Advertisement

28ರಿಂದ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ

11:01 AM May 25, 2018 | Team Udayavani |

ಕಲಬುರಗಿ: ಮಕ್ಕಳಿಗೆ ಮಾರಕವಾಗಿರುವ ಅತಿಸಾರ ಭೇದಿ ಕಾಯಿಲೆ ನಿಯಂತ್ರಿಸುವ ನಿಟ್ಟಿನಲ್ಲಿ ಮೇ 28ರಿಂದ ಒಂದು ವಾರಗಳ ಕಾಲ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಮಾಧವರಾವ ಕೆ. ಪಾಟೀಲ ತಿಳಿಸಿದರು.

Advertisement

ನಗರದ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 5 ವರ್ಷದೊಳಗಿನ ಸುಮಾರು 3.25 ಲಕ್ಷ ಮಕ್ಕಳಿಗೆ ಗುರಿಯಾಗಿಟ್ಟುಕೊಂಡು ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ
ಕಾರ್ಯಕ್ರಮ ಆಚರಿಸಲಾಗುತ್ತಿದೆ. ಕಳೆದ ವರ್ಷ 5 ವರ್ಷದೊಳಗಿನ 787 ಮಕ್ಕಳು ಅತಿಸಾರ ಬೇಧಿಯಿಂದ ಬಳಲಿದ್ದರು. ಈ ಪೈಕಿ ಯಾವುದೇ ಸಾವು ಸಂಭವಿಸಿಲ್ಲ. ಬೇಧಿಯಿಂದ ಬಳಲಿದ ಒಂದು ವರ್ಷದೊಳಗಿನ 731 ಶಿಶುಗಳ ಪೈಕಿ 4 ಶಿಶುಗಳು ಸಾವಿಗೀಡಾಗಿದ್ದಾರೆ ಎಂದು ಹೇಳಿದರು.

ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದಲ್ಲಿ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ 5 ವರ್ಷದೊಳಗಿನ ಮಕ್ಕಳು ಅತಿಸಾರ ಬೇಧಿಯಿಂದ ಬಳಲದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಹಾಗೂ ಒಆರ್‌ಎಸ್‌ ಮತ್ತು ಝಿಂಕ್‌ ಮಾತ್ರೆಗಳನ್ನು ಉಪಯೋಗಿಸುವ ಕ್ರಮದ ಬಗ್ಗೆ ಜಾಗೃತಿ ಮೂಡಿಸುವರು.

ಮಕ್ಕಳು ಬೇಧಿಯಿಂದ ಬಳಲುತ್ತಿದ್ದರೆ ಅವರಿಗೆ ಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗುವುದು. ಪ್ರತಿಗ್ರಾಮದಲ್ಲಿ ಸಾರ್ವಜನಿಕರಿಗೆ ಒಆರ್‌ಎಸ್‌ ದ್ರಾವಣ ತಯಾರಿಕಾ ಕ್ರಮಗಳು, ವೈಯಕ್ತಿಕ ಸ್ವತ್ಛತೆ ಹಾಗೂ ಊಟಕ್ಕೆ ಮುಂಚೆ ಕೈ ತೊಳೆಯುವ ಕ್ರಮಗಳ ಬಗ್ಗೆ ತಿಳಿಹೇಳಲಾಗುವುದು ಎಂದು ತಿಳಿಸಿದರು.

ಮಕ್ಕಳ ಸಾವಿಗೆ ನಿರ್ಜಲೀಕರಣ ಪ್ರಮುಖ ಕಾರಣವಾಗಿದೆ. ಅತಿಸಾರ ಭೇದಿಯಿಂದ ಪೀಡಿತವಾಗುವ ಮಗುವಿಗೆ ಮೇಲಿಂದ ಮೇಲೆ ಒಆರ್‌ಎಸ್‌ ದ್ರಾವಣ ಕುಡಿಸುವ ಮೂಲಕ ನಿರ್ಜಲೀಕರಣ ತಡೆಗಟ್ಟಬಹುದು. ಜಿಲ್ಲೆಯ ಎಲ್ಲ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಒಆರ್‌ಟಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ದೈಹಿಕ ಶಿಕ್ಷಕ ಹಾಗೂ ಆರೋಗ್ಯ ಕಾರ್ಯಕರ್ತರ ಮೂಲಕ ಎಲ್ಲ ಶಾಲಾ ಮಕ್ಕಳಿಗೆ ಊಟಕ್ಕೂ ಮುಂಚೆ ಸ್ವತ್ಛವಾಗಿ ಕೈತೊಳೆಯುವ ಮಾದರಿಗಳನ್ನು ರೂಢಿ ಮಾಡಿಸಲಾಗುವುದು.

Advertisement

ಶಾಲೆಗಳಲ್ಲಿರುವ ನೀರಿನ ತೊಟ್ಟಿಗಳನ್ನು ಸ್ವತ್ಛಗೊಳಿಸಲು ಕ್ರಮ ಜರುಗಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲ ನೀರು ಸಂಗ್ರಹಾಗಾರಗಳನ್ನು ಸ್ವತ್ಛಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಆರ್‌ಸಿಎಚ್‌ ವೈದ್ಯಾಧಿಕಾರಿ ಡಾ| ಅಂಬಾರಾಯ ಎಸ್‌. ರುದ್ರವಾಡಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೀರೇಶ, ಜಿಲ್ಲಾ ಶುಶ್ರೂಷಕ ಅಧಿಕಾರಿ ಪದ್ಮಿನಿ ಕಿರಣಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿ ಶ್ರೀಶೈಲ ದಿವಟಗಿ
ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next