ಮುಂಬಯಿ: ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರಿಗೆ ಕೊಲೆ ಬೆದರಿಕೆಗಳು ಬಂದಿವೆ ಎನ್ನುವ ಸುದ್ದಿಯೊಂದು ಪಾಪಾರಾಜಿ ಪೇಜ್ ವೊಂದು ಪೋಸ್ಟ್ ಮಾಡಿದ ಬಳಿಕ ವೈರಲ್ ಆಗಿದ್ದು, ನಟಿಯ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಬಿಟೌನ್ ಪಾಪರಾಜಿ ವೈರಲ್ ಭಯಾನಿ ತನ್ನ ಪೇಜ್ ನಲ್ಲಿ ನಟಿ ಪೂಜಾ ಹೆಗ್ಡೆ ಅವರಿಗೆ ಕೊಲೆ ಬೆದರಿಕೆಗಳು ಬಂದಿವೆ ಎನ್ನುವ ಪೋಸ್ಟ್ ವೊಂದನ್ನು ಹಾಕಿದ ಬಳಿಕ, ಈ ಸುದ್ದಿ ಹಬ್ಬಿದೆ.
ಇತ್ತೀಚೆಗೆ ನಟಿ ಪೂಜಾ ಹೆಗ್ಡೆ ದುಬೈನಲ್ಲಿ ಕ್ಲಬ್ ವೊಂದನ್ನು ಉದ್ಘಾಟನೆ ಮಾಡಲು ತೆರಳಿದ್ದರು. ಅಲ್ಲಿ ಕೆಲ ವಿಚಾರಗಳಿಗೆ ವಾಗ್ವಾದ ನಡೆದಿದೆ ಎನ್ನಲಾಗಿದ್ದು, ಆ ಬಳಿಕ ನಟಿಗೆ ಕೊಲೆ ಬೆದರಿಕೆಗಳು ಬಂದಿವೆ ಎಂದು ವೈರಲ್ ಭಯಾನಿ ಹೇಳಿದೆ.
ಈ ವಿಚಾರದ ಬಳಿಕ ಪೂಜಾ ಹೆಗ್ಡೆಯ ನೂರಾರು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. “ ಈ ರೀತಿ ಆಗಿರುವುದು ಒಳ್ಳೆಯದಲ್ಲ, ಆದಷ್ಟು ಬೇಗ ಭಾರತಕ್ಕೆ ಸುರಕ್ಷಿತವಾಗಿ ಬನ್ನಿ ಎಂದು ಕೆಲ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಆದರೆ ಈ ಬಗ್ಗೆ ನಟಿಯ ತಂಡ ಸ್ಪಷ್ಟಪಡಿಸಿದ್ದು,”ಈ ನಕಲಿ ಸುದ್ದಿಯನ್ನು ಯಾರು ಪ್ರಾರಂಭಿಸಿದರು ಎಂಬುದು ನಮಗೆ ತಿಳಿದಿಲ್ಲ. ಇದು ಸಂಪೂರ್ಣವಾಗಿ ಸುಳ್ಳು” ಎಂದು ʼಪ್ರೀ ಪ್ರೆಸ್ ಜರ್ನಲ್ʼಗೆ ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ನಟಿ ಪೂಜಾ ಹೆಗ್ಡೆ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.
ನಟಿ ದುಬೈಯಿಂದ ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎಂದು ವರದಿ ತಿಳಿಸಿದೆ.
ಈ ಮಧ್ಯ ವೈರಲ್ ಭಯಾನಿಯ ಪೋಸ್ಟ್ ಕೂಡ ಡಿಲೀಟ್ ಆಗಿದೆ.