Advertisement

ಪ್ರಯಾಣಿಕರಿಗೆ ಮಾಹಿತಿ ನೀಡಲು ‘ಡಿಜಿಟಲ್‌ ಬೋರ್ಡ್‌’

12:22 PM Jul 19, 2018 | Team Udayavani |

ಮಹಾನಗರ: ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಂಚಾರ ನಿಯಮ- ನಗರದ ಮಾಹಿತಿ ಹಾಗೂ ಮಾರ್ಗ ದರ್ಶನ ನೀಡುವ ಬೃಹತ್‌ ಗಾತ್ರದ ಮಾಹಿತಿ ಫಲಕ ‘ಡಿಜಿಟಲ್‌ ಡಿಸ್‌ ಪ್ಲೇ’ ನಂತೂರು, ಕೆ.ಪಿ.ಟಿ. ಹಾಗೂ ಜ್ಯೋತಿ ಸರ್ಕಲ್‌ನಲ್ಲಿ ಪೊಲೀಸ್‌ ಇಲಾಖೆಯ ವತಿಯಿಂದ ವಾರದೊಳಗೆ ಅನುಷ್ಠಾನಗೊಳ್ಳಲಿದೆ.

Advertisement

ಸಿಲಿಕಾನ್‌ ಸಿಟಿಯ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುವ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಪ್ರಮುಖ ನಗರಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಡಿಜಿಟಲ್‌ ಬೋರ್ಡ್‌ ಪರಿಕಲ್ಪನೆ ಈ ಮೂಲಕ ಮಂಗಳೂರಿಗೂ ಪರಿಚಿತವಾದಂತಾಗಿದೆ.

ಬೆಂಗಳೂರು, ಕೇರಳ, ಉಡುಪಿ ಕುಂದಾಪುರ ಭಾಗದಿಂದ ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ನಗರದ ಕುರಿತು ಹಾಗೂ ಸಂಚಾರ ನಿಯಮದ ಬಗ್ಗೆ ಮಾಹಿತಿ ನೀಡಲು ನಂತೂರು ಸರ್ಕಲ್‌ ಬಳಿಯಲ್ಲಿ ಬೃಹತ್‌ ಡಿಜಿಟಲ್‌ ಫಲಕ ನಿರ್ಮಿಸಲಾಗುತ್ತಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಗಮಿಸುವ ಪ್ರಯಾಣಿಕರಿಗೆ ಅನುಕೂಲವಾಗಲು ಕೆಪಿಟಿ ಬಳಿ ಹಾಗೂ ಧರ್ಮ ಸ್ಥಳ, ಪುತ್ತೂರು, ಕಾಸರಗೋಡು ಕಡೆಗಳಿಂದ ನಗರಕ್ಕೆ ಆಗಮಿಸುವವರಿಗೆ ಜ್ಯೋತಿ ಸರ್ಕಲ್‌ನಲ್ಲಿ ಬೃಹತ್‌ ಗಾತ್ರದ ಡಿಜಿಟಲ್‌ ಮಾಹಿತಿ ಫಲಕ ಅಳವಡಿಸಲಾಗುತ್ತದೆ. 

ನಂತೂರು ಸರ್ಕಲ್‌ ಬಳಿ
ನಂತೂರು ಸರ್ಕಲ್‌ ಮಧ್ಯದಲ್ಲಿ ಡಿಜಿಟಲ್‌ ಡಿಸ್‌ಪ್ಲೇ ಅಳವಡಿಕೆಗೆ ಸಂಚಾರಿ ಪೊಲೀಸ್‌ ಇಲಾಖೆ ಯೋಚಿಸಿತ್ತು. ಈ ಸಂಬಂಧ ಡಿಸ್‌ ಪ್ಲೇ ಅಳವಡಿಕೆಗೆ ಸಂಚಾರಿ ಇಲಾಖೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಕೂಡ ಕೇಳಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಜಿಟಲ್‌ ಡಿಸ್‌ಪ್ಲೇ ಅಳವಡಿಕೆಗೆ ಅನುಮತಿ ನೀಡಲಾಗುತ್ತಿಲ್ಲ. ಹೀಗಾಗಿ ಮಲ್ಲಿಕಟ್ಟೆಯಿಂದ ನಂತೂರು ಸರ್ಕಲ್‌ಗೆ ಹೋಗುವ ದಾರಿಯಲ್ಲಿಯೇ (ನಂತೂರು ಸರ್ಕಲ್‌ ಬಳಿ) ಡಿಜಿಟಲ್‌ ಡಿಸ್‌ಪ್ಲೇ ಅಳವಡಿಸಲಾಗುತ್ತಿದೆ ಎಂದು ಹೆದ್ದಾರಿ ಇಲಾಖೆಯ ಮೂಲಗಳು ತಿಳಿಸಿವೆ. ಬುಧವಾರ ನಂತೂರುವಿನಲ್ಲಿ ಎರಡು ಕ್ರೇನ್‌ ಸಹಾಯದಿಂದ ಡಿಜಿಟಲ್‌ ಡಿಸ್‌ಪ್ಲೇ ಅಳವಡಿಸುವ ಕಾರ್ಯ ನಡೆಯಿತು. ಮೊದಲೇ ಸಿದ್ಧಪಡಿಸಲಾಗಿದ್ದ ಫೌಂಡೇಶನ್‌ ನಲ್ಲಿ ಬೃಹತ್‌ ಗಾತ್ರದ ಡಿಸ್‌ಪ್ಲೇ ಬೋರ್ಡ್‌ ಕೂರಿಸಲಾಯಿತು. ಇದಕ್ಕೆ ಡಿಜಿಟಲ್‌ ಸಹಾಯದಿಂದ ವಿವರಗಳ ನಮೂದಿಸಿ, ತಾಂತ್ರಿಕ ಕೆಲಸಗಳು ಒಂದು ವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಫಲಕದಲ್ಲೇನಿದೆ?
ವಿಎನ್‌ಎಸ್‌ನ ಡಿಜಿಟಲ್‌ ಡಿಸ್‌ ಪ್ಲೇ ಇದಾಗಿದ್ದು, ‘ಮಂಗಳೂರಿಗೆ ಸ್ವಾಗತ’ ಎಂಬ ಒಕ್ಕಣೆ ಇದರಲ್ಲಿರುತ್ತದೆ. ನಗರಕ್ಕೆ ಆಗಮಿಸಿದ ಪ್ರಯಾಣಿಕರಿಗೆ ಹತ್ತಿರದ ಪ್ರದೇಶಗಳಿಗೆ ಯಾವ ದಾರಿ, ಎಷ್ಟು ದೂರ ಎಂಬಿತ್ಯಾದಿ ವಿವರಗಳು ಇರಲಿವೆ. ಪೊಲೀಸ್‌ ಇಲಾಖೆಯಿಂದ ಜನರಿಗೆ ಮಾಹಿತಿ ನೀಡುವ ವಿವರಗಳನ್ನು ಇದೇ ಡಿಸ್‌ ಪ್ಲೇ ಮೂಲಕ ಜನರಿಗೆ ತಿಳಿಸಲಾಗುತ್ತದೆ. ಅಪಘಾತಗಳು ಸಂಭವಿಸದಂತೆ ಎಚ್ಚರಿಕೆ ಸೂತ್ರಗಳ ಕುರಿತು ಪ್ರಯಾಣಿಕರಿಗೆ ಡಿಸ್‌ಪ್ಲೇ ಸಹಾಯದಿಂದ ವಿವರಿಸಲಾಗುತ್ತದೆ. ಜತೆಗೆ, ಮಂಗಳೂರು ವ್ಯಾಪ್ತಿಯ ಯಾವುದೇ ಭಾಗದಲ್ಲಿ ಅಪಘಾತ ಸಂಭವಿಸಿ ಸಂಚಾರ ದಟ್ಟಣೆ ಆದಲ್ಲಿ ಅಲ್ಲಿನ ರಸ್ತೆಯನ್ನು ಬಳಸದಂತೆ ತುರ್ತು ಸಂದರ್ಭದಲ್ಲಿ ಸೂಚನೆ ನೀಡುವ ವ್ಯವಸ್ಥೆ ಕೂಡ ಇದರಲ್ಲಿ ಮುಂದೆ ಇರಲಿದೆ ಎನ್ನುವುದು ಪೊಲೀಸ್‌ ಇಲಾಖೆಯ ಮೂಲಗಳು ತಿಳಿಸಿವೆ.

Advertisement

‘ವಾರದೊಳಗೆ ಕಾರ್ಯಾರಂಭ’
ಸಂಚಾರಿ ನಿಯಮ, ಮಂಗಳೂರಿನ ವಿವರ, ಸೂಚನಾ ವಿವರ, ಮಾರ್ಗಸೂಚಿಗಳಿರುವ ಬೃಹತ್‌ ಡಿಜಿಟಲ್‌ ಫಲಕಗಳನ್ನು ಪೊಲೀಸ್‌ ಇಲಾಖೆಯ ವತಿಯಿಂದ ಮಂಗಳೂರಿನ ನಂತೂರು, ಕೆಪಿಟಿ ಬಳಿ ಹಾಗೂ ಜ್ಯೋತಿಯಲ್ಲಿ ನಿರ್ಮಿಸಲಾಗುತ್ತಿದೆ. ಒಂದು ವಾರದೊಳಗೆ ಇದು ಪೂರ್ಣ ರೀತಿಯಲ್ಲಿ ಕಾರ್ಯಾರಂಭಿಸಲಿದೆ.
 -ಮಂಜುನಾಥ್‌ ಶೆಟ್ಟಿ
 ಸಂಚಾರಿ ವಿಭಾಗ ಮಂಗಳೂರು

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next