ಬೆಂಗಳೂರು: ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶನಿವಾರದ ಮೊದಲ ಪಂದ್ಯದಲ್ಲಿ ಗೆಲುವಿನ ಹಳಿಯೇರಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ 23 ರನ್ ಅಂತರದ ಸುಲಭ ಗೆಲುವು ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿಯು ವಿರಾಟ್ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 9 ವಿಕೆಟ್ ಕಳೆದುಕೊಂಡು 151 ರನ್ ಮಾತ್ರ ಪೇರಿಸಿತು. ಕನ್ನಡಿಗ ವಿಜಯ್ ಕುಮಾರ್ ವೈಶಾಖ್ ಅವರು ಮೂರು ವಿಕೆಟ್ ಕಿತ್ತು ಮಿಂಚಿದರು.
ಪಂದ್ಯದಲ್ಲಿ ಮಾಜಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ನಡುವಿನ ಶೀತಲ ಸಮರ ಜಗಜ್ಜಾಹೀರಾಗಿದೆ.
ಇದನ್ನೂ ಓದಿ:ಅತೀಕ್ ಅಹ್ಮದ್, ಅಶ್ರಫ್ ಪ್ರಕರಣ: ಯುಪಿ ಸಿಎಂ ಯೋಗಿ ವಿರುದ್ಧ ಓವೈಸಿ ವಾಗ್ದಾಳಿ
ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಅವರು ಡಗೌಟ್ ನಲ್ಲಿ ಕುಳಿತಿದ್ದ ಸೌರವ್ ಗಂಗೂಲಿಯನ್ನು ದಿಟ್ಟಿಸಿ ನೋಡಿದ್ದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು. ಪಂದ್ಯ ಮುಗಿದ ಬಳಿಕ ಆಟಗಾರರು ಪರಸ್ಪರ ಹಸ್ತಲಾಘವ ಮಾಡುತ್ತಿದ್ದ ವೇಳೆ ಕೊಹ್ಲಿ ಮತ್ತು ಗಂಗೂಲಿ ಶೇಕ್ ಹ್ಯಾಂಡ್ ಮಾಡಲಿಲ್ಲ. ಇದು ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದೆ.
ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾ ನಾಯಕತ್ವ ಕಳೆದುಕೊಂಡ ವೇಳೆ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿದ್ದರು. ಕೊಹ್ಲಿ ಏಕದಿನ ತಂಡದ ನಾಯಕತ್ ಪದಚ್ಯುತಿಗೆ ಗಂಗೂಲಿ ಕಾರಣ ಎನ್ನಲಾಗಿದೆ. ಹೀಗಾಗಿ ಅಂದಿನಿಂದ ಈ ದಿಗ್ಗಜರ ನಡುವಿನ ಸಮರ ಮುಂದುವರಿದಿದೆ.
ಕೊಹ್ಲಿ ಡೆಲ್ಲಿಯ ಪಾಂಟಿಂಗ್ ಅವರೊಂದಿಗೆ ಮಾತನಾಡುತ್ತಿದ್ದಾಗ ಗಂಗೂಲಿ ಹಾದುಹೋದರು, ಕೊಹ್ಲಿ ಮತ್ತು ಗಂಗೂಲಿ ಇಬ್ಬರೂ ಹಸ್ತಲಾಘವ ಮಾಡದಿರಲು ನಿರ್ಧರಿಸಿದ್ದಾರೆಯೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ ಅವರು ಇತರ ಆರ್ ಸಿಬಿ ಕ್ರಿಕೆಟಿಗರೊಂದಿಗೆ ಹಸ್ತಲಾಘವ ಮಾಡಿದರು.