ಬೆಂಗಳೂರು: ರಾಜ್ಯದ ಸರಕಾರಿ ಶಾಲಾ ಮಕ್ಕಳಿಗೆ ಡಿಜಿಟಲ್ ಆರೋಗ್ಯ ಕಾರ್ಡ್ ವಿತರಣೆ, ಮೌಲ್ಯಯುತ ಶಿಕ್ಷಣ, ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಶಿಕ್ಷಣ ಇಲಾಖೆಗೆ ಸಲಹೆ ನೀಡಿರುವುದಾಗಿ ಶಿಕ್ಷಣ ಸುಧಾರಣೆಗಳ ಸಲಹೆಗಾರ ಡಾ| ಎಂ.ಆರ್. ದೊರೆಸ್ವಾಮಿ ತಿಳಿಸಿದರು.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಬಾರಿ ಶಿಕ್ಷಣ ಸುಧಾರಣೆಗಳ ಸಲಹೆಗಾರನಾಗಿದ್ದ ವೇಳೆ 18 ಶಿಫಾರಸುಗಳನ್ನು ನೀಡಿದ್ದೆ. ಈ ಪೈಕಿ ಕೆಲವು ಅನುಷ್ಠಾನವಾಗಿವೆ. 2ನೇ ಬಾರಿಗೆ ಸಲಹೆಗಾರನಾಗಿ ಆಯ್ಕೆಯಾದ ಬಳಿಕ ಶಾಲಾ ಶಿಕ್ಷಣದಲ್ಲಿ ಪ್ರಸ್ತುತ ದಿನಗಳಲ್ಲಿ ಮೌಲ್ಯಯುತ ಶಿಕ್ಷಣದ ಅಗತ್ಯವಿರುವುದನ್ನು ಮನಗಂಡು “ಕಥಾಲೋಕ’ ಎಂಬ ಪುಸ್ತಕವನ್ನು ಪ್ರಕಟಿಸಲಾಗಿದೆ ಎಂದು ಹೇಳಿದರು.
ಈ ಪುಸ್ತಕವನ್ನು ಸದ್ಯ ದತ್ತು ಪಡೆದಿರುವ ಶಾಲೆಗಳು ಸಹಿತ ಒಂದು ಸಾವಿರ ಶಾಲೆಗಳಿಗೆ ವಿತರಿಸಲಾಗುತ್ತಿದೆ. ಉಳಿದ 40 ಸಾವಿರ ಶಾಲೆಗಳಿಗೆ ವಿತರಿಸುವಂತೆ ಸರಕಾರಕ್ಕೆ ಸಲಹೆ ನೀಡಲಾಗಿದೆ. ಈ ಪುಸ್ತಕದಲ್ಲಿ ಸುಮಾರು 34 ನೀತಿ ಕತೆಗಳಿದ್ದು, ವಾರಕ್ಕೆ ಒಂದು ಕತೆಯಂತೆ ವಿದ್ಯಾರ್ಥಿಗಳಿಗೆ ಬೋಧಿಸಲು ತಿಳಿಸಲಾಗಿದೆ ಎಂದರು.
ರಾಜ್ಯದಲ್ಲಿರುವ ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜುಗಳು ತಲಾ 300 ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿರುವ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಬೇಕು ಎಂಬ ಸಲಹೆ ನೀಡಲಾಗಿದೆ. ಇದರಿಂದ ರಾಜ್ಯದಲ್ಲಿರುವ ವಿದ್ಯಾರ್ಥಿಗಳ ಆರೋಗ್ಯ ಪರಿಸ್ಥಿತಿಯನ್ನು ತಿಳಿಯಬಹುದಾಗಿದೆ. ಈ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರ ಜತೆಗೆ ವಿದ್ಯಾರ್ಥಿಗಳಿಗೆ ಡಿಜಿಟಲ್ ಆರೋಗ್ಯ ಕಾರ್ಡ್ ವಿತರಿಸುವಂತೆಯೂ ಸಲಹೆ ನೀಡಲಾಗಿದೆ ಎಂದರು.
ಶೋಧನಾ ಸಮಿತಿಗೆ ಕುಲಪತಿಗಳು ಬೇಡ
ರಾಜ್ಯದ ವಿವಿಗಳ ಕುಲಪತಿಗಳ ಆಯ್ಕೆಗಾಗಿ ನಡೆಸುವ ಶೋಧನಾ ಸಮಿತಿಯಲ್ಲಿ ಹಾಲಿ ಕುಲಪತಿಗಳಾಗಿ ಇತರ ವಿಶ್ವವಿದ್ಯಾನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಅಧ್ಯಕ್ಷ/ಸದಸ್ಯರಾಗಿ ನೇಮಿಸಬಾರದು. ಶಿಕ್ಷಣ ತಜ್ಞರನ್ನು ಮಾತ್ರ ನೇಮಿಸಬೇಕು ಎಂದು ದೊರೆಸ್ವಾಮಿ ಹೇಳಿದರು.