ಬದುಕಿನ ಬಗ್ಗೆ ಯಾವುದೇ ಗುರಿ ಇಲ್ಲದೇ ಜಾಲಿರೈಡ್ ಮಾಡುತ್ತಿದ್ದ ಯುವಕರ ಕೈಗೆ ಏಕಾಏಕಿ ದುಡ್ಡು ಮಾಡುವ ಡೇಂಜರಸ್ ಹಾದಿಯೊಂದು ತೆರೆದುಕೊಂಡರೆ ಹೇಗಾಗಬೇಡ ಹೇಳಿ.. ಈ ವಾರ ತೆರೆಕಂಡಿರುವ “ಪೌಡರ್’ ಸಿನಿಮಾ ಇದೇ ಅಂಶದೊಂದಿಗೆ ಮೂಡಿಬಂದಿದೆ.
ಇಲ್ಲಿ ಪೌಡರ್ ಎಂದರೆ ನೀವು ಡ್ರಗ್ಸ್ ಎಂದುಕೊಳ್ಳಲು ಅಡ್ಡಿಯಿಲ್ಲ. ಈ ಅಂಶವನ್ನಿಟ್ಟುಕೊಂಡು ಇಡೀ ಸಿನಿಮಾವನ್ನು ಜಾಲಿರೈಡ್ ಮಾಡಿಸಲಾಗಿದೆ. ಒಂದು ಕಡೆ ಡ್ರಗ್ಸ್ ಮಾಫಿಯಾ, ಇನ್ನೊಂದು ಕಡೆ ಪೋಲಿ ಹುಡುಗರ ಖಾಲಿ ಲೈಫ್.. ಈ ಎರಡೂ ಒಂದು ಹಂತದಲ್ಲಿ ಕನೆಕ್ಟ್ ಆಗುತ್ತದೆ. ಅದು ಹೇಗೆ ಎಂಬುದೇ ಸಿನಿಮಾದ ಕಥಾಹಂದರ.
ಮೊದಲೇ ಹೇಳಿದಂತೆ ಈ ಸಿನಿಮಾದ ಉದ್ದೇಶ ಪ್ರೇಕ್ಷಕರನ್ನು ನಗಿಸುವುದು. ಹಾಗಾಗಿ, ಇಲ್ಲಿ ಲಾಜಿಕ್‌ಗಿಂತ ಮ್ಯಾಜಿಕ್ ಹೆಚ್ಚು ಕೆಲಸ ಮಾಡಿದೆ. ಒಂದು ರೆಗ್ಯುಲರ್ ಕಾಮಿಡಿ ಸಿನಿಮಾದ ನಿರೂಪಣೆಗಿಂತ ಒಂದಷ್ಟು ಹೊಸತನದಲ್ಲಿ ಸಿನಿಮಾವನ್ನು ಕಟ್ಟಿಕೊಡಲಾ ಗಿದೆ. ಸಾಮಾನ್ಯವಾಗಿ ಕಾಮಿಡಿ ಸಿನಿಮಾಗಳಲ್ಲಿ ಗ್ರಾಫಿಕ್ ಬಳಕೆ ಕಡಿಮೆ. ಆದರೆ, ಇಲ್ಲೊಂದಿಷ್ಟು ಗ್ರಾಫಿಕ್ ಗಳ ಮೂಲಕ ಕಾಮಿಡಿಗೆ ಹೊಸ ಸ್ಪರ್ಶ ನೀಡಲಾಗಿದೆ. ಇಲ್ಲಿ ಕಾಮಿಡಿ ಸಂಭಾಷಣೆಗಳಿಗಿಂತ ಸಿನಿಮಾದಲ್ಲಿನ ಸನ್ನಿವೇಶಗಳಿಗೆ ಕಾಮಿಡಿ ಲೇಪನ ನೀಡಲಾಗಿದೆ. ಮುಖ್ಯವಾಗಿ ಪಾತ್ರಗಳ ಗೆಟಪ್, ಹಾವ-ಭಾವವೇ ಈ ಸಿನಿಮಾದ ಪ್ಲಸ್‌ಗಳಲ್ಲಿ ಒಂದು.
ಸಿನಿಮಾ ಬಗ್ಗೆ ಹೇಳುವುದಾದರೆ “ಪೌಡರ್’ ಒಂದು ಹಾಸ್ಯಭರಿತ ಚಿತ್ರವಾಗಿದೆ. ಇಬ್ಬರು ಯುವಕರು ಒಂದು ನಿಗೂಢವಾದ ಪೌಡರ್ ಪ್ರಭಾವದಿಂದಾಗಿ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ ಪೌಡರ್.
ದಿಗಂತ್ ತಮ್ಮ ಹಾವ-ಭಾವದ ಮೂಲಕ ನಗಿಸಲು ಪ್ರಯತ್ನಿಸಿದ್ದಾರೆ. ಈ ಹಿಂದಿನ ಪಾತ್ರಗಳಿಗಿಂತ ಸ್ವಲ್ಪ ಭಿನ್ನ ಪಾತ್ರ ಅವರಿಗೆ ಸಿಕ್ಕಿದೆ. ಉಳಿದಂತೆ ಧನ್ಯಾ, ಶರ್ಮಿಳಾ, ರವಿಶಂಕರ್, ಅನಿರುದ್ಧ್, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ.
ಆರ್.ಪಿ. ರೈ