Advertisement
ಈ ತರಕಾರಿ ಎಂದರೆ ಸಾಮಾನ್ಯವಾಗಿ ಎಲ್ಲ ಮಕ್ಕಳಿಗೂ ಅಲರ್ಜಿಯೇ. ಆದರೆ, ಇದರ ಅಪಾರ ಮಹಿಮೆಯನ್ನರಿತ ತಾಯಂದಿರು ತಮ್ಮ ಮಕ್ಕಳಿಗೆ ತರಕಾರಿಗಳನ್ನು ತಿನ್ನಿಸಲು ಇಲ್ಲದ ಹರಸಾಹಸ ನಡೆಸಿಯೇ ಇರುತ್ತಾರೆ. “ತರಕಾರಿ ತಿನ್ನೋದೇ ಇಲ್ಲ ಡಾಕ್ಟ್ರೇ’ ಇದು ಮಕ್ಕಳ ತಜ್ಞರಲ್ಲಿ ಬಹುತೇಕ ಎಲ್ಲ ತಾಯಂದಿರ ದೂರು. ಡಾಕು ಜೋರು ಮಾಡಿ ಹೇಳಿದ್ರಾದರೂ ಈ ಮಕ್ಕಳು ತರಕಾರಿ ತಿನ್ನುತ್ತಾವೆಯೇನೋ ಎಂಬ ಆಸೆ ತಾಯಂದಿರಿಗೆ !
Related Articles
Advertisement
ಅಡುಗೆಯ ಅನುಭವ ಎಂದೊಡನೆಯೇ ನೆನಪಾಗುತ್ತೆ. ನಾನು ಮದುವೆಯಾದ ಹೊಸತರಲ್ಲಿ ಅತ್ತೆಯವರಿಗೆ ನೆರವಾಗಲು ಹೋದ ಸಂದರ್ಭವದು, ಅತ್ತೆ ಹೇಳಿದರೆಂದು ಅವಸರ ಅವಸರವಾಗಿ ಬೀನ್ಸ್ ಕಟ್ ಮಾಡಿ ಬೇಯಿಸಲು ಸ್ಟವ್ ಮೇಲೆ ಇಟ್ಟಿದ್ದೆ. ಒಳಬಂದ ಅತ್ತೆಯವರು, “”ಬೀನ್ಸ್ ತೊಳೆದಿದ್ಯಾ?” ಎಂದಾಗಲೇ ಅನನುಭವಿ ತಲೆಗೆ ತಪ್ಪಿನ ಅರಿವಾದದ್ದು. ಹೆಚ್ಚಿದ ಬೀನ್ಸ್ ಅನ್ನು ಪಾತ್ರೆಯ ತುಂಬಾ ನೀರು ಹಾಕಿ ಬೇಯಿಸಲು ಇಟ್ಟಿದ್ದಕ್ಕೂ ಅತ್ತೆ ಕಮೆಂಟ್ ಮಾಡಿದ್ದರು, “”ಇಷ್ಟೊಂದು ನೀರು ಹಾಕಿ ಬೇಯಿಸಿದ್ರೆ ಅದರಲ್ಲಿರೋ ಸತ್ವವೆಲ್ಲಾ ಹೋಗಿ ಬಿಡುತ್ತಮ್ಮ”ಅಬ್ಟಾ ! ಅತ್ತೆಯವರ ವೈಜ್ಞಾನಿಕ ಜ್ಞಾನಕ್ಕೆ ತಲೆದೂಗಿದ್ದೆ !
ಅಮ್ಮನೂ ಯಾರಿಗೇನು ಕಡಿಮೆಯಿಲ್ಲ, ಅಡುಗೆ ತಯಾರಿಯಲ್ಲಿ ಎಂದೂ ತರಕಾರಿಗಳ ಸಿಪ್ಪೆ ತೆಗೆಯಲು ಬಿಡುತ್ತಲೇ ಇರಲಿಲ್ಲ. “”ಸಿಪ್ಪೆಯಲ್ಲೂ ಪೋಷಕಾಂಶಗಳಿರುತ್ತವೆ ಕಣೆ. ತರಕಾರಿಗಳನ್ನು ಚೆನ್ನಾಗಿ ತೊಳೆದು ಹೆಚ್ಚಿ ಹಾಕು ಸಾಕು’ ಎಂದು ಸೂಕ್ಷ್ಮವಾಗಿ ಗದರುತ್ತಿದ್ದರು. ಕ್ಷಣಮಾತ್ರದಲ್ಲಿ ಕೆಲ ತರಕಾರಿಗಳ ಸಿಪ್ಪೆ ಬಳಸಿ ರುಚಿಕರ ಚಟ್ನಿಯೊಂದನ್ನು ತಯಾರಿಸುವ ಅಮ್ಮನ ಕೈಚಳಕವೂ ನನ್ನನ್ನು ಬೆರಗಾಗಿಸುತ್ತಿತ್ತು.
ಇದೇನು ತರಕಾರಿ ಬಗ್ಗೆ ಶುರು ಹಚ್ಚಿದ್ದಾರೆ ಎಂದು ಮೂಗು ಮುರಿಯಬೇಡಿ. ಈ ತರಕಾರಿ ಅನೇಕರ ಬದುಕಿಗೂ ಆಧಾರವಾಗಿದೆ. ದಿನವೂ ಮನೆಯ ಬಳಿ ಸೊಪ್ಪು – ತರಕಾರಿ ಹೊತ್ತು ತಂದು ಮಾರುವ ಹೆಂಗಸು ತನ್ನ ಜೀವನಕ್ಕಾಗಿ ನಂಬಿರುವುದು ತರಕಾರಿಯನ್ನೇ. ನಸುಕಿನಲ್ಲಿಯೇ ಮಾರ್ಕೆಟ್‌ಗೆ ಹೋಗಿ, ಬುಟ್ಟಿಯ ತುಂಬಾ ವಿಧ ವಿಧ ತರಕಾರಿಯನ್ನು ತುಂಬಿಸಿಕೊಂಡು, ಅದನ್ನು ತಲೆಯ ಮೇಲೆ ಹೊತ್ತು ಸೂರ್ಯ ನೆತ್ತಿಯ ಮೇಲೆ ಬರುವವರೆಗೆ “ಸೊಪ್ಪು-ತರಕಾರಿ’ ಎಂದು ಕೂಗುತ್ತ¤ ನಾಲ್ಕಾರು ಬೀದಿಯಲ್ಲಿ ತಿರುಗಾಡಿ ವ್ಯಾಪಾರ ಮಾಡಿದರೇನೇ ಆಕೆಯ ಅಂದಿನ ದುಡಿಮೆ! ಆ ದುಡಿಮೆಯಲ್ಲಿಯೇ ಆಕೆಯ ಸಂಸಾರ ನೌಕೆ ಸಾಗಬೇಕು. ಗಿರಾಕಿಗಳನ್ನು ಆಕರ್ಷಿಸಲು ಆಕೆ ಬಹಳಷ್ಟು ಕಸರತ್ತು ಮಾಡುತ್ತಾಳೆ. ಒಮ್ಮೆ ಆಕೆ, “”ಅಮ್ಮ, ಮಲ್ಲಿಗೆ ಹೂವು ನೋಡಿ” ಎಂದು ಕೂಗಿದ್ದನ್ನು ಕಂಡು ನಾನು, “”ಹೂವು ತಂದಿದ್ದೀರಾ?” ಎಂದಿದ್ದೆ. ಆಕೆ ನಗುತ್ತ, “”ಮಲ್ಲಿಗೆಯಂಥ ಬೀನ್ಸ್ ನೋಡಿ ಅಮ್ಮ…” ಎಂದಿದ್ದಳು. “”ಈ ಹಾಗಲಕಾಯಿ ಅಂತೂ ನಿಮಗೆಂತಲೇ ತಂದಿದ್ದೇನೆ. ಆ ಬೀದೀಲಿ ಯಾರೋ ಕೇಳಿದ್ರೂ ಕೊಡಲಿಲ್ಲ ಅಮ್ಮಾ” ಎನ್ನುತ್ತಾ ನಿಮ್ಮ ಉತ್ತರಕ್ಕೂ ಕಾಯದೇ ಅದನ್ನು ನಿಮ್ಮ ಚೀಲಕ್ಕೆ ಹಾಕಿಯೇ ಬಿಡುತ್ತಾಳೆ. “”ಈ ಗೆಡ್ಡೆಕೋಸು ತಗೋಳ್ರಮ್ಮಾ, ಸಕ್ಕರೆ ಕಾಯಿಲೆಗೆ ಬಾಳ ಒಳ್ಳೇದಂತೆ…” ಎನ್ನುತ್ತಾ ಆ ಕ್ಷಣಕ್ಕೆ ಡಾಕ್ಟರ್ ಆಗಿ ಬಿಡುತ್ತಾಳೆ !
ಇನ್ನು ಮನೆಯ ಬಳಿ, ಕೈಗಾಡಿಯಲ್ಲಿ ಬಗೆ ಬಗೆಯ ತರಕಾರಿಗಳನ್ನು ಮಾರಲು ಬರುವ ಪುರುಷ ವ್ಯಾಪಾರಿಗಳೇನೂ ಕಡಿಮೆಯಿಲ್ಲ. ಗಿರಾಕಿಗಳನ್ನು ಆಕರ್ಷಿಸುವ ಅವರ ಕೌಶಲವನ್ನು ನೀವು ನೋಡಬೇಕು. ಮನೆ ಮುಂದೆ ಬರುತ್ತಲೂ ಆತ ಕೂಗುತ್ತಾನೆ, “”ಅಮ್ಮ… ಬನ್ನಿ ಬನ್ನಿ.. ವಾಂಗಿಬಾತ್… ಕ್ಯಾರೇಟ್ ಹಲ್ವ… ಮಜ್ಜಿಗೆ ಹುಳಿ… ಅವರೇಕಾಯಿ ಉಪ್ಪಿಟ್ಟು… ಎಲ್ಲ ಇದೆ ಇವತ್ತು” ನಾವು ಆ ಆಹಾರ ಪದಾರ್ಥಗಳ ಹೆಸರು ಕೇಳಿಯೇ ಬಾಯಲ್ಲಿ ನೀರು ಸುರಿಸುತ್ತಾ ಮನೆಯಿಂದ ಓಡೋಡಿ ಹೊರಗೆ ಬರಬೇಕು, ಹಾಗಿರುತ್ತದೆ ಅವನ ಧಾಟಿ. ನಾವೇನಾದರೂ ಬೆಂಡೆಕಾಯಿ, ಬೀನ್ಸ್ ಮೊದಲಾದ ತರಕಾರಿಯನ್ನು ಕೈಯಲ್ಲಿ ಹಿಡಿದು, “”ಇದೇನ್ರಿ? ಇದು ಬಲಿತಿರೋ ಹಾಗಿದೆ” ಅಂದ್ರೆ ಅಮ್ಮ, “”ನೀವು ಇವತ್ತು ತಗೊಂಡು ಸಾಂಬಾರ್ ಮಾಡಿ, ಚೆನ್ನಾಗಿಲ್ಲದಿದ್ರೆ ನಾಳೆ ಹಣ ವಾಪಾಸ್” ಎನ್ನುವ ಆತನ ವಿಶ್ವಾಸದ ಮಾತುಗಳಿಗೆ ಮರುಳಾಗಿಯೇ ನಾವು ತರಕಾರಿಗಳನ್ನು ಖರೀದಿಸಬೇಕು.ಒಮ್ಮೊಮ್ಮೆ ಈ ಬಿರು ಬೇಸಿಗೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿ ಬಿಡುತ್ತದೆ. ಆಗ ತರಕಾರಿ ವ್ಯಾಪಾರವನ್ನು ಬಲು ಜಾಣ್ಮೆಯಿಂದ ಮಾಡಬೇಕು. ಈ ದುಬಾರಿ ಕಾಲದಲ್ಲಿ ಕೆಲವರಂತೂ ಅಂಗಡಿಗೆ ಬಂದು, ತರಕಾರಿ ಬೆಲೆಯನ್ನು ಕೇಳುತ್ತಾರೆ. ಬೆಲೆಯನ್ನು ಕೇಳುತ್ತಲೇ, “”ಇದೇನ್ರಿ? ಈ ಪಾಟಿ ರೇಟ್ ಹೇಳ್ತೀರಾ?” ಎನ್ನುತ್ತಾರೆ. “”ಈ ರೇಟಿಗೆ ಕಾಲು ಕೆಜಿ ಚಿಕನ್ ಬರುತ್ತಲಿ” ಎನ್ನುವ ಪಾಯಿಂಟ್ ಬೇರೆ ಸೇರಿಸುತ್ತಾರೆ. “”ಆದರೆ, ನೀವೇ ಹೇಳಿÅà. ಈ ತರಕಾರಿಗೆ ಯಾವುದು ಸಾಟೀರಿ? ವಿಟಮಿನ್- ಖನಿಜ- ನೀರು- ನಾರು ಎಲ್ಲದರ ಆಗರ ಅಲ್ವೇನ್ರಿ ಈ ತರಕಾರಿ”ಹೌದು, ನಾರು ಎಂದೊಡನೆ ನೆನಪಾಯ್ತು, ನಿಮಗೆ ಗೊತ್ತೇನು? ಮಾಂಸಾಹಾರವೇ ಪ್ರಧಾನವಾಗಿರೋ ದೇಶಗಳಲ್ಲಿ ಹೆಚ್ಚಾಗಿ ಸಂಭವಿಸುವ ಕರುಳಿನ ಕ್ಯಾನ್ಸರ್ ನಮ್ಮ ದೇಶದಲ್ಲಿ ಕಡಿಮೆ ! ಅದಕ್ಕೆ ಕಾರಣಾನೂ ಈ ತರಕಾರಿ; ತರಕಾರೀಲಿ ಇರೋ ನಾರಿನಾಂಶಕ್ಕೆ ಕ್ಯಾನ್ಸರ್ ತಡೆಗಟ್ಟುವ ವಿಶೇಷ ಗುಣವೂ ಇದೆ ಅಂದ್ರೆ ನಿಮಗೆ ಆಶ್ಚರ್ಯ ಆಗಬಹುದಲ್ವಾ ? ಈ ತರಕಾರಿ ಯಾರನ್ನೂ ಕೈಬಿಡೋದಿಲ್ಲರಿ. ಕಿಡ್ನಿ ರೋಗಿಗಳಿಂದ ಹಿಡಿದು ಬಿ. ಪಿ. ಕಾಯಿಲೆಯವರಿಗೂ, ಸಕ್ಕರೆ ಕಾಯಿಲೆಯವರಿಂದ ಹಿಡಿದು ಕ್ಯಾನ್ಸರ್ ಕಾಯಿಲೆಯವರಿಗೂ ಈ ತರಕಾರಿ ಪಥ್ಯ ಮಾತ್ರ ಇರೋದಿಲ್ಲ ; ಒಂದೆರಡನ್ನು ಹೊರತುಪಡಿಸಿ ಸಾಮಾನ್ಯವಾಗಿ ಯಾವ ತರಕಾರಿನಾದ್ರೂ ತಿನ್ರಿ ಅಂತಾನೇ ಎಲ್ಲ ಸ್ಪೆಷಲಿಸ್ಟ್‌ಗಳು ಹೇಳ್ಳೋದು. ನೀವು ಬೇಕಾದ್ರೆ, ಯಾವುದೇ ಚರ್ಮ ತಜ್ಞರ ಬಳಿ ಹೋಗಿ, ಅವರು ತಮ್ಮ ಔಷಧೋಪಚಾರದ ನಂತರ ಹಸಿ ತರಕಾರಿಗಳನ್ನು ಹೆಚ್ಚು ತಿನ್ನಿ, ಅದರಲ್ಲಿಯೂ ಹಸಿ ಕ್ಯಾರೇಟ್ ತಿನ್ನಿ ಅನ್ನೋ ಸಲಹೆ ಕೊಟ್ಟೇ ಕೊಡ್ತಾರೆ. ಯಾಕಂದ್ರೆ ಈ ತರಕಾರಿ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮದ ಹಾಗೂ ಕೂದಲಿನ ಸೌಂದರ್ಯಕ್ಕೂ ಸೈ ! ತರಕಾರಿ ಕಸದಿಂದ ರಸ ಮಾಡುವ ನನ್ನ ಚಿಕ್ಕಮ್ಮನ ಬಗ್ಗೆ ಹೇಳದಿದ್ದರೆ ನನ್ನ ತರಕಾರಿ ಪುರಾಣ ಅಪೂರ್ಣ ಅನ್ಸುತ್ತೆ. ಅಡುಗೆಯ ಬಳಿಕ ಉಳಿದ ತರಕಾರಿ ಸಿಪ್ಪೆ, ಬೆಳ್ಳುಳ್ಳಿ ಸಿಪ್ಪೆ, ಹಸಿ ಶುಂಠಿ ಸಿಪ್ಪೆ ಎಲ್ಲವನ್ನೂ ಚಿಕ್ಕಮ್ಮ ಒಂದು ವಿಶೇಷ ಮಣ್ಣಿನ ಮಡಕೆಯಲ್ಲಿ ಹಾಕುತ್ತಾಳೆ ; ಅದಕ್ಕೆ ಸ್ವಲ್ಪ ಮಣ್ಣಿನ ಮಿಶ್ರಣವನ್ನು ಬೆರೆಸಿ ಸಾವಯವ ಗೊಬ್ಬರವನ್ನೂ ತಯಾರಿಸುತ್ತಾಳೆ ! ಆ ಗೊಬ್ಬರ ಉಂಡ ಅವಳ ಮನೆಯ ಹೂದೋಟದ ಹೂವುಗಳನ್ನು ನೋಡುವುದೇ ಒಂದು ಸಂಭ್ರಮ! ಹಾಗಾದ್ರೆ, ಬನ್ನಿ, ಇಷ್ಟೆಲ್ಲಾ ಒಳ್ಳೇ ಗುಣಗಳು ಇರೋ ತರಕಾರಿ ಸದುಪಯೋಗ ಮಾಡಿಕೊಳ್ಳೋಣ. – ಡಾ. ವಿನಯಾ ಶ್ರೀನಿವಾಸ್