ಬಾರ್ಬಡೋಸ್: ಐಸಿಸಿ ಟಿ20 ವಿಶ್ವಕಪ್ ಗೆದ್ದ ಸಂತಸದಲ್ಲಿದ್ದ ಭಾರತೀಯ ನಾಯಕ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೂ ವಿದಾಯ ಹೇಳಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಟಿ20 ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಕೆಲವೇ ಕ್ಷಣಗಳಲ್ಲಿ ರೋಹಿತ್ ಶರ್ಮಾ ಕೂಡಾ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಆದರೆ ತಾನು ರಾಜೀನಾಮೆ ನೀಡುವ ನಿರ್ಧಾರ ಮೊದಲೇ ಮಾಡಿರಲಿಲ್ಲ ಎಂದು ರೋಹಿತ್ ಶರ್ಮಾ ಬಳಿಕ ಬಹಿರಂಗ ಪಡಿಸಿದ್ದಾರೆ.
“ಇದು ನನ್ನ ಕೊನೆಯ ಪಂದ್ಯವೂ ಆಗಿತ್ತು. ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ನಾನು ಇದನ್ನು (ಟ್ರೋಫಿ) ತೀವ್ರವಾಗಿ ಬಯಸಿದ್ದೆ. ಪದಗಳಲ್ಲಿ ಹೇಳುವುದು ತುಂಬಾ ಕಷ್ಟ” ಎಂದು ರೋಹಿತ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಆದರೆ ರೋಹಿತ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಆರಂಭದಲ್ಲಿ ಟಿ20 ಕ್ರಿಕೆಟ್‌ನಿಂದ ಹೊರಬರಲು ಯೋಜಿಸಿರಲಿಲ್ಲ ಎಂದು ವರದಿಗಾರರಿಗೆ ಬಹಿರಂಗಪಡಿಸುವುದನ್ನು ಕಾಣಬಹುದು.
ನಾನು ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತಿಯಾಗುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ಪರಿಸ್ಥಿತಿ ಹಾಗೆ ಇತ್ತು.. ಬಹುಶಃ ಇದು ಸರಿಯಾದ ಸಮಯ ಎಂದು ಅನಿಸಿತು. ಕಪ್ ಗೆದ್ದು ವಿದಾಯ ಹೇಳುವುದಕ್ಕಿಂತ ಉತ್ತಮವಾದದ್ದೇನೂ ಇಲ್ಲ” ಎಂದು ರೋಹಿತ್ ಹೇಳಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ 2024 ಗೆಲುವಿನ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.