷ ರೂ. ಮೊತ್ತ ಮೀರದ ದಂಡ ವಿಧಿಸಲು ಡಿಓಗೆ ಶಕ್ತಿ ನೀಡಲಾಗಿದೆ. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಹೆಚ್ಚಿನ ದಾಖಲೆಗಳನ್ನು ಮಂಡಿಸುವಂತೆ ಕೇಳುವ, ಸ್ಪಷ್ಟನೆ ಕೊಡಲು ಸೂಚಿಸುವ ಅಧಿಕಾರ ಡಿಓಗಿದೆ. ತೀರ್ಪಿನ ಪ್ರತಿಯನ್ನು ಡಿಓ ಅರ್ಜಿದಾರ ಹಾಗೂ ಆರೋಪಿಗೆ ಉಚಿತವಾಗಿ ಒದಗಿಸುತ್ತದೆ. 

ಒಂದೊಮ್ಮೆ ಪರಿಹಾರದ ತೀರ್ಪು ನೀಡಿದ ಸಂದರ್ಭದಲ್ಲಿ ಅದನ್ನು ಒಪ್ಪಿಕೊಳ್ಳುವ ಅರ್ಜಿದಾರ ತನ್ನ ಡಿಜಿಟಲ್‌ ವ್ಯವಹಾರದ ವ್ಯವಸ್ಥಾಪಕನಿಗೆ ತನ್ನ ಅಂಗೀಕಾರ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಈ ಅಂಗೀಕಾರ ಪತ್ರ ಸಲ್ಲಿಕೆಯಾದ ಒಂದು ತಿಂಗಳಿನಲ್ಲಿ ಪರಿಹಾರ ಆದೇಶವನ್ನು ಬ್ಯಾಂಕ್‌ ಪಾಲಿಸಬಹುದು. ವಿಶೇಷವೆಂದರೆ,  ಈ ಒಂಬುಡ್ಸ್‌ಮನ್‌ ವ್ಯವಸ್ಥೆಯಲ್ಲಿ ಆರೋಪಿತ ಸೇವಾ ವ್ಯವಸ್ಥಾಪಕರಿಗೂ ಮೇಲ್ಮನವಿಗೆ ಅವಕಾಶ ಕೊಡಲಾಗಿದೆ. ಅರ್ಜಿದಾರನಿಗೂ ಪರಿಹಾರ ಸಮಂಜಸವಾಗದಿದ್ದರೆ 30 ದಿನಗಳೊಳಗೆ ಮೇಲ್ಮನವಿ ಸಲ್ಲಿಸುವ ಸೌಕರ್ಯವಿದ್ದು, ಅವರು ವಿಶೇಷ ಸಂದರ್ಭವನ್ನು ಮನದಟ್ಟು ಮಾಡಿ,  ಇನ್ನೂ 30 ದಿನಗಳ ಹೆಚ್ಚುವರಿ ಅವಧಿಯನ್ನು ಪಡೆಯಬಹುದು. ಬ್ಯಾಂಕಿಂಗ್‌ ವ್ಯವಸ್ಥೆಯ ಶಾಖೆ ಮೇಲ್ಮನವಿ ಸಲ್ಲಿಸುವ ಮುನ್ನ ಅದು ತನ್ನ ಛೇರ್‌ಮನ್‌, ಅವರ ಗೈರುಹಾಜರಿಯಲ್ಲಿ ಎಂಡಿ, ವ್ಯವಸ್ಥಾಪಕ ನಿರ್ದೇಶಕರು ಅಥವಾ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಇಓ ಅಥವಾ ಈ ಹುದ್ದೆಗಳಿಗೆ ಸರಿಸಮನಾದ ಅಧಿಕಾರಿಯಿಂದ ಅನುಮತಿ ಪಡೆದಿರುವುದನ್ನು ಖಚಿತಪಡಿಸಬೇಕಾಗುತ್ತದೆ.

ರಿಸರ್ವ್‌ ಬ್ಯಾಂಕ್‌ ಡಿಓ ಅರ್ಥಾತ್‌ ಓಎಸ್‌ಡಿಟಿ ವ್ಯವಸ್ಥೆಯನ್ನು 19 ರಾಜ್ಯಗಳ 21 ಸ್ಥಳಗಳಲ್ಲಿ ಈಗಾಗಲೇ ಲಾಗೂ ಮಾಡಿದೆ. ಬಹುತೇಕ ರಾಜ್ಯಗಳ ರಾಜಧಾನಿಗಳಲ್ಲಿ ಡಿಓಗಳನ್ನು ಸ್ಥಾಪಿಸಲಾಗಿದೆ. 2018ರ ಡಿಸೆಂಬರ್‌ನಲ್ಲಿ ರೂಪಗೊಂಡ ವ್ಯವಸ್ಥೆ ಕ್ಷಿಪ್ರವಾಗಿ ಜಾರಿಗೂ ಬಂದಿದೆ. ಸಾಂಪ್ರದಾಯಿಕ ಬ್ಯಾಂಕಿಂಗ್‌ ಒಂಬುಡ್ಸ್‌ಮನ್‌ನಲ್ಲಿ ಗ್ರಾಹಕರ ದೂರು ಮತ್ತು ಪರಿಹಾರ ವ್ಯವಸ್ಥೆ ಈವರೆಗೆ ನಿರಾಶಾದಾಯಕವಾಗಿಯೇ ಇದೆ. ಇದರ ವೈಫ‌ಲ್ಯದ ಪ್ರಭಾವ ಡಿಜಿಟಲ್‌ ಒಬುಡ್ಸ$Õಮನ್‌ ವ್ಯವಸ್ಥೆಯನ್ನು ಪ್ರಭಾವಿಸಲಿದೆ ಎಂದು ಹಲವು ಗ್ರಾಹಕ ತಜ್ಞರು ಅನುಮಾನ ವ್ಯಕ್ತಪಡಿಸುವಂತಾಗಿದೆ.

– ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next