Advertisement

Election ಪಂಚರಾಜ್ಯಗಳ ವಿಭಿನ್ನ ರಾಜಕಾರಣ

12:35 AM Oct 10, 2023 | Team Udayavani |

ಕೇಂದ್ರ ಚುನಾವಣ ಆಯೋಗ ಪಂಚ ರಾಜ್ಯಗಳ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ಈಗಿನಿಂದಲೇ ಈ ರಾಜ್ಯಗಳಲ್ಲಿ ಸಿದ್ಧತೆ ಆರಂಭವಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್‌ ಮೊದಲ ವಾರವೇ ಫ‌ಲಿತಾಂಶವೂ ಪ್ರಕಟವಾಗಲಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರಹಣಾಹಣಿ ಇದ್ದರೆ, ತೆಲಂಗಾಣದಲ್ಲಿ ಬಿಆರ್‌ಎಸ್‌-ಕಾಂಗ್ರೆಸ್‌-ಬಿಜೆಪಿ ನಡುವೆ ಸ್ಪರ್ಧೆ ಇದೆ. ಮಿಜೋರಾಂನಲ್ಲಿ ಕಾಂಗ್ರೆಸ್‌ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ಕದನ ಕಾಣಲಿದೆ.

Advertisement

ಮಧ್ಯಪ್ರದೇಶ
ಬಿಜೆಪಿಗೆ ಆಡಳಿತ ವಿರೋಧಿ ಅಲೆ; ಕಾಂಗ್ರೆಸ್‌ಗೆ ಅನುಕಂಪದ ನೆರವು?
ಭಾರೀ ಜಿದ್ದಾಜಿದ್ದಿಯಿಂದಲೇ 2018ರ ವಿಧಾನಸಭೆ ಚುನಾವಣೆ ನಡೆದಿತ್ತು. ಆಗ ಕಾಂಗ್ರೆಸ್‌ನ ಕಮಲ್‌ನಾಥ್‌ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಜಂಟಿಯಾಗಿ ಹೋರಾಟ ನಡೆಸಿ, ಪಕ್ಷಕ್ಕೆ ಹೆಚ್ಚು ಸ್ಥಾನ ಸಿಗುವಂತೆ ಮಾಡಿದ್ದರು. 114 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದ್ದು, ಇತರ ಪಕ್ಷಗಳ ನೆರವಿನೊಂದಿಗೆ ಸರಕಾರ ರಚಿಸಿ ಆಗ ಕಮಲ್‌ನಾಥ್‌ ಸಿಎಂ ಆಗಿದ್ದರು. ಈ ಬೆಳವಣಿಗೆ ಆಗ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಜ್ಯೋತಿರಾಧಿತ್ಯ ಸಿಂದಿಯಾ ಅವರಿಗೆ ಬೇಸರವನ್ನುಂಟು ಮಾಡಿತ್ತು.

ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ ಬೆಂಬಲಿಗ 22 ಕಾಂಗ್ರೆಸ್‌ ಶಾಸಕರೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು. 22 ಶಾಸಕರ ರಾಜೀನಾಮೆಯಿಂದಾಗಿ ಕಮಲ್‌ನಾಥ್‌ ಅವರ ಸರಕಾರ 2020ರ ಮಾ. 20ರಂದು ರಾಜೀನಾಮೆ ನೀಡಿತು. ಬಳಿಕ ಬಿಜೆಪಿಯ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತೆ ಸಿಎಂ ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೇಂದ್ರ ಸಚಿವರಾದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆಯೇ ಹೋರಾಟ ನಡೆಯುತ್ತಿದೆ. ಬಿಜೆಪಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಜತೆಗೆ ಕಾಂಗ್ರೆಸ್‌ ಸರಕಾರವನ್ನು ಬೀಳಿಸಿ, ಹೊಸದಾಗಿ ಸರಕಾರ ನಿರ್ಮಿಸಿರುವುದರಿಂದ ಕಮಲ್‌ನಾಥ್‌ ಅವರ ಪರವಾಗಿ ಅನುಕಂಪದ ಅಲೆಯೂ ಇದೆ.

ಇದರ ಜತೆಗೆ ಕಾಂಗ್ರೆಸ್‌, ಕರ್ನಾಟಕ ಮಾದರಿಯಲ್ಲೇ ಗ್ಯಾರಂಟಿಗಳ ಘೋಷಣೆ ಮಾಡಿದೆ. ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಮತ್ತು ಇಂಡಿಯಾ ಒಕ್ಕೂಟದ ನೆರವು ಸಿಗಬಹುದು ಎಂಬುದು ಕಾಂಗ್ರೆಸ್‌ನ ಆಶಾಭಾವನೆ. ಅಲ್ಲದೆ ಕಮಲ್‌ನಾಥ್‌ ಅವರು ಹಿಂದೂ ಮತಗಳನ್ನು ಸೆಳೆಯಲು ತಂತ್ರಗಾರಿಕೆಯನ್ನೂ ಮಾಡಿದ್ದಾರೆ.

ಬಿಜೆಪಿ ಈ ಚುನಾವಣೆಯಲ್ಲಿ ಬಿಜೆಪಿ ತನ್ನ ತಂತ್ರಗಾರಿಕೆ ಬದಲಾವಣೆ ಮಾಡಿದ್ದು, ನರೇಂದ್ರ ಸಿಂಗ್‌ ತೋಮರ್‌ ಸೇರಿದಂತೆ ಕೆಲವು ಕೇಂದ್ರ ಸಚಿವರಿಗೆ ಮತ್ತು ಸಂಸದರಿಗೂ ಟಿಕೆಟ್‌ ಕೊಟ್ಟು ಕಣಕ್ಕಿಳಿಸಿದೆ. ಅಲ್ಲದೆ ಹಿಂದಿ ಬೆಲ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವ ಹೆಚ್ಚಾಗಿದ್ದು, ಇದನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಈ ಚುನಾವಣೆಯಲ್ಲಿ ಜಿದ್ದಾಜಿದ್ದಿಯ ಕಣವನ್ನಾಗಿ ಮಾಡಿಕೊಂಡಿವೆ.

Advertisement

ರಾಜಸ್ಥಾನ
ಸಂಪ್ರದಾಯ ಮುರಿಯುವುದೇ ಕಾಂಗ್ರೆಸ್‌?
ಹೊಸ ಮುಖಗಳೊಂದಿಗೆ ಬಿಜೆಪಿ ಕಣಕ್ಕೆ
ಬಹುಹಿಂದಿನಿಂದಲೂ ರಾಜಸ್ಥಾನದಲ್ಲಿ ಒಮ್ಮೆ ಗೆದ್ದ ಪಕ್ಷ ಮತ್ತೆ ಗೆದ್ದಿಲ್ಲ. ಪ್ರತೀ 5 ವರ್ಷಕ್ಕೊಮ್ಮೆ ಇಲ್ಲಿ ಸರಕಾರ ಬದಲಾಗಲೇಬೇಕು. ಹೀಗಾಗಿಯೇ 2018ರಲ್ಲಿ ಬಿಜೆಪಿ ಸೋತು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಆದರೂ ವಸುಂಧರಾ ರಾಜೇ ಅವರ ನೇತೃತ್ವದ ಬಿಜೆಪಿ ದೊಡ್ಡ ಮಟ್ಟದ ಹೋರಾಟವನ್ನೇ ನೀಡಿತ್ತು.

2018ರಲ್ಲಿ ರಾಜಸ್ಥಾನದಲ್ಲೂ ಕಾಂಗ್ರೆಸ್‌ ಅಶೋಕ್‌ ಗೆಹೊÉàಟ್‌ ಮತ್ತು ಸಚಿನ್‌ ಪೈಲಟ್‌ ಅವರ ಜಂಟಿ ನಾಯಕತ್ವದಲ್ಲಿ ಚುನಾವಣೆ ಎದುರಿಸಿತ್ತು. ಬಿಜೆಪಿ ವಸುಂಧರಾ ರಾಜೇ ಮತ್ತು ಮೋದಿಯವರ ನೇತೃತ್ವದಲ್ಲಿ ಚುನಾವಣೆ ಎದುರಿಸಿತ್ತು. ಸಂಪ್ರದಾಯದಂತೆ ಇಲ್ಲಿಯೂ ಕಾಂಗ್ರೆಸ್‌ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ರಾಜಸ್ಥಾನದಲ್ಲಿ ಅಶೋಕ್‌ ಗೆಹೊÉàಟ್‌ ಸರಕಾರಕ್ಕೆ ಬಿಜೆಪಿಗಿಂತ ಹೆಚ್ಚಾಗಿ ಕಾಡಿದ್ದು, ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌. ಫ‌ಲಿತಾಂಶ ಪ್ರಕಟವಾದ ಮೇಲೆ ಸಚಿನ್‌ ಪೈಲಟ್‌ ಅವರು ಸಿಎಂ ಗಾದಿಗಾಗಿ ತೀವ್ರ ಹೋರಾಟ ನಡೆಸಿದ್ದರು. ಆದರೆ ಕಡೇ ಕ್ಷಣದಲ್ಲಿ ಹೈಕಮಾಂಡ್‌ ಹಿರಿಯ ನಾಯಕ ಅಶೋಕ್‌ ಗೆಹೊÉàಟ್‌ ಅವರಿಗೆ ಮಣೆಹಾಕಿತ್ತು. ಸಚಿನ್‌ ಪೈಲಟ್‌ ಉಪಮುಖ್ಯಮಂತ್ರಿಯಾಗಿದ್ದರು.

ಆದರೆ ಸರಕಾರ ಮತ್ತು ಪಕ್ಷದ ಮಟ್ಟದಲ್ಲಿ ಅಸಮಾಧಾನ ಹೊರಬೀಳುತ್ತಲೇ ಇತ್ತು. ಸರಕಾರದ ವಿರುದ್ಧವೇ ಸಚಿನ್‌ ಪೈಲಟ್‌ ಬಂಡೆದ್ದರು. ಹೀಗಾಗಿ ಅವರನ್ನು ಪಕ್ಷವಿರೋಧಿ ಚಟುವಟಿಕೆ ಆರೋಪದ ಮೇಲೆ ಉಪಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕಲಾಯಿತು. ಸಚಿನ್‌ ಪೈಲಟ್‌ ಕೂಡ ಜ್ಯೋತಿರಾದಿತ್ಯ ಸಿಂಧಿಯಾ ಅವರಂತೆಯೇ ಬಿಜೆಪಿಗೆ ಹೋಗುತ್ತಾರೆ ಎಂಬ ಮಾತುಗಳಿದ್ದವು. ಆದರೆ ಸ್ಥಳೀಯ ರಾಜಕಾರಣದಿಂದಾಗಿ ಆಗಲಿಲ್ಲ. ಕಾಂಗ್ರೆಸ್‌ನಲ್ಲಿಯೇ ಉಳಿದರೂ, ಅಶೋಕ್‌ ಗೆಹೊÉàಟ್‌ ಅವರ ಸರಕಾರದ ವಿರುದ್ಧವೇ ಸಮರ ಸಾರಿದ್ದರು.

ಈಗ ಇಬ್ಬರೂ ನಾಯಕರು ಹೈಕಮಾಂಡ್‌ ನೇತೃತ್ವದಲ್ಲಿ ಒಂದಾಗಿದ್ದಾರೆ. ಆದರೂ ಇಲ್ಲಿ ಆಡಳಿತ ವಿರೋಧಿ ಅಲೆ ಇದೆ. ಬಿಜೆಪಿ ವಸುಂಧರಾ ರಾಜೆ ಅವರನ್ನು ಪಕ್ಕಕ್ಕೆ ಸರಿಸಿ, ಹೊಸ ಮುಖಗಳೊಂದಿಗೆ ಚುನಾವಣೆಗೆ ಹೋಗಿದೆ. ಏಳು ಸಂಸದರಿಗೂ ಟಿಕೆಟ್‌ ನೀಡಲಾಗಿದೆ. ಅಲ್ಲದೆ ಸಂಪೂರ್ಣವಾಗಿ ಪ್ರಧಾನಿ ಮೋದಿಯವರ ನೇತೃತ್ವದಲ್ಲೇ ಈ ಚುನಾವಣೆ ಎದುರಿಸಲು ಅದು ತಯಾರಿ ನಡೆಸಿದೆ.

ಕಾಂಗ್ರೆಸ್‌ ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆಯನ್ನು ಮುಂದಿಟ್ಟುಕೊಂಡು, ಜಾತಿಗಣತಿ, ಸಾಫ್ಟ್ ಹಿಂದುತ್ವದ ಮೂಲಕ ಮತಯಾಚನೆ ಮಾಡುತ್ತಿದೆ.

ತೆಲಂಗಾಣ
ಬಿಆರ್‌ಎಸ್‌ಗೆ ಕಾಂಗ್ರೆಸ್‌ ತೀವ್ರ ಸ್ಪರ್ಧೆ;
ಬಹು ಹಿಂದೆ ಉಳಿಯಿತೇ ಬಿಜೆಪಿ?
ಈ ಹಿಂದೆ ಹೈದರಾಬಾದ್‌ ಮಹಾನಗರ ಪಾಲಿಕೆ ಚುನಾವಣೆ ವೇಳೆ, ತೆಲಂಗಾಣದ ಆಡಳಿತ ಪಕ್ಷ ಬಿಆರ್‌ಎಸ್‌ಗೆ ತೀವ್ರ ಪೈಪೋಟಿ ನೀಡಿದ್ದ ಬಿಜೆಪಿ, ಇಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದ್ದು, ನೆರೆಯ ಕರ್ನಾಟಕದಲ್ಲಿನ ಗೆಲುವು ಸ್ಥಳೀಯ ನಾಯಕರಿಗೆ ಬಲ ತಂದಿದೆ. ಹೀಗಾಗಿ ಈ ಬಾರಿ ಬಿಆರ್‌ಎಸ್‌ಗೆ ತೀವ್ರ ಸ್ಪರ್ಧೆ ನೀಡಿ, ಆಡಳಿತಕ್ಕೆ ಬರಲು ಎಲ್ಲ ರೀತಿಯ ಶ್ರಮ ಹಾಕುತ್ತಿದೆ.

2014 ಮತ್ತು 2018ರಲ್ಲಿ ಗೆದ್ದು ಆಡಳಿತ ನಡೆಸಿರುವ ಬಿಆರ್‌ಎಸ್‌, ತನ್ನ ಜನಪ್ರಿಯ ಯೋಜನೆಗಳ ಮೂಲಕ ಜನರ ವಿಶ್ವಾಸ ಗಳಿಸಿಕೊಳ್ಳುವ ಪ್ರಯತ್ನದಲ್ಲಿ ಮುಂದಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಆರು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ರಾಹುಲ್‌ ಗಾಂಧಿಯವರ ಮೂಲಕ ಅಲ್ಪಸಂಖ್ಯಾಕ ಮತಗಳನ್ನೂ ಕ್ರೋಡೀಕರಿಸುವ ನಿಟ್ಟಿನಲ್ಲಿ ಶ್ರಮ ಹಾಕುತ್ತಿದೆ.

ಆದರೆ ಬಿಆರ್‌ಎಸ್‌, ಎಐಎಂಐಎಂ ಜತೆ ಸೇರಿದ್ದು, ಅಲ್ಪಸಂಖ್ಯಾಕ ಮತಗಳ ಮೇಲೆ ನಿಯಂತ್ರಣ ಹೊಂದಿವೆ. ಎರಡು ಅವಧಿಯ ಆಡಳಿತ ನೋಡಿ ಮತ ಹಾಕಿ ಎಂದು ಬಿಆರ್‌ ಎಸ್‌ನ ಚಂದ್ರಶೇಖರ ರಾವ್‌ ಕೇಳುತ್ತಿದ್ದಾರೆ.

ಇದೆಲ್ಲದರ ನಡುವೆ ಬಿಜೆಪಿ, ಕೊಂಚ ಮಂಕಾದಂತೆ ಕಾಣಿಸುತ್ತಿದೆ. ಹೊಸ ಅಧ್ಯಕ್ಷರನ್ನಾಗಿ ಕಿಶನ್‌ ರೆಡ್ಡಿ ಅವರನ್ನು ನೇಮಕ ಮಾಡಿದ್ದರೂ ಪಕ್ಷದಲ್ಲಿ ಅಂಥ ಚಟುವಟಿಕೆ ಕಾಣಿಸುತ್ತಿಲ್ಲ.

ಛತ್ತೀಸ್‌ಗಢ‌
ಕಾಂಗ್ರೆಸ್‌ಗೆ ಗೆಲ್ಲುವ ಭರವಸೆ; ನಾಯಕರ ಹುಡುಕಾಟದಲ್ಲಿ ಬಿಜೆಪಿ
2018ರಲ್ಲಿ ರಮಣ್‌ ಸಿಂಗ್‌ ಅವರ ಸತತ ಮೂರು ಅವಧಿಯ ಆಡಳಿತವನ್ನು ಕೊನೆಗಾಣಿಸಿ ಅಧಿಕಾರಕ್ಕೇರಿದ ಕಾಂಗ್ರೆಸ್‌ ಈ ಬಾರಿಯೂ ಗೆಲ್ಲುವ ವಿಶ್ವಾಸದಲ್ಲಿದೆ. ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರ ಬಗ್ಗೆ ರಾಜ್ಯದಲ್ಲಿ ಉತ್ತಮ ಅಭಿಪ್ರಾಯವಿದ್ದು, ಗೆದ್ದೇ ಗೆಲ್ಲುತ್ತೇವೆ ಎಂದು ಕಾಂಗ್ರೆಸ್‌ ಹೇಳಿಕೊಳ್ಳುತ್ತಿದೆ. ಅಲ್ಲದೆ ಇದೂ ಹಿಂದೂ ಬೆಲ್ಟ್ನ ರಾಜ್ಯವಾಗಿದ್ದು, ಹಿಂದೂ ಮತಗಳ ಮೇಲೆಯೇ ಭೂಪೇಶ್‌ ಬಘೇಲ್‌ ಕಣ್ಣಿಟ್ಟು, ಇದಕ್ಕೆ ಬೇಕಾದ ಯೋಜನೆಯನ್ನೂ ಮಾಡಿದ್ದಾರೆ.

ಕಾಂಗ್ರೆಸ್‌ಗೆ ಇಲ್ಲಿಯೂ ಆಂತರಿಕ ಸಂಘರ್ಷ ಕಾಡುವ ಅಪಾಯವಿದೆ. 2018ರಲ್ಲಿ ಸಿಎಂ ಸ್ಥಾನಕ್ಕಾಗಿ ಭೂಪೇಶ್‌ ಬಘೇಲ್‌ ಮತ್ತು ದೇವ್‌ ಸಿಂಗ್‌ ದಿಯೋ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಕಡೆಗೆ ಕಾಂಗ್ರೆಸ್‌ ಭೂಪೇಶ್‌ ಅವರಿಗೆ ಮಣೆ ಹಾಕಿತ್ತು. ತಲಾ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಮಾತಾಗಿತ್ತು ಎಂದು ಮೂಲಗಳು ಹೇಳಿದ್ದವು. ಆದರೆ ಭೂಪೇಶ್‌ ಬಘೇಲ್‌ ಇಂಥ ಯಾವುದೇ ಮಾತುಕತೆ ಆಗಿರಲಿಲ್ಲ. ಅಧಿಕಾರ ಬಿಟ್ಟುಕೊಡುವ ಮಾತೇ ಇಲ್ಲ ಎಂದಿದ್ದರು. ಹೀಗಾಗಿ ಇಬ್ಬರ ನಡುವೆ ತಕ್ಕ ಮಟ್ಟಿಗೆ ಗೊಂದಲವಿದೆ. ಇಲ್ಲಿಯೂ ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆ ಕೆಲಸ ಮಾಡಲಿದೆ ಎಂದು ನಾಯಕರು ಹೇಳುತ್ತಿದ್ದಾರೆ.

ಬಿಜೆಪಿಯಲ್ಲಿ ಹೊಸ ಮುಖಗಳ ಹುಟುಕಾಟ ನಡೆಯುತ್ತಿದೆ. ಈ ಹಿಂದೆ ಮೂರು ಬಾರಿ ಸಿಎಂ ಆಗಿದ್ದ ರಮಣ್‌ ಸಿಂಗ್‌ ಹೆಚ್ಚು ಕಾಣಿಸುತ್ತಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರೇ ಬಹುದೊಡ್ಡ ಫೇಸ್‌ ಆಗಿ ಕಾಣಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ರಮಣ್‌ ಸಿಂಗ್‌ ಅವರನ್ನು ಇರಿಸಿಕೊಂಡೇ, ಹೊಸ ನಾಯಕತ್ವದ ಹುಡುಕಾಟದಲ್ಲಿರುವ ಬಿಜೆಪಿ ಕಾಂಗ್ರೆಸ್‌ಗೆ ತೀವ್ರ ಸ್ಪರ್ಧೆ ನೀಡಲು ತಯಾರಿ ನಡೆಸಿ, ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆಯೂ ನೋಡುತ್ತಿದೆ.

ಮಿಜೋರಾಂ
ಝೋರೋಮ್‌ಗೆ ಝಡ್‌ಪಿಎಂ ಪೈಪೋಟಿ
ಪ್ರಾದೇಶಿಕ ಪಕ್ಷಗಳೇ ಹೆಚ್ಚು ಪ್ರಬಲವಾಗಿರುವ ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಪ್ರಾಬಲ್ಯ ಅಷ್ಟಕ್ಕಷ್ಟೇ. ಸದ್ಯ ಎಂಎನ್‌ಎಫ್ನ ಝೋರೋಮ್‌ಥಂಗಾ ಸಿಎಂ ಆಗಿದ್ದು, ಇವರಿಗೆ ಝೋರಮ್‌ ಪೀಪಲ್ಸ್‌ ಮೂವ್‌ಮೆಂಟ್‌ (ಝಡ್‌ಪಿಎಂ) ಪ್ರಬಲ ಪೈಪೋಟಿ ನೀಡುತ್ತಿದೆ. ಇಲ್ಲಿ ಸದ್ಯ ಕಾಂಗ್ರೆಸ್‌ ವಿಪಕ್ಷವಾಗಿದ್ದು, ಝಡ್‌ಪಿಎಂ ಪರ್ಯಾಯವಾಗಿ ಕಾಣಿಸಿಕೊಳ್ಳುತ್ತಿದೆ. ಈ ಪಕ್ಷವು ಯುವ ಮತದಾರರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ. ಈ ಬಾರಿ ಎಂಎನ್‌ಎಫ್ ಮತ್ತು ಝಡ್‌ಪಿಎಂ ನಡುವೆ ಪ್ರಬಲ ಪೈಪೋಟಿ ಕಾಣಿಸುವ ಲಕ್ಷಣಗಳು ಕಾಣಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next