Advertisement

 ದಿಡುಪೆ ಎಳನೀರು ಸಂಪರ್ಕ ರಸ್ತೆ: ಸುತ್ತಿ ಬಳಸಿ ಬರಲು 120 ಕಿ.ಮೀ. ದೂರ

03:51 PM Dec 15, 2017 | |

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ, ಎಳನೀರು ಮಾರ್ಗವಾಗಿ ಕಳಸ, ಹೊರನಾಡು ಸಂಪರ್ಕಿಸುವ ರಸ್ತೆಯನ್ನು ಜನರ ಅನುಕೂಲತೆಗಾಗಿ ಇಲ್ಲಿನ ಜನರ ಬಹುದಿನಗಳ ಬೇಡಿಕೆಯನ್ನು ಬುಧವಾರ ಸಂಸದ ನಳಿನ್‌ ಕುಮಾರ್‌ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿಯನ್ನು ನೀಡಿ ಒತ್ತಾಯಿಸಿದರು.

Advertisement

ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಹಾದು ಹೋಗುವ ಈ ರಸ್ತೆ ಅರಣ್ಯ ಇಲಾಖೆಯ ಸುಪರ್ದಿಯೊಳಗಿದೆ. ಎಳನೀರು, ಗುತ್ಯಡ್ಕ, ಬಡಾಮನೆ ಮೊದಲಾದ ಪ್ರದೇಶದ ಜನರು ತಾಲೂಕು ಕೇಂದ್ರಕ್ಕೆ ಬರಬೇಕಾದರೆ ಸುತ್ತು ಬಳಸಿ ಬರಬೇಕಾಗಿದೆ. ಹೊರನಾಡು ಮೊದಲಾದ ಯಾತ್ರಾಸ್ಥಳ ವನ್ನು ಸಂಪರ್ಕಿಸಲು ಹತ್ತಿರದ ರಸ್ತೆಯಾಗಿದೆ. ದಿಡುಪೆಯಿಂದ ಸುಮಾರು 10 ಕಿ. ಮೀ. ದೂರವನ್ನು ಕ್ರಮಿಸಿದರೆ ಸಂಸೆಯನ್ನು ತಲುಪಬಹುದಾಗಿದೆ. ಇಲ್ಲಿನ ಜನರು ಸುಮಾರು 125 ಕಿ.ಮೀ. ದೂರ ಕ್ರಮಿಸಿ ಬೆಳ್ತಂಗಡಿ ಕೇಂದ್ರ ಭಾಗಕ್ಕೆ ಬರಬೇಕು. ಈ ರಸ್ತೆ ನಿರ್ಮಾಣ ಮಾಡಬೇಕೆಂದು ಹಲವಾರು ವರ್ಷಗಳಿಂದ ಜನರ ಬೇಡಿಕೆಯಾಗಿದೆ.

ಸಂಸದ ನಳಿನ್‌ ಕುಮಾರ್‌ ಕಟೀಲು ಅವರನ್ನು ರಸ್ತೆಯ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ರಂಜನ್‌ ಜಿ. ಗೌಡ ಅವರ ನೇತೃತ್ವದಲ್ಲಿ ನಿಯೋಗ ತೆರಳಿ ಮನವಿಯನ್ನು ಸಲ್ಲಿಸಿದರು.

ನಿಯೋಗದಲ್ಲಿ ಜಿ.ಪಂ. ಸದಸ್ಯ ಕೆ. ಕೊರಗಪ್ಪ ನಾಯ್ಕ, ಬೆಳ್ತಂಗಡಿ ತಾ.ಪಂ. ಸದಸ್ಯ ವಿಜಯ ಗೌಡ, ಮುಖಂಡರುಗಳಾದ ದಿನೇಶ್‌ ಗೌಡ ಮಲವಂತಿಗೆ, ಭರತ್‌ ಕುಮಾರ್‌, ವಿಜಯ ಗೌಡ ಕಾಡಮನೆ, ವಿನಯಚಂದ್ರ ಸೇನರಬೆಟ್ಟು, ಜೋಸೆಫ್‌, ಕೇಶವ ಎಂ.ಕೆ., ಕರಿಯ ಗೌಡ, ಸಂಜೀವ ಗೌಡ, ತಿಮ್ಮಯ್ಯ, ಸುಂದರ, ರಾಘವೇಂದ್ರ, ಅಶ್ವಿ‌ನ್‌ ಮೊದಲಾದವರು ಉಪಸ್ಥಿತರಿದ್ದರು.

ಡಿಸಿ, ಸಿಇಒ ಭೇಟಿ
ಈ ಬೇಡಿಕೆ ಬಹಳ ಕಾಲದಿಂದ ಇದೆ. ಜಿಲ್ಲಾಧಿಕಾರಿ ಪೊನ್ನುರಾಜ್‌, ಎ.ಬಿ. ಇಬ್ರಾಹಿಂ, ಈಗಿನ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಭೇಟಿ ನೀಡಿದಾಗ ಇಲ್ಲಿನ ಜನತೆ ಈ ರಸ್ತೆಯ ಆವಶ್ಯಕತೆ ಕುರಿತು ಮನವರಿಕೆ ಮಾಡಿದ್ದರು. ಇಬ್ರಾಹಿಂ ಹಾಗೂ ರವಿ ಅವರು ಇದೇ ಕಚ್ಚಾ ರಸ್ತೆ ಮೂಲಕವೇ ಸಾಗಿ ಪರಿಸ್ಥಿತಿಯ ಅವಲೋಕನ ನಡೆಸಿದ್ದರು. ತಮ್ಮಿಂದಾದುದನ್ನು ಮಾಡುವ ಭರವಸೆ ನೀಡಿದ್ದರು. ಆದರೆ ಅರಣ್ಯ ಇಲಾಖೆಯೇ ಇಲ್ಲಿ ತೊಡರುಗಾಲು. ರಾಷ್ಟ್ರೀಯ ಉದ್ಯಾನವನದ ಗುಮ್ಮ ಬಿಡುವ ಮೂಲಕ ರಸ್ತೆ ಮಾಡಲು ಒಪ್ಪುತ್ತಿಲ್ಲ.

Advertisement

ಬಂಗೇರರಿಂದ ರಸ್ತೆ
ಈಗಿನ ಶಾಸಕ ಕೆ. ವಸಂತ ಬಂಗೇರರು ಈ ಹಿಂದೆ ಮಾಜಿಯಾಗಿದ್ದಾಗ ಇಲ್ಲಿ ರಸ್ತೆ ಮಾಡಲು ಶ್ರಮಿಸಿದ್ದರು. ರಾತೋರಾತ್ರಿ ನೂರಾರು ಜನರನ್ನು ಸೇರಿಸಿ ಅರಣ್ಯದೊಳಗೆ ರಸ್ತೆ ಮಾಡಿಸಿದ್ದರು. ನೂರಾರುಜನರ ಮೇಲೆ ಅರಣ್ಯ ಇಲಾಖೆಯಿಂದ ಕೇಸು ಕೂಡ ದಾಖಲಾಗಿತ್ತು. ಅನಂತರ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರಕರಣ ಮುಕ್ತಾಯ ಕಂಡಿತ್ತು. ಆದರೆ ಸಮಸ್ಯೆ ಇತ್ಯರ್ಥವಾಗಲಿಲ್ಲ. ಈಗಂತೂ ಶಾಸಕರ ಉತ್ಸಾಹ ಕಾಣಿಸುತ್ತಿಲ್ಲ ಎನ್ನುವುದು ಸ್ಥಳೀಯರ ಅಳಲು.

ದಿಡುಪೆ-ಎಳನೀರು ಸಂಪರ್ಕ ರಸ್ತೆ ನಮ್ಮ ಬಹುಕಾಲದ ಬೇಡಿಕೆ. ಈ ಹಿಂದೆ ಇದು ಎತ್ತಿನಗಾಡಿ ರಸ್ತೆಯಾಗಿತ್ತು ಎಂಬುದಕ್ಕೆ ದಾಖಲೆಗಳಿವೆ. ರಸ್ತೆ ನಿರ್ಮಾಣ ಮಾಡುವಂತೆ ಪಂಚಾಯತ್‌ನಲ್ಲಿ ಮಾಡಿದ ನಿರ್ಣಯಗಳಿಗೆ ಬೆಲೆಯೇ ಇಲ್ಲದ ಹಾಗಾಗಿದೆ.
ಪ್ರಕಾಶ್‌ ಕುಮಾರ್‌ ಜೈನ್‌,
ಗ್ರಾ. ಪಂ. ಸದಸ್ಯರು, ಎಳನೀರು

Advertisement

Udayavani is now on Telegram. Click here to join our channel and stay updated with the latest news.

Next