Advertisement

ಜೈಲು ಅಕ್ರಮ ಬಗ್ಗೆ ಡಿಐಜಿ ಡಿಜಿ ಪ್ರತ್ಯೇಕ ವಿಚಾರಣೆ

11:24 AM Aug 02, 2017 | Team Udayavani |

ಬೆಂಗಳೂರು: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತು ತನಿಖೆ ನಡೆಸುತ್ತಿರುವ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ಕುಮಾರ್‌ ಮತ್ತು ತಂಡ ನಿವೃತ್ತ ಡಿಜಿ ಸತ್ಯನಾರಾಯಣರಾವ್‌ ಹಾಗೂ ಡಿಐಜಿ ರೂಪಾ ಅವರಿಂದ ಮಾಹಿತಿ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

Advertisement

ಇಬ್ಬರು ಅಧಿಕಾರಿಗಳನ್ನು ರಹಸ್ಯ ಸ್ಥಳವೊಂದಕ್ಕೆ ಕರೆಸಿಕೊಂಡ ತನಿಖಾ ತಂಡ ಪ್ರತ್ಯೇಕವಾಗಿ ಸುಮಾರು 3-4 ಗಂಟೆಗಳ ಪ್ರಶ್ನೆ ಕೇಳಿ ಉತ್ತರ ದಾಖಲಿಸಿಕೊಂಡಿದೆ. ಹೇಳಿಕೆ ಸಂದರ್ಭದಲ್ಲೂ ಸಹ ಅಧಿಕಾರಿಗಳು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.

ಸತ್ಯನಾರಾಯಣರಾವ್‌ ಹೇಳಿ ಇದು
ಮೊದಲಿಗೆ ಸತ್ಯನಾರಾಯಣರಾವ್‌ ಅವರು, “ರೂಪಾ ಅವರು  ಶಶಿಕಲಾ ಮತ್ತು ತೆಲಗಿ ಕೊಠಡಿಗಳಿಗೆ ಭೇಟಿ ನೀಡದೆಯೇ ವರದಿಯಲ್ಲಿ ತಮ್ಮ ಮೇಲೆ ಆರೋಪ ಮಾಡಿದ್ದಾರೆ. ಪ್ರಚಾರ ಪಡೆಯುವ ಉದ್ದೇಶದಿಂದಲೇ ತಮಗೆ ವರದಿ ತಲುಪುವ ಮೊದಲೇ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಇನ್ನು 2 ಕೋಟಿ ಲಂಚ ಪಡೆದ ಆರೋಪ ಕುರಿತು ಪ್ರತಿಕ್ರೆಯ ನೀಡಿರುವ ಎಚ್‌ಎನ್‌ಎಸ್‌, ಈ ವಿಚಾರದಲ್ಲಿ ತಮ್ಮ ಹೆಸರು ಕೇಳಿಬಂದಿರುವ ಬಗ್ಗೆ ಮಾಹಿತಿಯಿಲ್ಲ.

ಯಾರು? ಯಾರಿಗೆ ಕೊಟ್ಟಿದ್ದಾರೆ ಎಂಬುದು ಸಹ ತಿಳಿದಿಲ್ಲ. ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಲು ನಾನು ಕಾರಾಗೃಹ ಇಲಾಖೆಯ ಮುಖ್ಯಸ್ಥನಾಗಿ ನೇಮಕಗೊಂಡ ದಿನದಿಂದಲೇ ಶ್ರಮಿಸುತ್ತಿದ್ದೇನೆ. ಅದಕ್ಕೆ ಸಾಕ್ಷಿ ಎಂಬಂತೆ ರೂಪಾಂತರ ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಹೀಗಿರುವಾಗ ಏಕಾಏಕಿ ಸೂಕ್ತ ದಾಖಲೆಗಳಿಲ್ಲದೇ ರೂಪಾ ತಮ್ಮ ಮೇಲೆ ಆರೋಪಿಸಿದ್ದಾರೆ,’ ಎಂದು ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ರೂಪಾ ಹೇಳಿದ್ದು ಇದು 
ರೂಪಾ ಅವರು ತಮ್ಮ ಹೇಳಿಕೆಯಲ್ಲಿ, “ಜೈಲಿನ ಅಕ್ರಮದ ಬಗ್ಗೆ ನಾನು ಪ್ರಮಾಣಿಕವಾಗಿ ವರದಿ ನೀಡಿದ್ದೇನೆ. ಯಾರನ್ನು ಗುರಿಯಾಗಿಸಿಕೊಂಡು ವರದಿ ಮಾಡಿಲ್ಲ. ಆದರೆ, ಶಶಿಕಲಾ ನಟರಾಜನ್‌ ಅವರಿಗೆ ಐಷಾರಾಮಿ ಸೌಲಭ್ಯ ಕೊಡಲು 2 ಕೋಟಿ ಲಂಚ ಪಡೆದ ಆರೋಪದಲ್ಲಿ ತಮ್ಮ(ಸತ್ಯನಾರಾಯಣ್‌) ಹೆಸರು ಕೇಳಿ ಬರುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸತ್ಯನಾರಾಯಣರಾವ್‌ ಅವರಿಗೆ ವರದಿ ನೀಡಿದ್ದೇನೆಯೇ ಹೊರತು ಖುದ್ದು ಯಾರ ಮೇಲೂ ಆರೋಪಿಸಿಲ್ಲ.

Advertisement

ಕೈದಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ವೇಳೆ ಮಾದಕ ವಸ್ತು ಜೈಲಿನಲ್ಲಿ ಸರಬರಾಜು ಆಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಬ್ಯಾರಕ್‌ಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿಯೇ ವರದಿ ನೀಡಿದ್ದೇನೆ. ಅಲ್ಲದೇ ಜೈಲಿನ ವೈದ್ಯರ ಪರೀಕ್ಷೆ ವೇಳೆಯೇ ಕೈದಿಗಳ ದೇಹದಲ್ಲಿ ಮಾದಕ ವಸ್ತು ಅಂಶ ಪತ್ತೆಯಾಗಿದೆ. ಈ ಬಗ್ಗೆ ದಾಖಲೆಗಳನ್ನು ಸಹ ನೀಡಿದ್ದೇನೆ ಎಂದು,’ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ. 

ಇನ್ನು ಆರೋಪ ಕುರಿತು ಜೈಲಿನ ಮುಖ್ಯಅಧೀಕ್ಷಕ ಕೃಷ್ಣಕುಮಾರ್‌ ಮತ್ತು ಅನಿತಾ ಅವರ ಹೇಳಿಕೆ ಪಡೆಯಬೇಕಿದ್ದು, ಸದ್ಯದಲ್ಲೇ ಇಬ್ಬರು ಅಧಿಕಾರಿಗಳು ಬೆಂಗಳೂರಿಗೆ ಬಂದು ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ ವಿನಯ್‌ಕುಮಾರ್‌ ನೇತೃತ್ವದ ತಂಡ ಪ್ರಾಥಮಿಕ ವರದಿಯನ್ನು ಗೃಹ ಇಲಾಖೆಗೆ ನೀಡಿದ್ದು, ಈ ವರದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ತಲುಪಿದೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ. ಜುಲೈ 13ರಂದು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಡಿಐಜಿ ರೂಪಾ ಅಂದಿನ ಡಿಜಿ ಸತ್ಯನಾರಾಯಣರಾವ್‌ಗೆ ಎರಡು ವರದಿಗಳನ್ನು ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next