Advertisement

ಪ್ರತಿ ಆಸ್ತಿಗೂ ಡಿಜಿಟಲ್‌ ಸಂಖ್ಯೆ ತೀರ್ಮಾನ

11:15 AM Nov 11, 2017 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸ್ತಿಗಳ ನಿಖರ ಮಾಹಿತಿ ಪಡೆದು ಆಸ್ತಿ ತೆರಿಗೆ ಸಂಗ್ರಹ ವೃದ್ಧಿಸಿಕೊಳ್ಳಲು ಮುಂದಾಗಿರುವ ಬಿಬಿಎಂಪಿ, ತನ್ನ ವ್ಯಾಪ್ತಿಯಲ್ಲಿನ ಎಲ್ಲ ಆಸ್ತಿಗಳು ಹಾಗೂ ರಸ್ತೆಗಳಿಗೆ ಡಿಜಿಟಲ್‌ ಸಂಖ್ಯೆ ನೀಡಲು ತೀರ್ಮಾನಿಸಿದೆ.

Advertisement

ಸ್ಮಾರ್ಟ್‌ ಸಿಟಿ ಯೋಜನೆಗೆ ಪೂರಕವಾಗಿ ನಗರದ ಎಲ್ಲ ಆಸ್ತಿಗಳು ಮತ್ತು ರಸ್ತೆಗಳಿಗೆ ಡಿಜಿಟಲ್‌ ಸಂಖ್ಯೆ ನೀಡಲು ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಡಿಜಿಟಲ್‌ ಸಂಖ್ಯೆ ಜಿಐಎಸ್‌ ಪ್ಲಾಟ್‌ ಫಾರಂ ಆಧಾರಿತವಾಗಿರಲಿದ್ದು, ಆ ಮೂಲಕ ಪಾಲಿಕೆಯಲ್ಲಿನ ಆಸ್ತಿಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ತಂದು ತೆರಿಗೆ ಸಂಗ್ರಹಿಸುವುದು ಪಾಲಿಕೆಯ ಗುರಿಯಾಗಿದೆ.

ಆಸ್ತಿಗಳು ಹಾಗೂ ರಸ್ತೆಗಳಿಗೆ ಪಿಐಡಿ ಸಂಖ್ಯೆ ನೀಡುವುದರಿಂದ ತೆರಿಗೆ ವ್ಯಾಪ್ತಿಯಿಂದ ಆಸ್ತಿಗಳನ್ನ ತಪ್ಪಿಸಲು ಸಾಧ್ಯವಾಗುವುದಿಲ್ಲ. ಜತೆಗೆ ಆಸ್ತಿಯ ಸಂಖ್ಯೆಗಳು ಪುನರಾವರ್ತನೆ ಆಗುವುದಿಲ್ಲ ಮತ್ತು ಪಾಲಿಕೆಯಲ್ಲಿನ ಎಲ್ಲ ಆಸ್ತಿಗಳಿಂದ ಸಮರ್ಪಕವಾಗಿ ಆಸ್ತಿ ತೆರಿಗೆ ಸಂಗ್ರಹಿಸಬಹುದು. ಜತೆಗೆ ತೆರಿಗೆ ಸಂಗ್ರಹದಲ್ಲಿ ಪಾರದರ್ಶಕ ವ್ಯವಸ್ಥೆ ತರಬಹುದು ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್‌ ತಿಳಿಸಿದ್ದಾರೆ. 

ಡಿಜಿಟಲ್‌ ಸಂಖ್ಯೆ ನೀಡುವುದರಿಂದ ಯಾವುದೇ ರೀತಿಯ ದೂರುಗಳು ಬಂದಲ್ಲಿ ಕನಿಷ್ಠ ನಿಗದಿತ ಸುತ್ತಳತೆಯಲ್ಲಿ ಆಸ್ತಿಯನ್ನು ನಿಖರವಾಗಿ ಗುರುತಿಸಬಹುದು. ತುರ್ತು ಸಂದರ್ಭದಲ್ಲಿ ಅತ್ಯಂತ ಶೀಘ್ರವಾಗಿ ನಿಗದಿತ ಸ್ಥಳಕ್ಕೆ ತಲುಪಲು ಸಹಾಯವಾಗುವುದರೊಂದಿಗೆ, ಇತರೆ ಸ್ಥಳೀಯ ಸಂಸ್ಥೆಗಳು ಸಹ ಸಂಖ್ಯೆ ಬಳಸಿ ಆಯಾ ಇಲಾಖೆಯ ಶುಲ್ಕ ಹಾಗೂ ತೆರಿಗೆ ಸಂಗ್ರಹಿಸಬಹದು ಎಂದು ಹೇಳುತ್ತಾರೆ. 

ಆಸ್ತಿಗಳಿಗೆ ಡಿಜಿಟಲ್‌ ಸಂಖ್ಯೆ ನೀಡಿ ಆಯಾ ಆಸ್ತಿಗಳ ಮಾಲೀಕರು/ವಾರಸುದಾರರಿಗೆ ಡಿಜಿಟಲ್‌ ಕಾರ್ಡ್‌ ನೀಡುವ ಯೋಜನೆಯಿದ್ದು, ಇದರಿಂದ ನಗರದಲ್ಲಿ ಸಂಚರಿಸಲು ಉಪಯುಕ್ತ ಕಾರ್ಡ್‌ ಬಳಕೆಗೆ ಮತ್ತು ಏಕ ಮಾತ್ರ ಕಾರ್ಡ್‌ ಆಗಿ ಅದನ್ನು ಬಳಸಬಹುದು. ಹೀಗಾಗಿ ಪಾಲಿಕೆಯಲ್ಲಿನ ಎಲ್ಲ ಆಸ್ತಿಗಳು ಹಾಗೂ ರಸ್ತೆಗಳಿಗೆ ಡಿಜಿಟಲ್‌ ಸಂಖ್ಯೆ ನೀಡಲು ಸ್ಥಾಯಿ ಸಮಿತಿಯಿಂದ ಸ್ವಯಂ ಪ್ರೇರಿತ ನಿರ್ಣಯ ಕೈಗೊಂಡಿದ್ದು, ಡಿಜಿಟಲ್‌ ಸಂಖ್ಯೆ ನೀಡುವ ಕಾರ್ಯಕ್ಕೆ ಆಯುಕ್ತರು ಚಾಲನೆ ನೀಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

14 ಕಟ್ಟಡಗಳಿಂದ 56.83 ಕೋಟಿ ವಂಚನೆ: ಪಾಲಿಕೆಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ (ಎಸ್‌ಎಎಸ್‌) ಅಡಿಯಲ್ಲಿ ತಪ್ಪು ಆಸ್ತಿ ವಿವರ ನೀಡಿರುವ ಕಟ್ಟಡಗಳ ಪತ್ತೆಗಾಗಿ ಸುಮಾರು 80 ಕಟ್ಟಡಗಳನ್ನು ಟೋಟಲ್‌ ಸ್ಟೇಷನ್‌ ಸರ್ವೆಗೆ ಒಳಪಡಿಸಲಾಗಿದೆ. ಆ ಪೈಕಿ 14 ಕಟ್ಟಡಗಳ ಸರ್ವೆ ಹಾಗೂ ಮಾಹಿತಿ ತಾಳೆ ಹಾಕುವ ಕಾರ್ಯ ಮುಗಿದಿದ್ದು, 14 ಕಟ್ಟಡಗಳು ಪಾಲಿಕೆಗೆ 56.83 ಕೋಟಿ ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. 

ಪಾಲಿಕೆಯ ದಕ್ಷಿಣ ವಲಯದ 4 ಕಟ್ಟಡಗಳು, ಬೊಮ್ಮನಹಳ್ಳಿ ವಲಯದ 7 ಕಟ್ಟಡಗಳು ಹಾಗೂ ಮಹದೇವಪುರ ವಲಯದ 3 ಕಟ್ಟಡಗಳಿಂದ ಪಾಲಿಕೆಗೆ 56.83 ಕೋಟಿ ರೂ. ನಷ್ಟವಾಗಿದೆ. ಆ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದುಪ್ಪಟ್ಟು ತೆರಿಗೆ, ಬಡ್ಡಿ ವಿಧಿಸಿ 215 ಕೋಟಿ ರೂ. ಪಾವತಿಸುವಂತೆ ಕಟ್ಟಡಗಳಿಗೆ ನೋಟಿಸ್‌ ಜಾರಿಗೊಳಿಸಲು ಮುಂದಾಗಿದ್ದಾರೆ. 

1700 ಕೋಟಿ ತೆರಿಗೆ ಸಂಗ್ರಹ: 2017-18ನೇ ಸಾಲಿನ ಮೊದಲಾರ್ಧದಲ್ಲಿಯೇ ಪಾಲಿಕೆಗೆ 15 ಲಕ್ಷ ಆಸ್ತಿಗಳಿಂದ 1700 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಕಳೆದ ಸಾಲಿಗೆ ಹೋಲಿಕೆ ಮಾಡಿದರೆ 250 ಕೋಟಿ ರೂ. ಹೆಚ್ಚು ತೆರಿಗೆ ಸಂಗ್ರಹವಾಗಿದೆ.

ಪ್ರಸಕ್ತ ಸಾಲಿನಲ್ಲಿ 2600 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಹೊಂದಲಾಗಿದ್ದು, ಇನ್ನು ಶೇ.35ರಷ್ಟು ತೆರಿಗೆ ಸಂಗ್ರಹಿಸಬೇಕಿದೆ. ಒಟ್ಟಾರೆಯಾಗಿ 2016-17ನೇ ಸಾಲಿನ ಪೂರ್ಣ ವರ್ಷದಲ್ಲಿ ಒಟ್ಟು 16.20 ಲಕ್ಷ ಆಸ್ತಿಗಳಿಂದ ಪಾಲಿಕೆಗೆ 2,154 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next