ಹೊಸದಿಲ್ಲಿ: ನನ್ನ ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲೂ ಅನುಮತಿ ನೀಡಿರಲಿಲ್ಲ ಎಂದು ”1975ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ANI ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಸಿಂಗ್ ಭಾವುಕರಾಗಿ, ಆ ಸಮಯದಲ್ಲಿ ನಾನು ಜೈಲಿನಲ್ಲಿದ್ದೆ ನನ್ನ ತಾಯಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದವು. ನನಗೆ ಪೆರೋಲ್ ನೀಡದ ಕಾರಣ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಹ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ನವರು ನಮ್ಮನ್ನು ಈಗ ಸರ್ವಾಧಿಕಾರಿಗಳು ಎಂದು ಕರೆಯುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ನನ್ನ ತಾಯಿ 27 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಆಕೆಯ ಅಂತಿಮ ದಿನಗಳಲ್ಲಿ ನಾನು ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ತುರ್ತುಪರಿಸ್ಥಿತಿಯ ಮೂಲಕ ಸರ್ವಾಧಿಕಾರವನ್ನು ಹೇರಿದ ಜನರು ನಮ್ಮ ಮೇಲೆ ಸರ್ವಾಧಿಕಾರದ ಆರೋಪ ಮಾಡುತ್ತಿದ್ದಾರೆ. ಎಂದು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದರು.
“ನನಗೆ 23 ವರ್ಷವಾಗಿದ್ದಾಗ ನಾನು 16 ತಿಂಗಳ ಕಾಲ ಜೈಲಿನಲ್ಲಿದ್ದೆ ಮತ್ತು ಎರಡೂವರೆ ತಿಂಗಳ ಕಾಲ ಏಕಾಂಗಿ ಬಂಧನದಲ್ಲಿದ್ದೆ ಎಂದು ಈ ಹಿಂದೆಯೂ ಸಿಂಗ್ ಹೇಳಿದ್ದರು.
1975 ರಿಂದ 1977 ರವರೆಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸಲಹೆಯ ಮೇರೆಗೆ ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಭಾರತದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಮತ್ತು ಹಲವಾರು ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಗಿತ್ತು.