ನ್ಯೂಯಾರ್ಕ್: ಭೂಮಿಯಂತೆಯೇ ಚಂದ್ರನ ನೆಲವೂ ವಾಸಯೋಗ್ಯವೇ ಎಂಬುದನ್ನು ತಿಳಿಯಲು ಇನ್ನೂ ಸಂಶೋಧನೆಗಳು ನಡೆಯುತ್ತಿರುವಾಗಲೇ, ಯಾರಾದರೂ ಚಂದ್ರನ ಮೇಲ್ಮೈನಲ್ಲಿ ಅದಾಗಲೇ ಮನೆಯನ್ನೇ ಕಟ್ಟಿಬಿಟ್ಟಿದ್ದರೆ?
ಚಂದಿರನ ಅಂಗಳದಲ್ಲಿ ಅಡ್ಡಾಡುತ್ತಿರುವ ಚೀನಾದ ಯೂಟು-2 ಮೂನ್ ರೋವರ್ ಕಣ್ಣಿಗೆ “ಮನೆಯಂತೆ ಕಾಣುವ ಘನಾಕೃತಿ’ಯೊಂದು ಬಿದ್ದಿದೆ. ಆ ಆಕೃತಿಯ ಫೋಟೋವನ್ನು ಕೂಡ ರೋವರ್ ಸೆರೆಹಿಡಿದು ಭೂಮಿಗೆ ರವಾನಿಸಿದೆ. ಚೀನಾದ ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಚಂದ್ರನ ವೋನ್ ಕರ್ಮನ್ ಎಂಬ ಕುಳಿಯನ್ನು ದಾಟಿ ಸಾಗುತ್ತಿದ್ದಾಗ ರೋವರ್‌ಗೆ ದೂರದಿಂದ ಈ ಮನೆಯಂಥ ನಿಗೂಢ ಆಕೃತಿ ಕಂಡುಬಂದಿದೆ. ಅದು ಕಲ್ಲಿನ ಕಂಬವೂ ಅಲ್ಲ, ಅನ್ಯಗ್ರಹ ಜೀವಿಗಳೂ ಅಲ್ಲ. ಆದರೆ, ಅದೇನೆಂದು ಕಂಡುಕೊಳ್ಳಲೇಬೇಕು ಎಂದು ಸ್ಪೇಸ್.ಕಾಮ್‌ನ ಪತ್ರಕರ್ತ ಆ್ಯಂಡ್ರೂ ಜೋನ್ಸ್ ಹೇಳಿದ್ದಾರೆ.
ಇದನ್ನೂ ಓದಿ:ನಾನು ಸತ್ತರೆ ಮಣ್ಣಿಗೆ ಬರಬೇಡ ಎಂದು ಅಣ್ಣನಿಗೆ ಹೇಳಿದ್ದೇನೆ :ಸಂಸದ ಜಿಗಜಿಣಗಿ
ಇದನ್ನು ಸದ್ಯಕ್ಕೆ “ನಿಗೂಢ ಮನೆ’ ಎಂದೇ ಕರೆಯಲಾಗಿದ್ದು, ಅದೇನೆಂದು ನಿಖರವಾಗಿ ಅರಿಯಲು ರೋವರ್ ಅನ್ನು ಅದರ ಸಮೀಪಕ್ಕೆ ಕಳುಹಿಸುವ ಕುರಿತು ವಿಜ್ಞಾನಿಗಳು ಚಿಂತನೆ ನಡೆಸಿದ್ದಾರೆ.
2019ರಿಂದಲೂ ಈ ರೋವರ್ ಚಂದ್ರನ ಮೇಲ್ಮೈನಲ್ಲಿ ಅಡ್ಡಾಡುತ್ತಾ, ಅಲ್ಲಿ ಸಿಕ್ಕ ಉಪಯುಕ್ತ ಮಾಹಿತಿಗಳನ್ನು ಚೀನಾದ ಬಾಹ್ಯಾಕಾಶ ಸಂಸ್ಥೆಗೆ ರವಾನಿಸುತ್ತಿದೆ.