Advertisement

ಹೈಕಮಾಂಡ್‌ ಸೂಚನೆ ಮೀರಿದರೇ ಬಿಎಸ್‌ವೈ?

11:41 PM Mar 31, 2023 | Team Udayavani |

ಮೈಸೂರು: ಇದರಲ್ಲಿ ಅನುಮಾನವೇ ಬೇಡ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೈಕಮಾಂಡ್‌ ಸೂಚನೆಯನ್ನು ಮತ್ತೊಮ್ಮೆ ಮೀರಿದ  ಸನ್ನಿವೇಶ ಇದು.

Advertisement

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ವರುಣ ಕ್ಷೇತ್ರದಿಂದ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್‌ ಸೂಚಿಸಿದರೂ ಯಡಿಯೂರಪ್ಪ ಅವರಿಗೆ ಇದು ಬಿಲ್‌ಕುಲ್‌ ಒಪ್ಪಿಗೆ ಇಲ್ಲ. ಪುತ್ರ ವಿಜಯೇಂದ್ರ  ಸ್ಪರ್ಧೆಯ ವಿಚಾರದಲ್ಲಿ ತಮ್ಮ ನಿರ್ಧಾರವೇ ಅಂತಿಮ ಎಂಬ ಸಂದೇಶವನ್ನು ಯಡಿಯೂರಪ್ಪ ಹೈಕಮಾಂಡ್‌ಗೆ ಸ್ಪಷ್ಟವಾಗಿ ರವಾನಿಸಿದ್ದಾರೆ. ಈ ವಿಚಾರದಲ್ಲಿ ಹೈಕಮಾಂಡ್‌ ಮನವೊಲಿಸುವೆ ಎಂಬ ವಿಶ್ವಾಸದ ಮಾತನ್ನೂ ಆಡಿದ್ದಾರೆ.

ಯಡಿಯೂರಪ್ಪ ಅವರ ಈ ನಿಲುವನ್ನು  ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಹೈಕಮಾಂಡ್‌ ಅಷ್ಟು ಸುಲಭವಾಗಿ ತಳ್ಳಿ ಹಾಕಲು ಸಾಧ್ಯವಿಲ್ಲ. ರಾಜ್ಯದಲ್ಲಿ ಇವತ್ತಿಗೂ ಬಿಜೆಪಿಯಲ್ಲಿರುವ ಏಕೈಕ ಮಾಸ್‌ ಲೀಡರ್‌ ಯಡಿಯೂರಪ್ಪ ಅವರೇ ಆಗಿದ್ದಾರೆ. ಯಡಿಯೂರಪ್ಪ ಚುನಾವಣ ರಾಜಕಾರಣದಿಂದ ನಿವೃತ್ತಿಯಾಗಿರಬಹುದು. ಆದರೆ ಬಿಜೆಪಿಗೆ ಯಡಿಯೂರಪ್ಪ ಅವರ ಹಾಗೇ ಮತ ತಂದುಕೊಡಬಲ್ಲ ಮತ್ತೂಬ್ಬ ನಾಯಕ ಆ ಪಕ್ಷದಲ್ಲಿ ಇನ್ನೂ ರೂಪುಗೊಂಡಿಲ್ಲ.

ಯಡಿಯೂರಪ್ಪ ಅವರಿಗೆ ಕಳೆದ ಬಾರಿ ವರುಣದಲ್ಲಿ ತಮ್ಮ ಪುತ್ರ ವಿಜಯೇಂದ್ರಗೆ ಟಿಕೆಟ್‌ ಬೇಕಿತ್ತು. ಹೈಕಮಾಂಡ್‌ ನಿರಾಕರಿಸಿತು. ಯಡಿಯೂರಪ್ಪ ವ್ಯಥೆಪಟ್ಟರು. ಈ ಬಾರಿ ವಿಜಯೇಂದ್ರ ಅವರಿಗೆ ಇಲ್ಲಿ ನಿಲ್ಲುವಂತೆ ಹೈಕಮಾಂಡ್‌ ಸೂಚಿಸಿದೆ. ಆದರೆ ವಿಜಯೇಂದ್ರ ಅವರಿಗಾಗಲಿ, ಅವರ ತಂದೆ ಯಡಿಯೂರಪ್ಪ ಅವರಿಗೆ ಆಗಲಿ ವರುಣ ಸ್ಪರ್ಧೆ ಬೇಡವೇ ಬೇಡ. ಆದರೆ  ಹೈಕಮಾಂಡ್‌ಗೆ ಬೇಕಿದೆ. ಕಳೆದ ಬಾರಿಯ ಸ್ಥಿತಿಯ ತದ್ವಿರುದ್ಧವಿದು. ಈ ಬಾರಿ ಯಡಿಯೂರಪ್ಪ ಅವರು ಮಾತ್ರ ಬಹಳ ಸ್ಪಷ್ಟವಾಗಿ, ದಿಟ್ಟತನದಿಂದ ವಿಜಯೇಂದ್ರ ವರುಣದಲ್ಲಿ ಸ್ಪರ್ಧಿಸಲಾರ. ಶಿಕಾರಿಪುರದಿಂದಲೇ ಆತನ ಸ್ಪರ್ಧೆ. ಅದು ತಾವು ತೆರವು ಮಾಡಿದ ಕ್ಷೇತ್ರ. ಅಲ್ಲಿ ಆತನೇ ಅಭ್ಯರ್ಥಿ. ಇದು ನನ್ನ ನಿರ್ಧಾರ. ಹೈಕಮಾಂಡ್‌ ಮನವೊಲಿಸುವೆ ಎಂದು ಬಹಿರಂಗವಾಗಿ ಹೇಳುತ್ತಾ ವರಿಷ್ಠರಿಗೂ ಸಂದೇಶ ರವಾನಿಸಿದ್ದಾರೆ.

ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಆಪ್ತರು  ವರುಣ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಹೈಕಮಾಂಡ್‌ ಸೂಚನೆ ಹಿನ್ನೆಲೆಯನ್ನು ಅವರದೇ ದೃಷ್ಟಿಕೋನದಿಂದ ಅರ್ಥೈಸುತ್ತಿದ್ದಾರೆ. ಇದು ವರುಣ ಕ್ಷೇತ್ರದಲ್ಲಿ ಕಾಂಗ್ರೆಸಿನ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕುವ ತಂತ್ರ ಎಂಬುದಕ್ಕಿಂತ ವಿಜಯೇಂದ್ರ ಅವರನ್ನು ವರುಣದಲ್ಲಿಯೇ ಕಟ್ಟಿ ಹಾಕಬೇಕೆಂಬ ಪಕ್ಷದ ಒಂದು ಬಣದ ಒಳ ಏಟು ಆಗಿರಬಹುದು. ಇದು ಬಿಜೆಪಿಯ ಒಂದು ಬಣದ “ಶಿಕಾರಿ’ಯೇ ಎಂಬ ಅನುಮಾನ ಕೆಲವರಿಗೆ ಬಲವಾಗಿ ಕಾಡಿದೆ.

Advertisement

ಆಗ 2018ರ ವಿಧಾನಸಭಾ ಚುನಾವಣ ರಾಜಕೀಯ ಸನ್ನಿವೇಶ ಭಿನ್ನವಾಗಿತ್ತು. ಸಿದ್ದರಾಮಯ್ಯ ಅಂದು ಮುಖ್ಯಮಂತ್ರಿಯಾಗಿದ್ದರು. ಆದರೆ ಸಿದ್ದರಾಮಯ್ಯ ಈಗ ವಿಪಕ್ಷ ನಾಯಕರು. ಅವರ ವಿರುದ್ಧ ವರುಣದಲ್ಲಿ ಸ್ಪರ್ಧೆಗೆ ತಮ್ಮ ಪುತ್ರನನ್ನು ನಿಲ್ಲಿಸಿದರೆ ಶಿಕಾರಿಪುರದ ತಮ್ಮ ಪಾರಂಪರಿಕ ಕ್ಷೇತ್ರದಲ್ಲಿ ಧಕ್ಕೆಯಾದರೆ ಎಂಬ ಭಯವೂ ಕಾಡಿರಬಹುದು.

ಶಿಕಾರಿಪುರದಲ್ಲಿ ಸುಮಾರು 31 ಸಾವಿರ ಹಿಂದುಳಿದ ವರ್ಗಗಳಿಗೆ ಸೇರಿದ ಮತದಾರರಿದ್ದಾರೆ. ಇದರಲ್ಲಿ ಕುರುಬ ಸಮಾಜದ ಸುಮಾರು 19 ಸಾವಿರ ಮತದಾರರಿದ್ದಾರೆ ಎಂಬುವುದು ಅವರ ಲೆಕ್ಕಾಚಾರ. ವರುಣ ಕ್ಷೇತ್ರದಲ್ಲಿ ತಮ್ಮ ಪುತ್ರನೇ ಸ್ಪರ್ಧಿಸಬೇಕೆಂಬ ರಾಜಕೀಯ ಅನಿವಾರ್ಯ ಪರಿಸ್ಥಿತಿ ಏನೂ ಈಗಿಲ್ಲ. ಹೀಗಿರುವಾಗ ತಾವು ತೆರವು ಮಾಡಿರುವ ಶಿಕಾರಿಪುರದಲ್ಲೇ ಪುತ್ರ ವಿಜಯೇಂದ್ರ ಸ್ಪರ್ಧಿಸಲಿ ಎಂಬ ಧೋರಣೆಯಡಿಯೂರಪ್ಪ ಅವರದ್ದು ಎಂಬುದು ಅವರ ಆಪ್ತ ಮೂಲಗಳ ಹೇಳಿಕೆ.

ಯಡಿಯೂರಪ್ಪ ಈಗ ಚೆಂಡನ್ನು ಬಿಜೆಪಿ ಹೈಕಮಾಂಡ್‌ ಅಂಗಳಕ್ಕೆ ತಿರುಗಿ ಹಾಕಿದ್ದಾರೆ. ಚೆಂಡು ಆ ಅಂಗಳದಲ್ಲಿಯೇ ಇರಬಹುದೆಂಬ ವಿಶ್ವಾಸದ ಮಾತನ್ನೂ ಆಡಿದ್ದಾರೆ.

-ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next