ಇತ್ತೀಚೆಗೆ ಎಲ್ಲ ವಿಚಾರದಲ್ಲೂ ನಾವು ತೀರಾ ಮಾಡರ್ನ್ ಆಗಿದ್ದೇವೆ. ನಿತ್ಯದ ದಿನಚರಿಯೂ ಹಿಂತಿರುಗಿ ನೋಡಲಾಗಷ್ಟು ಬದಲಾಗಿದೆ. ಹವ್ಯಾಸಗಳು, ರೂಢಿಗಳು ಬದಾಲಾಗಿವೆ. ಇಡೀ ಜಗತ್ತೇ ಈ ಹಾದಿಯಲ್ಲಿ ಹೊರಟಿದೆ. ಸುಮ್ನೆ ನಾನೇಕೆ ಹೊಸ ಹಾದಿಯಲ್ಲಿ ಹೋಗಬೇಕು ಎಂಬುದಕ್ಕೆ ನಾವೆಲ್ಲ ಒಗ್ಗಿಕೊಂಡಿದ್ದೇವೆ.
ಈಗ ಹೇಳಬೇಕಾದ ವಿಷಯಕ್ಕೆ ಬರೋಣ. ಮದುವೆಗೆ ಮುನ್ನ ಜೋಡಿಯು ಫೋಟೋ ಶೂಟ್ ಮಾಡಿಸೋದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಥೇಟ್ ಹೀರೋ ಹೀರೋಯಿನ್‌ಗಳಂತೆ ಪೋಸ್ ಕೊಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಳ್ಳುವುದು, ಡ್ರೋನ್ ಹಾರಿ ಬಿಟ್ಟು ವಿಹಂಗಮ ನೋಟದ ದೃಶ್ಯ ಚಿತ್ರೀಕರಿಸಿ ಜಾಣ್ಮೆಯಿಂದ ಎಡಿಟ್ ಮಾಡಿಸುವುದು, ನಂತರ ಅದನ್ನು ತಮ್ಮ ಸ್ನೇಹಿತರು, ಬಂಧುಗಳು, ಹಿತೈಷಿಗಳೊಂದಿಗೆ ಹಂಚಿಕೊಳ್ಳುವುದು, ಆ ಮೂಲಕ ಖುಷಿ ಪಡೋದು ಸಾಮಾನ್ಯ ಎಂಬಂತಾಗಿದೆ. ಇದಕ್ಕಾಗಿ ಪ್ರಕೃತಿಯ ರಮಣೀಯ ತಾಣಗಳಿಗೆ ಹೋಗಿ ಲಕ್ಷಗಟ್ಟಲೇ ಹಣ ಖರ್ಚು ಮಾಡುವವರೂ ಇದ್ದಾರೆ.
ಆದರೆ ಅಂಥವರೆಲ್ಲರ ನಡುವೆ ಇಲ್ಲೊಂದು ಜೋಡಿ ಪಕ್ಕಾ ಗ್ರಾಮ್ಯ ಸೊಗಡಿನಲ್ಲಿ ವಿಭಿನ್ನ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದೆ. ಬಳ್ಳಾರಿ ಮೂಲದ ಪವಿತ್ರಾ ಮತ್ತು ಅರ್ಜುನ್ ಎಂಬ ಈ ಜೋಡಿಗೆ ಈ ಪರಿಕಲ್ಪನೆಯಲ್ಲಿ ಫೋಟೋ ಶೂಟ್ ಮಾಡಿಸಿದವರು ಹುಬ್ಬಳ್ಳಿಯ ಯುವ ಪ್ರತಿಭೆ ಅಭಿನಂದನ್ ಜೈನ್. ವೃತ್ತಿಪರ ಫೋಟೋಗ್ರಾಫರ್ ಆಗಿರುವ ಇವರು ಉತ್ತಮ ದೃಶ್ಯ ಸಂಕಲನಕಾರ (ವಿಡಿಯೋ ಎಡಿಟರ್) ಕೂಡ ಹೌದು. ಸದಾ ಹೊಸತನಕ್ಕೆ ಹಂಬಲಿಸುವ ಅಭಿನಂದನ್, ಸೃಜನಶೀಲ ಛಾಯಾಗ್ರಹಣಕ್ಕೆ ಮುಂದಾಗುತ್ತಾರೆ. ಅವರು ಕ್ಲಿಕ್ ಮಾಡಿದ ಈ ಫೋಟೋಗಳನ್ನು ಗಮನಿಸಿದರೆ ವರಕವಿ ಡಾ. ದ. ರಾ ಬೇಂದ್ರೆ ಅವರ ಈ ಕವಿತೆ ನೆನಪಾಗುವುದು.
ನಾನು ಬಡವಿ ಆತ ಬಡವ
ಒಲವೇ ನಮ್ಮ ಬದುಕು
ಬಳಸಿಕೊಂಡೆವದನೇ ನಾವು
ಅದಕು ಇದಕು ಎದಕು
ಈ ಫೋಟೋಗಳಲ್ಲಿ ದಂಪತಿಯ ನಡುವೆ ಇರಬೇಕಾದ ಅಕ್ಕರೆ ಇದೆ. ಉತ್ಕಟ ಪ್ರೇಮ ಕಾಣುತ್ತಿದೆ. ಭಾವ ಬೆಸುಗೆ ಹೊಸೆದುಕೊಂಡಿದೆ. ಬಿಟ್ಟಿರಲಾಗದ ಬಾಂಧವ್ಯ ಏರ್ಪಟ್ಟಿದೆ. ನಿನ್ನ ಆಸೆ, ತುಡಿತ, ಬಯಕೆ, ಇಂಗಿತಗಳೆಲ್ಲವನ್ನೂ ಅರ್ಥೈಸಿಕೊಂಡು ಅದನ್ನು ಪೂರೈಸುವುದು ನನ್ನ ಸವಿನಯ ಕರ್ತವ್ಯ ಎಂದು ಒಬ್ಬರಿಗೊಬ್ಬರು ಹೇಳುತ್ತಿದ್ದಾರೇನೋ ಎಂಬಂತೆ ಈ ಫೋಟೋಗಳು ಕಾಣುತ್ತಿವೆ.
ಮಾಡಿಸಿದರೆ ಈ ತರ ಫೋಟೋ ಶೂಟ್ ಮಾಡಿಸಬೇಕು. ಅದರ ದಾಂಪತ್ಯದ ಏಳು-ಬೀಳಿನ ವಿವಿಧ ಮಜಲುಗಳು ಒಡಮೂಡಿ ಬರಬೇಕು ಎಂಬ ಅಭಿಪ್ರಾಯವನ್ನು ಈ ಫೋಟೋ ನೋಡಿದವರು ವ್ಯಕ್ತಪಡಿಸುತ್ತಿದ್ದಾರೆ. ಆಧುನಿಕ ಭರಾಟೆಯಲ್ಲಿ ನಮ್ಮ ಸಂಸ್ಕೃತಿ- ಸೊಗಡು ಮರೆಯದಿರೋಣ. ನಮ್ಮ ನೆಲ ಮೂಲದ ಆಚಾರ-ವಿಚಾರಕ್ಕೆ ಜೈ ಎನ್ನೋಣ. ಏನಂತೀರಿ?