Advertisement

ಮನೆಗೆ ಬಂದಿದ್ದು ಕೃಷ್ಣಬೈರೇಗೌಡರು ಮರೆತಿದ್ದಾರಾ?

12:24 AM Apr 10, 2019 | Lakshmi GovindaRaju |

ಬೆಂಗಳೂರು: ಕೇಂದ್ರದಿಂದ ಹೆಚ್ಚು ಅನುದಾನ ಕೊಡಿಸಿ ಎಂದು ನನ್ನ ಮನೆ ಬಾಗಿಲಿಗೆ ಬಂದಿದ್ದನ್ನು ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ಮರೆತಿದ್ದಾರೆಯೇ ಅಥವಾ ಇದು ಕಾಂಗ್ರೆಸಿಗರ 420 ಬುದ್ಧಿ ಎನ್ನಬೇಕೇ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ವಾಗ್ಧಾಳಿ ನಡೆಸಿದರು.

Advertisement

ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ವೀರಾಂಜನೇಯ ದೇವಸ್ಥಾನದ ಸಮೀಪ ಮಂಗಳವಾರ ಬೆಳಿಗ್ಗೆ ಪ್ರಚಾರ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸದಾನಂದಗೌಡರು ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಕೃಷ್ಣ ಬೈರೇಗೌಡ ಆರೋಪಿಸುತ್ತಿದ್ದಾರೆ. ಇದು ಮರೆಗುಳಿತನವೇ, ಚುನಾವಣಾ ರಾಜಕೀಯವೇ ಎಂಬುದನ್ನು ಸ್ಪಷ್ಟಪಡಿಸಬೇಕು.

ಒಂದೂವರೆ ತಿಂಗಳ ಹಿಂದಷ್ಟೇ ದೆಹಲಿಯ ನನ್ನ ಮನೆಯಲ್ಲಿ ರಾಜ್ಯದ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರನ್ನು ಆಹ್ವಾನಿಸಿ ಚರ್ಚೆ ನಡೆಸಿ ಕೇಂದ್ರದಿಂದ ಹೆಚ್ಚು ಅನುದಾನ ಕೊಡಿಸಿದ್ದನ್ನು ಕೃಷ್ಣ ಬೈರೇಗೌಡರು ಮರೆತಿರಬೇಕು. ಈ ಸಭೆಗೆ ಕೃಷ್ಣ ಬೈರೇಗೌಡರೂ ಆಗಮಿಸಿದ್ದರು ಎಂದು ತಿರುಗೇಟು ನೀಡಿದರು.

ಯುಪಿಎ ಸರಕಾರ 2009-2014 ರಲ್ಲಿ ರಾಜ್ಯಕ್ಕೆ 74.5 ಸಾವಿರ ಕೋಟಿ ರೂ. ಅನುದಾನ ನೀಡಿತ್ತು. ಬಿಜೆಪಿಯು 2014-2019 ರಲ್ಲಿ 2.42 ಲಕ್ಷ ಕೋಟಿ ರೂ. ಅನುದಾನವನ್ನು ಅಂದರೆ ಮೂರುಪಟ್ಟು ಅನುದಾನ ನೀಡಿದೆ ಎಂದರು.

Advertisement

ಬುರ್ಖಾ ಹಾಕಿಕೊಂಡು ಮತಕೇಳಬೇಕಿದೆ: ಮೋದಿ ಮುಖವಾಡ ಹಾಕಿಕೊಂಡು ಬಿಜೆಪಿಯವರು ಮತ ಕೇಳುತ್ತಿದ್ದಾರೆ ಎಂದು ಕಾಂಗ್ರೆಸಿಗರು ಆರೋಪಿಸುತ್ತಿದ್ದಾರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಇದಕ್ಕೆ ಉತ್ತರಿಸಿದ ಸದಾನಂದಗೌಡರು, ಅಭಿವೃದ್ಧಿ ಕಾರ್ಯಗಳನ್ನು ಮಾಡದ ಕಾಂಗ್ರೆಸಿಗರು ಬುರ್ಖಾ ಹಾಕಿಕೊಂಡು ಮತ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ ನಾವು ಮತ ಯಾಚಿಸುತ್ತಿದ್ದೇವೆ. ಕಾಂಗ್ರೆಸಿಗರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಹೆಸರೇಳಿಕೊಂಡು ಮತ ಯಾಚಿಸಲಿ ಎಂದು ವ್ಯಂಗ್ಯವಾಡಿದರು.

ಬಾಡಿಗೆ ಜನರ ಸಭೆ: ಬಾಡಿಗೆ ಜನರನ್ನು ಕರೆತಂದು ಸಭೆ ನಡೆಸುವ ಸ್ಥಿತಿಗೆ ನಮ್ಮ ವಿರೋಧಿಗಳು ಬಂದು ನಿಂತಿದ್ದಾರೆ. ಕುರುಬರಹಳ್ಳಿಯಲ್ಲಿ ನಡೆದ ಸಭೆಗೆ ತಲಾ 300 ರೂ.ನಂತೆ ನೀಡಿ ಸ್ತ್ರೀ ಶಕ್ತಿ ಸಂಘದವರನ್ನು ಕರೆದುಕೊಂಡು ಬಂದಿದ್ದರು.

ಇಂತಹ ಕೆಲಸಕ್ಕೆ ಮುಖ್ಯಮಂತ್ರಿಗಳು ಮತ್ತು ಈ ಕ್ಷೇತ್ರದ ಅಭ್ಯರ್ಥಿ ಇಳಿಯಬಾರದಿತ್ತು ಎಂದು ವಿಷಾದಿಸಿದರು. ಸಂಸದರ ಅನುದಾನ ಬಳಕೆಯಲ್ಲಿ ನಾನು ನಂ.1 ಎಂದು ಬಿ ಪ್ಯಾಕ್‌ ಬಿಡುಗಡೆ ಮಾಡಿದ ವರದಿ ಹೇಳಿದೆ. ರಾಜ್ಯದ ಯಾವ ಸಂಸದರೂ ಮಾಡದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಇದು ಸಾಧ್ಯವಾಯಿತು ಎಂದರು.

ಉದ್ಘಾಟನೆಗೆ ಬಾರದ ಸಚಿವರು: ಜಾಲಹಳ್ಳಿಯಲ್ಲಿ ಪಾನ್ಪೋರ್ಟ್‌ ಕಚೇರಿ ಉದ್ಘಾಟನೆಗೆ ಆಹ್ವಾನಿಸಿದರೂ ಕೃಷ್ಣ ಬೈರೇಗೌಡ ಬರಲಿಲ್ಲ. ಕೇಂದ್ರೀಯ ವಿದ್ಯಾಲಯ ಉದ್ಘಾಟನೆಗೂ ಆಗಮಿಸಲಿಲ್ಲ. ಇದು ಯಾವ ರಾಜಕೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಹರೀಶ್‌, ಶಂಕರಪ್ಪ, ಪ್ರಸನ್ನ, ರಾಜಣ್ಣ, ಎಂ.ನಾಗರಾಜ, ರಾಜೇಂದ್ರ ಕುರ್ಮಾ, ಶಿವಾನಂದ…, ರಂಗಣ್ಣ, ಗಂಗಹನುಮಯ್ಯ, ಜಯಸಿಂಹ ಮತ್ತಿತರರು ಹಾಜರಿದ್ದರು. ಮರೆತಿದ್ದಾರೆಯೇ ಅಥವಾ ಇದು ಕಾಂಗ್ರೆಸಿಗರ 420 ಬುದ್ಧಿ ಎನ್ನಬೇಕೇ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next