Advertisement

ಅತಿಸಾರ, ತಲೆನೋವು, ವಾಂತಿ ಇವುಗಳೂ ಕೋವಿಡ್ ಸೋಂಕಿನ ಲಕ್ಷಣಗಳು!

04:42 PM Jul 05, 2020 | Hari Prasad |

ನವದೆಹಲಿ: ಭಾರತಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ 19 ವೈರಸ್ ಈಗಾಗಲೇ ಜನರಲ್ಲಿ ಭೀತಿಯ ವಾತಾವರಣವನ್ನು ಮೂಡಿಸಿದೆ.

Advertisement

ಈ ಸೋಂಕಿನ ಲಕ್ಷಣವೂ ಸಹ ದೇಶದಿಂದ ದೇಶಕ್ಕೆ ಹಾಗೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿಯೇ ಇರುವುದು ಈಗಾಗಲೇ ಸಾಬೀತುಗೊಂಡಿದೆ.

ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರ (ಸಿಡಿಸಿ) ಕಳೆದ ಏಪ್ರಿಲ್ ನಲ್ಲಿ ಕೋವಿಡ್ 19 ಸೋಂಕಿನ ಲಕ್ಷಣಗಳ ಪಟ್ಟಿಗೆ ಆರು ಹೊಸ ಲಕ್ಷಣಗಳನ್ನು ಸೇರ್ಪಡೆಗೊಳಿಸಿತ್ತು. ಮತ್ತು ಅದರಲ್ಲಿ ಅತಿಸಾರದ (ಬೇಧಿ) ಲಕ್ಷಣವೂ ಒಂದಾಗಿತ್ತು.

ಇದೀಗ ಕೋವಿಡ್ 19 ಸೋಂಕಿತರಲ್ಲಿ ಅತಿಸಾರ, ತಲೆನೋವು ಹಾಗೂ ವಾಂತಿಯ ಲಕ್ಷಣಗಳು ಕಾಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಹೈದ್ರಾಬಾದ್ ನಲ್ಲಿರುವ ಚೆಸ್ಟ್ ಹಾಗೂ ಕಿಂಗ್ ಕೋಠಿ ಆಸ್ಪತ್ರೆಯಲ್ಲಿರುವ ಕೋವಿಡ್ 19 ರೋಗಿಗಳಲ್ಲಿ ಅತಿಸಾರ, ತಲೆನೋವಿ ಹಾಗೂ ವಾಂತಿಯ ಲಕ್ಷಣಗಳು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಳಂಬಗೊಳಿಸುತ್ತಿವೆ ಎಂದು ಇಲ್ಲಿನ ವೈದ್ಯರು ಹೇಳುತ್ತಿದ್ದಾರೆ.

Advertisement

ಉಸಿರಾಟದ ತೊಂದರೆಗಳ ಬದಲಿಗೆ ಈಗ ಹೊಸ ರೋಗಿಗಳಲ್ಲಿ ಅತಿಸಾರ, ತಲೆನೋವು ಹಾಗೂ ವಾಂತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಅಂತಹ ಲಕ್ಷಣಗಳಿಂದ ಬಳಲುತ್ತಿರುವವರನ್ನೂ ಇದೀಗ ಕೋವಿಡ್ 19 ಸೋಂಕುಪತ್ತೆಗೆ ಒಳಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ಇಲ್ಲಿನ ಆಸ್ಪತ್ರೆ ಮೂಲಗಳು ಇಂಡಿಯಾ ಟುಡೆ ವೆಬ್ ಸೈಟ್ ಗೆ ಮಾಹಿತಿ ನೀಡಿವೆ.

ಈ ಮಾರಣಾಂತಿಕ ವೈರಸ್ ಭಾರತದಲ್ಲಿನ ಋತುಮಾನಕ್ಕೆ ಅನುಗುಣವಾಗಿ ತನ್ನನ್ನು ರೂಪಾಂತರಿಸಿಕೊಳ್ಳುತ್ತಿದೆ ಎಂಬ ಅಭಿಪ್ರಾಯವನ್ನೂ ಸಹ ಕೆಲವೊಂದು ವೈದ್ಯರು ವ್ಯಕ್ತಪಡಿಸುತ್ತಿದ್ದಾರೆ.

ಇದು ಹೇಗೆಂದರೆ ಮಳೆಗಾಲದ ಪ್ರಾರಂಭದಲ್ಲಿ ಆಹಾರ ಪದ್ಧತಿ ವ್ಯತ್ಯಯದಿಂದಾಗಿ ಅತಿಸಾರ, ವಾಂತಿಯಂತಹ ಸಮಸ್ಯೆಗಳು ನಮ್ಮಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಇದನ್ನೇ ಅವಕಾಶವಾಗಿ ಬಳಸಿಕೊಳ್ಳುತ್ತಿರುವ ಈ ವೈರಸ್ ಅಂತಹ ಸಮಸ್ಯೆ ಇರುವವರಲ್ಲಿ ಮೊದಲಿಗೆ ಶ್ವಾಸಕೋಶಕ್ಕೆ ದಾಳಿ ಮಾಡುವ ಬದಲಿಗೆ ಅವರ ಜಿರ್ಣಾಂಗ ವ್ಯವಸ್ಥೆಯ ಮೇಲೆಯೇ ದಾಳಿ ಮಾಡುತ್ತಿದೆ ಎಂಬ ಮಾತನ್ನು ಸಹ ಕೆಲವು ವೈದ್ಯರು ಇದೀಗ ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ದೇಶಾದ್ಯಂತ ಅಲ್ಲಿನ ವಾತಾವರಣ, ವ್ಯವಸ್ಥೆಗೆ ಅನುಗುಣವಾಗಿ ಈ ವೈರಸ್ ಬದಲಾಗುತ್ತಾ ಇನ್ನಷ್ಟು ಬಲಿಷ್ಠವಾಗುತ್ತಿರುವುದು ವೈದ್ಯಸಮೂಹದ ಆತಂಕಕ್ಕೆ ಕಾರಣವಾಗಿರುವುದಂತೂ ಸುಳ್ಳಲ್ಲ.

ಇದೀಗ ಸಿಡಿಸಿ ಪಟ್ಟಿ ಮಾಡಿರುವ ಕೋವಿಡ್ 19 ರೋಗದ ಲಕ್ಷಣಗಳ ಪಟ್ಟಿ ಇಲ್ಲಿದೆ:

ಜ್ವರ ಅಥವಾ ನಡುಕ

ಕೆಮ್ಮು

ಉಸಿರಾಟ ಪ್ರಕ್ರಿಯೆ ಕುಂಠಿತಗೊಳ್ಳುವುದು ಅಥವಾ ಉಸಿರಾಟದಲ್ಲಿ ತೊಂದರೆ

ಸುಸ್ತು

ಸ್ನಾಯು ಅಥವಾ ಮೈ-ಕೈ ನೋವು

ತಲೆನೋವು

ರುಚಿ ಅಥವಾ ವಾಸನೆ ಗ್ರಹಿಕೆ ಇಲ್ಲದಿರುವುದು

ಗಂಟಲಿನಲ್ಲಿ ಊತ

ಶೀತ

ತಲೆ ಸುತ್ತುವಿಕೆ ಅಥವಾ ವಾಂತಿಯಾಗುವಿಕೆ

ಅತಿಸಾರ (ಬೇಧಿ)

Advertisement

Udayavani is now on Telegram. Click here to join our channel and stay updated with the latest news.

Next