Advertisement
ಈ ಯೋಜನೆ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ಇಲ್ಲ. ಇನ್ನೊಂದೆಡೆ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಯಲ್ಲಿ ಆರೋಗ್ಯ ಕರ್ನಾಟಕ ಯೋಜನೆ ವಿಲೀನಗೊಳಿಸಿರುವುದರಿಂದ ಆರೋಗ್ಯ ಕರ್ನಾಟಕ ಸ್ಮಾರ್ಟ್ ಕಾರ್ಡ್‌ಗಳು ಆಟಕ್ಕುಂಟು ಲೆಕ್ಕಿಲ್ಲ ಎನ್ನುವಂತಾಗಿದೆ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ ವರ್ಷ ವಾಜಪೇಯಿ ಆರೋಗ್ಯ ಶ್ರೀ, ರಾಜೀವ ಆರೋಗ್ಯ ಭಾಗ್ಯ, ಯಶಸ್ವಿನಿ ಯೋಜನೆ, ಮುಖ್ಯಮಂತ್ರಿ ಸಾಂತ್ವನ ಹರೀಶ ಯೋಜನೆ ಸೇರಿದಂತೆ ಮುಂತಾದ ಯೋಜನೆಗಳನ್ನು ಒಟ್ಟುಗೂಡಿಸಿ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿತ್ತು. ಈ ಯೋಜನೆಯನ್ನು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಎಂದೇ ಕರೆಯಲಾಗುತ್ತಿತ್ತು. ಯೋಜನೆಯಡಿ ರೋಗಿಗೆ ಉಚಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ 11 ಪ್ರಮುಖ ಆಸ್ಪತ್ರೆಗಳಲ್ಲಿ ಆರೋಗ್ಯ ಕರ್ನಾಟಕ ಹೆಸರಲ್ಲಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗಿದೆ.
89,293 ಕಾರ್ಡ್‌ಗಳ ವಿತರಣೆ: ಆರೋಗ್ಯ ಕರ್ನಾಟಕ ಯೋಜನೆಯಡಿ ನಗರದ ಜಿಮ್ಸ್ (ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ) ಆಸ್ಪತ್ರೆಯಲ್ಲಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದ್ದು, ಇದುವರೆಗೂ 89,293 (ಡಿ.9ರವರೆಗೆ) ಕಾರ್ಡ್‌ಗಳನ್ನು ವಿತರಿಸಲಾಗಿದೆ. ಈ ಹಿಂದೆ ಯಾವುದೇ ಸ್ಥಳದ ಫಲಾನುಭವಿಗಳು ಸ್ಮಾರ್ಟ್ ಕಾರ್ಡ್ ಪಡೆಯಲು ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಆರಂಭದಲ್ಲಿ ನೀಡಿದ್ದರಿಂದ ಜನರು ನೂಕುನುಗ್ಗಲು ಮಾಡಿ ಕಾರ್ಡ್ ಪಡೆದಿದ್ದಾರೆ. ಹೈದ್ರಾಬಾದ್-ಕರ್ನಾಟಕದ ಬೀದರ, ರಾಯಚೂರು, ಯಾದಗಿರಿ ಜಿಲ್ಲೆಗಳ ಜನರು ಸಹ ಜಿಮ್ಸ್‌ನಲ್ಲಿ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಕಾರ್ಡ್ ಪಡೆದಿದ್ದಾರೆ. ಇದರ ಮಧ್ಯೆ ಕಾರ್ಡ್ ವಿತರಣೆಗೆ ಗಡುವು ವಿಧಿಸಲಾಗಿದೆ ಎಂದು ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಅನ್ಯ ಕಾರ್ಯಗಳಿಗೆ ಎಂದು ಆಸ್ಪತ್ರೆಗೆ ಬಂದಿದ್ದ ಧಾರವಾಡ, ಬೆಂಗಳೂರು, ವಿಜಯಪುರ ಸೇರಿದಂತೆ ಇತರ ಭಾಗದ ಜನರ ಕೂಡ ಸಾರ್ವತ್ರಿಕವಾಗಿ ಕಾರ್ಡ್ ಪಡೆದಿದ್ದಾರೆ.
Related Articles
Advertisement
ಅಲ್ಲದೇ, ಸದ್ಯ ಸಾರ್ವತ್ರಿಕವಾಗಿ ಕಾರ್ಡ್ ವಿತರಣೆ ನಿಲ್ಲಿಸಲಾಗಿದ್ದು, ಸರ್ಕಾರದ ನಿರ್ದೇಶನದಂತೆ ಒಳ ರೋಗಿಗಳಿಗೆ ಮಾತ್ರ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಜತೆಗೆ ಸ್ಮಾರ್ಟ್ ಕಾರ್ಡಗಳ ಮಾಹಿತಿ ಶೇಖರಿಸಲು ಸರ್ಕಾರ ವೈಬ್‌ಸೈಟ್ ವೊಂದನ್ನು ಸ್ಥಾಪಿಸಲು ನಿರ್ಧರಿಸಿದೆ. ಹೀಗಾಗಿ ಸದ್ಯಕ್ಕೆ ಕಾರ್ಡ್ ಯಾವುದೇ “ಉಪಯೋಗ’ಕ್ಕೆ ಬರುವುದಿಲ್ಲ. ಒಳ ರೋಗಿಗಳಿಗೆ ಮಾತ್ರ ಸ್ಮಾರ್ಟ್ ಕಾರ್ಡ್ ವಿತರಿಸುತ್ತಿರುವುದಿಂದ ಆಸ್ಪತ್ರೆಯಲ್ಲಿ ಕಾರ್ಡ್ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಿದ್ದಾರೆ.
2,281 ಫಲಾನುಭವಿಗಳು: ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲಾದ್ಯಂತ ಡಿ.5ರವರೆಗೆ ಒಟ್ಟು 2,281 ಜನರ ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ 890 ಜನ ಮಹಿಳೆಯರು ಮತ್ತು 1,391 ಜನ ಪುರುಷ ಫಲಾನುಭವಿಗಳಿದ್ದಾರೆ.
27 ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವ: ಬಸವೇಶ್ವರ ಆಸ್ಪತ್ರೆ, ಖಾಜಾ ಬಂದೇ ನವಾಜ್ ಆಸ್ಪತ್ರೆ, ಮದರ್ ಥೆರೆಸಾ ಚಾರಿಟೇಬಲ್ ಆಸ್ಪತ್ರೆ, ಚಿರಾಯು ಆಸ್ಪತ್ರೆ, ಗುಲಬರ್ಗಾ ಹಾರ್ಟ್ ಫೌಂಡೇಶನ್, ದೇವತಾ ಆಸ್ಪತ್ರೆ, ವಿನಾಯಕ ಕಣ್ಣಿನ ಆಸ್ಪತ್ರೆ, ಸಿದ್ದರಾಮೇಶ್ವರ ಕಣ್ಣಿನ ಕ್ಲಿನಿಕ್, ಕಾರಬಾರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ 27 ಖಾಸಗಿ ಆಸ್ಪತ್ರೆಗಳು ಹೊಸ ಆರೋಗ್ಯ ಯೋಜನೆಯಡಿ ಒಪ್ಪಂದ ಮಾಡಿಕೊಂಡಿವೆ. ಈ ಆಸ್ಪತ್ರೆಗಳಲ್ಲೂ ಶಿಫಾರಸು ಮಾಡಲಾದ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ.
ಆರೋಗ್ಯ ಕರ್ನಾಟಕ ಯೋಜನೆ ಆಯುಷ್ಮಾನ್ ಭಾರತದಲ್ಲಿ ವಿಲೀನಗೊಳಿಸಿದ್ದರೂ ಸ್ಮಾರ್ಟ್ ಕಾರ್ಡ್ ಪಡೆಯಲು ಸಮಸ್ಯೆಯಿಲ್ಲ. ತಾಲೂಕು ಕೇಂದ್ರಗಳಲ್ಲೂ ಕಾರ್ಡ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಂದೆ ಎಲ್ಲರಿಗೂ ಕಾರ್ಡ್ ನೀಡುವುದರ ಜತೆಗೆ ವೈದ್ಯಕೀಯ ಸೇವೆ ದೊರೆಯುವುದರಲ್ಲಿ ಅನುಮಾನವಿಲ್ಲ. ಡಾ.ಮಾಧವರಾವ್ ಪಾಟೀಲ, ಡಿಎಚ್‌ಒ ಕಲಬುರಗಿ ರಂಗಪ್ಪ ಗಧಾರ