Advertisement

ಅತಿಸಾರ ಭೇದಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ 

05:29 PM May 23, 2018 | Team Udayavani |

ಬಾಗಲಕೋಟೆ: ಅತಿಸಾರ ಭೇದಿ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಮೇ 28 ರಿಂದ ಜೂನ್‌ 9 ರವರೆಗೆ ಹಮ್ಮಿಕೊಂಡ ಕಾರ್ಯಕ್ರಮವನ್ನು ಸೂಕ್ತವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಂ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಈ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಶಾ ಕಾರ್ಯಕರ್ತರ ಮೂಲಕ ಮನೆ ಮನೆಗೆ ಭೇಟಿ ನೀಡುವ ಮೂಲಕ ಒಆರ್‌ಎಸ್‌ ದ್ರಾವಣ ಮತ್ತು ಜಿಂಕ್‌ ಮಾತ್ರೆ ವಿತರಿಸುವ ವ್ಯವಸ್ಥೆಯಾಗಬೇಕು. ಅಲ್ಲದೇ ಮಕ್ಕಳಲ್ಲಿ ಅಶುಚಿತ್ವದಿಂದಾಗಿ ಅತಿಸಾರ ಭೇದಿ ಉಂಟಾಗುತ್ತಿದ್ದು, ಮಕ್ಕಳು ಊಟಕ್ಕೆ ಮೊದಲು ಹಾಗೂ ಶೌಚಾಲಯದ ನಂತರ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು. ನಗರ ಮತ್ತು ಗ್ರಾಮೀಣ ಭಾಗದ ಶಾಲೆಗಳಲ್ಲಿ ಕೈ ತೊಳೆದುಕೊಳ್ಳುವ ವಿಧಾನವನ್ನು ಅಚ್ಚುಕಟ್ಟಾಗಿ ತಿಳಿಸುವ ಕೆಲಸವಾಗಬೇಕು. ಇದರಿಂದ ಮಕ್ಕಳಲ್ಲಿ ಅತಿಸಾರ ಭೇದಿ ಆಗುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಮೈಕ್ರೋ ಪ್ಲಾನ್‌ ಮಾಡಿ ಕ್ರಮ ಜರುಗಿಸಲು ಸೂಚಿಸಿದರು. ಅಲ್ಲದೇ ಆಶಾ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಗಳಿಗೆ ಒಆರ್‌ಎಸ್‌ ಮತ್ತು ಜಿಂಕ್‌ ಮಾತ್ರೆಗಳು ತಲುಪಿಸಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯ 6 ತಾಲೂಕುಗಳು ಸೇರಿ 0 ದಿಂದ 5 ವರ್ಷದೊಳಗಿನ ಮಕ್ಕಳು ಒಟ್ಟು 2,29,618 ಇದ್ದು, ಇದಕ್ಕಾಗಿ 1,311 ಆಶಾ ಕಾರ್ಯಕರ್ತರು ಕಾರ್ಯನಿರ್ವಹಿಸಲಿದ್ದಾರೆ. ಇದರ ಜೊತೆಗೆ ಅತಿಸಾರ ಭೇದಿ ಸಮಸ್ಯೆಗೆ ಒಆರ್‌ಎಸ್‌ ಮತ್ತು ಜಿಂಕ್‌ ಸರಿಯಾದ ಚಿಕಿತ್ಸೆಯಾಗಿದ್ದು, ಮಕ್ಕಳಲ್ಲಿ ಅತಿಸಾರ ಭೇದಿಯಾದಾಗ ಕೈಗೊಳ್ಳಬೇಕಾಗ ಕ್ರಮಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ|ಎ.ಎನ್‌.ದೇಸಾಯಿ ಸಭೆಗೆ ವಿವರಿಸಿದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ ಸುರಳಕರ, ಡಾ|ಮುಕುಂದ ಗಲಗಲಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|ಎ.ಕೆ.ಅನಂತರೆಡ್ಡರ, ಡಿ.ಎಂ. ಗಂಜ್ಯಾಳ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next