Advertisement

ಉಪೇಂದ್ರರ ಪಕ್ಷಕ್ಕೆ ಮತ ಹಾಕಲು ದಿಗಂತ್‌ ಪತ್ರ

03:30 PM Dec 11, 2017 | |

ನಟ ಉಪೇಂದ್ರ ಅವರು ರಾಜಕೀಯಕ್ಕೆ ಎಂಟ್ರಿ ಆಗಿದ್ದರ ಬಗ್ಗೆ ಹಲವು ಕಲಾವಿದರ ಪ್ರತಿಕ್ರಿಯೆ ಕೇಳಿದಾಗ, ಅದರಲ್ಲಿ ಬಹುತೇಕ ಕಲಾವಿದರು ಏನನ್ನೂ ಹೇಳದೆಯೇ ನುಣುಚಿಕೊಂಡಿದ್ದಾರೆ. ಸರಿ, ತಪ್ಪು ಎನ್ನುವುದಕ್ಕಿಂತ ಆ ಕುರಿತು ಮಾತನಾಡದಿರುವುದು ಸೇಫ‌ು ಎಂದು ಬಹಳಷ್ಟು ಮಂದಿ ತೀರ್ಮಾನಿಸಿದಂತಿದೆ.

Advertisement

ಅದೇ ಕಾರಣಕ್ಕೆ, ಉಪೇಂದ್ರ ಅವರು ರಾಜಕೀಯಕ್ಕೆ ಬರುವ ಮತ್ತು ತಮ್ಮದೇ ಪಕ್ಷ ಸ್ಥಾಪಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದರೂ, ಯಾರೊಬ್ಬರೂ ಆ ಕುರಿತಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ, ನಟ ದಿಗಂತ್‌ ಮಾತ್ರ ಉಪೇಂದ್ರ ಅವರಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಒಂದು ಪತ್ರದ ಮುಖೇನ ಉಪೇಂದ್ರ ಅವರನ್ನು ಬೆಂಬಲಿಸಬೇಕೆಂದು, ಜನರಲ್ಲಿ ಕೇಳಿಕೊಂಡಿದ್ದಾರೆ. ಇಷ್ಟಕ್ಕೂ ದಿಗಂತ್‌ ಆ ಪತ್ರದಲ್ಲಿ ಏನು ಬರೆದಿದ್ದಾರೆ ಎಂಬ ಕುತೂಹಲವಿದ್ದರೆ ಓದಿ …

ಪ್ರಜಾಪ್ರಭುತ್ವ ಇಂದು ಅಕ್ಷರಶಃ “ಒನ್‌ಡೇ’ ಮ್ಯಾಚ್‌. ಐದು ವರ್ಷಕ್ಕೊಮ್ಮೆ ಮಾತ್ರ ನಡೆಯುವ “ವೆರಿ ವೆರಿ ಸ್ಪೆಷಲ್‌’ ಮ್ಯಾಚ್‌. ಆಡುವ ತಂಡದಲ್ಲಿ ಇರುವವರೆಲ್ಲಾ ಹೆಚ್ಚು ಕಡಿಮೆ ತೀರಾ “ಕಳಪೆ ಬ್ಯಾಟ್ಸ್‌ಮನ್‌’ಗಳು. ಆ ಕಳಪೆ ಬ್ಯಾಟ್ಸ್‌ಮನಗಳಲ್ಲಿ ಯಾರು ಹೆಚ್ಚು ರನ್‌ ಹೊಡೆಯುತ್ತಾರೋ ಅವರು “ವಿನ್ನರ್‌’. ಹೆಚ್ಚು ರನ್‌ ಹೊಡೆಯಲು ಅವರು ಬಳಸುವ “ಕಲೆಗಳು’ ಮತ್ತು “ತಂತ್ರಗಳು’ ಮಾತ್ರ ಅತ್ಯದ್ಭುತ.

ಮತದಾರ ಅನ್ನೋ ಕೆಲ ಬೌಲರ್‌ಗಳಿಗೆ ಕಳಪೆ ಗುಣಮಟ್ಟದ ಮದ್ಯ ಹಂಚಿ “ಲೈನ್‌ ಅಂಡ್‌ ಲೆಂತ್‌’ ತಪ್ಪಿಸುತ್ತಾರೆ. ದುಡ್ಡಿನ ಆಸೆ ತೋರಿಸಿ “ವೈಡ್‌ ಬಾಲ್‌’ ಎಸೆಯುವಂತೆ ಮಾಡುತ್ತಾರೆ. ಜಾತಿ ಕೇಳಿ ಜಾಗೃತಗೊಳಿಸಿ “ಫ‌ುಲ್‌ಟಾಸ್‌’ ಹಾಕುವಂತೆ ಪ್ರೇರೇಪಿಸುತ್ತಾರೆ. ಈ ಎಲ್ಲಾ ತಂತ್ರಗಳಿಂದ ಮತ ಅನ್ನೋ ರನ್ಸ್‌ ಕಲೆ ಹಾಕಿ ಗೆದ್ದು ವಿಜೃಂಭಿಸಿ ಸದ್ದಿಲ್ಲದಂತೆ ಮರೆಯಾಗಿಬಿಡುತ್ತಾರೆ. ಮತ್ತೆ ಅವರು ಸರಿಯಾಗಿ “ಗ್ರೌಂಡ್‌’…ನಲ್ಲಿ ಕಾಣಿಸುವುದು ಐದು ವರ್ಷದ ನಂತರ ಆಡುವ ಒನ್‌ಡೇ ಮ್ಯಾಚ್‌ನಲ್ಲಿ.

ಹಿಂದಿನ ಬಾರಿಯ ಮ್ಯಾಚ್‌ಗಿಂತ ಈ ಬಾರಿ ಬಲಿಷ್ಠರಾಗಿರುತ್ತಾರೆ. ಮ್ಯಾಚ್‌ ವಿನ್ನಿಂಗ್‌ ತಂತ್ರಗಳು ಸ್ವಲ್ಪ ಮಟ್ಟಿಗೆ ಬದಲಾಗಿರುತ್ತವೆ. ಈ ಎಲ್ಲಾ ಕ್ರೀಡಾ ಚಟುವಟಿಕೆಗಳಿಗೆ ಅವರು ಕೊಟ್ಟಿರುವ ಪವಿತ್ರ ಹೆಸರು “ರಾಜಕೀಯ’ ಎಂದು. ಈ ಪವಿತ್ರ ಹೆಸರನ್ನು ಬದಲಾಯಿಸಲು ಕನ್ನಡದ ಸುಪುತ್ರ, ಬುದ್ಧಿವಂತ “ಉಪೇಂದ್ರ’ ಅವರೇ ತಮ್ಮನ್ನು ಬೆಳೆಸಿರುವ ತಮ್ಮ ಬೇಡಿಕೆ ಇರುವ “ಚಿತ್ರರಂಗ’ವನ್ನು ಬಿಟ್ಟು ಬರಬೇಕಾಯಿತು ನೋಡಿ.

Advertisement

ನಿಜ ಹೇಳಬೇಕೆಂದರೆ, “ಪ್ರಜಾಕೀಯ’ ಎಂದು ಹೆಸರು ಬದಲಾಯಿಸಿ ಪ್ರಜೆಗಳ ಕೆಲಸ ಮಾಡೋ ಕಾರ್ಮಿಕರು ನಾವು ಅಂತ “ಖಾಕಿ’ ಬಟ್ಟೆ ಹಾಕಿಕೊಂಡು ಪಕ್ಷ ಲಾಂಚ್‌ ಮಾಡೋದೇ ಒಂದು “ಸೂಪರ್‌’ ಕಲ್ಪನೆ. ಸಮಸ್ಯೆಗಳ ಬಗ್ಗೆ ಮಾತಾಡೋರು ಎಲ್ಲಾ ಕಡೆ ಸಿಗ್ತಾರೆ. ಪರಿಹಾರಗಳ ಬಗ್ಗೆ ಮಾತಾಡೋದು ಮರೆಯಾಗಿರ್ತಾರೆ. ಅಂತ ಪ್ರಜ್ಞಾವಂತರಿಗೆ ಒಂದು ವೇದಿಕೆ ಕಲ್ಪಿಸಿ, “ಓಂಕಾರ’ ಹಾಕೋ ಒಬ್ಬ ವ್ಯಕ್ತಿ ಸಿಕ್ಕಿರೋದು ನಮ್ಮ ರಾಜ್ಯದ ಮಟ್ಟಿಗೆ ಹೆಮ್ಮೆ ಪಡುವಂತಹ ವಿಷಯ.

“ಸತ್ಯದೊಂದಿಗೆ ಪ್ರಯೋಗ’ಕ್ಕೆ ಹೊರಟಿರುವ ಈ ವಿನೂತನ ಪ್ರಯತ್ನದಲ್ಲಿ ಸೋಲಾದರೆ ಉಪೇಂದ್ರ ಅವರಿಗೆ ಅಂತಹ ದೊಡ್ಡ ನಷ್ಟವೇನೂ ಆಗುವುದಿಲ್ಲ. ಆದರೆ, ರಾಜ್ಯದ ಮಟ್ಟಿಗೆ ಅದು ಬಹುದೊಡ್ಡ ದುರಂತ. ನಾವು “ಪ್ರಜ್ಞಾವಂತ’ರೆಲ್ಲ ಎಂದು ನಮಗೆ ನಾವೇ “ಸರ್ಟಿಫಿಕೇಟ್‌’ ಕೊಟ್ಟು ಕೊಳ್ಳುವಂತಹ ಮೂರ್ಖತನದ ಪ್ರದರ್ಶನ ಆದೀತು ಎಂದೇ ಹೇಳಬಹುದು.

ಇಂದು ರಾಜಕಾರಣಿಗಳು “ಕೆಪಿಜೆಪಿ’ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನೋಡಿದರೆ ನೋವಾಗುತ್ತದೆ. ಅದಕ್ಕಿಂತ ದುಃಖದ ವಿಚಾರವೆಂದರೆ ಅರ್ಹತೆಯೇ ಇಲ್ಲದವರನ್ನು ನಾಯಕರನ್ನಾಗಿ ಮಾಡಿ ಪ್ರತಿದಿನ ಮೋಸ ಹೋಗುತ್ತಿರುವ “ಅಸಾಮಾನ್ಯ ಪ್ರಜೆ’ಗಳು ಕೂಡ ಹಣವಿಲ್ಲದೆ ಪಕ್ಷ ಕಟ್ಟಲು ಸಾಧ್ಯವೇ ಎಂದು ಮಾತನಾಡುತ್ತಿರುವುದು. ಹಣ ಪಡೆಯದೆ ಯೋಗ್ಯತೆ ಇರುವವರನ್ನು ಆರಿಸಲು ಸಾಧ್ಯವಾದರೆ ಹಣವಿಲ್ಲದ ಪಕ್ಷ ಕಟ್ಟುವುದು ಏಕೆ ಸಾಧ್ಯವಾಗುವುದಿಲ್ಲ ಹೇಳಿ?

ಕಡೆಯದಾಗಿ ಅಸಾಮಾನ್ಯ ಪ್ರಜೆಗಳಲ್ಲಿ ನಾನು ಕೇಳುವುದಿಷ್ಟು. ನಮ್ಮ ಹಣವಾದ ಲಕ್ಷಲಕ್ಷ ಕೋಟಿಕೋಟಿ ಲೂಟಿ ಆಗದ ಹಾಗೆ ಅಭಿವೃದ್ಧಿಗೆ ಬಳಕೆಯಾಗಬೇಕು ಅನ್ನಿಸಿದರೆ “ಪ್ರಜಾಕೀಯ’ ಸೆಲೆಕ್ಟ್ ಮಾಡಿ. 100 ರೂ ಹಣದಲ್ಲಿ 15 ರೂ ಮಾತ್ರ ಬಳಕೆ ಆಗುತ್ತಿರುವ ಈಗಿನ “ದೋಖಾ ಸಿಸ್ಟಂ’ ಬದಲಾಗಿ 100ಕ್ಕೆ 100 ರೂ ಬಳಕೆ ಆಗುವ “ಗ್ಯಾರಂಟಿ ವಾರಂಟಿ ಸಿಸ್ಟಂ’ ಬೇಕು ಅನ್ನಿಸಿದರೆ “ಕೆಪಿಜೆಪಿ’ಗೆ ವೋಟ್‌ ಮಾಡಿ.

ಗೆದ್ದ ನಾಯಕರು ತಮ್ಮ “ಆರ್ಟ್‌’ ಬಳಸಿ ಕೆಲವೇ ವರ್ಷಗಳಲ್ಲಿ ಹಳ್ಳಿ-ಪಟ್ಟಗಳನ್ನು “ಸ್ಮಾರ್ಟ್‌’ ಆಗಿ ಮಾಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುವುದಕ್ಕೆ ಸಹಕಾರ ನೀಡಬೇಕೆನಿಸಿದರೆ “ಉಪ್ಪಿ’ಯನ್ನು ಅಪ್ಪಿಕೊಳ್ಳುವ ಕೆಲಸ ಮಾಡಿ. ಇದು ಸಾಧ್ಯ ಆಗದೆ ಹೋದರೆ ಮತ್ತೂಮ್ಮೆ ಒತ್ತಿ ಹೇಳುತ್ತೇನೆ. ಇಂದು ಮತ ಹಾಕದೆ ಇದ್ದರೆ “ಉಪ್ಪಿ’ಗಾಗಿ ಕೊನೆವರೆಗೂ ಕೊರಗಬೇಕಾಗುತ್ತದೆ ಮಾಡಿದ “ತಪ್ಪಿ’ಗಾಗಿ …

ಇಂತಿ ನಿಮ್ಮ ಪ್ರೀತಿಯ
ದಿಗಂತ್‌

Advertisement

Udayavani is now on Telegram. Click here to join our channel and stay updated with the latest news.

Next