Advertisement

Diamond Cross Movie Review; ಸೈಬರ್‌ ಬಲೆಯೊಳಗೆ ಹ್ಯಾಕರ್ಸ್‌ ಹುಡುಕಾಟ

10:29 AM Jul 30, 2023 | Team Udayavani |

ಇಂದು ಜಗತ್ತು ಸಂಪೂರ್ಣ ಆನ್‌ ಲೈನ್‌ ಮಯವಾಗುತ್ತಿದೆ. ತಂತ್ರಜ್ಞಾನ ಕ್ರಾಂತಿಯ ಉಪಯೋಗ ಪಡೆಯುವವರು ಒಂದೆಡೆಯಾದರೆ, ಅದನ್ನು ದುರುಪಯೋಗಪಡಿಸಿಕೊಳ್ಳುವವರು ಮತ್ತೂಂದೆಡೆ. ಇಂಥ ಆನ್‌ ಲೈನ್‌ ಅಥವ ಸೈಬರ್‌ ಲೋಕದೊಳಗೆ ಅರಿತು ನಡೆದರೆ ಅನುಕೂಲ, ಕೊಂಚ ಎಚ್ಚರ ತಪ್ಪಿದರೂ ಕಾಣದ ಆಗಂತುಕನ ಆತಂಕ ಕಟ್ಟಿಟ್ಟ ಗ್ಯಾರಂಟಿ. ಇದೇ ವಿಷಯವನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಸಿನಿಮಾ “ಡೈಮಂಡ್‌ ಕ್ರಾಸ್‌’.

Advertisement

ಇಂದಿನ ದಿನಗಳಲ್ಲಿ ಪೊಲೀಸರಿಗೆ ದಿನದಿಂದ ದಿನಕ್ಕೂ ತಲೆ ನೋವಾಗುತ್ತಿರುವ ಆನ್‌ ಲೈನ್‌ ವಂಚನೆ, ಸೈರ್ಬ ಕ್ರೈಂ ಕೃತ್ಯಗಳನ್ನು ಭೇದಿಸುವುದೇ ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಇಂಥದ್ದೇ ಸೈಬರ್‌ ಕ್ರೈಂನ ಗಂಭೀರ ಪ್ರಕರಣವೊಂದರ ಬೆನ್ನು ಹತ್ತುವ ಸೈಬರ್‌ ಕ್ರೈಂ ಅಧಿಕಾರಿ ಅಭಯಂಕರ್‌ ಪ್ರಸಾದ್‌ ಕಣ್ಣಿಗೆ ಕಾಣದ ಹ್ಯಾಕರ್‌ಗಳ ಹೆಡೆ ಮುರಿ ಕಟ್ಟಲು ಮುಂದಾಗುತ್ತಾನೆ. ಕಣ್ಣಿಗೆ ಕಾಣುವ ಕಳ್ಳರನ್ನು ಹಿಡಿಯುವುದು ಸುಲಭ. ಆದರೆ ಕಣ್ಣಿಗೆ ಕಾಣದ ಹ್ಯಾಕರ್‌ಗಳನ್ನು ತಮ್ಮ ಬಲೆಯೊಳಗೆ ಬೀಳಿಸಿಕೊಳ್ಳುವುದು ಹೇಗೆ ಎಂಬ ಯೋಚನೆ ಬಂದಾಗ, ಅಭಯಂಕರ್‌ ಪ್ರಸಾದ್‌ ಹೊಸ ಉಪಾಯವೊಂದನ್ನು ಹುಡುಕುತ್ತಾನೆ. ಕಳ್ಳನೊಬ್ಬ ಏನು ಮಾಡುತ್ತಾನೆ, ಅವನ ಯೋಜನೆ ಹೇಗಿರುತ್ತದೆ ಎನ್ನವುದು ಮತ್ತೂಬ್ಬ ಕಳ್ಳನಿಗೆ ಮಾತ್ರ ಗೊತ್ತಿರುತ್ತದೆ. ಹಾಗಾಗಿ ಒಬ್ಬ ಕಳ್ಳನನ್ನು ಹಿಡಿಯಲು ಮತ್ತೂಬ್ಬ ಕಳ್ಳನನ್ನೇ ಬಳಸಿಕೊಳ್ಳುವುದು ಜಾಣ್ಮೆಯ ತಂತ್ರ. ಅದೇ ತಂತ್ರವನ್ನು ಈ ಸೈಬರ್‌ ಹ್ಯಾಕರ್‌ ಗಳನ್ನು ಹುಡುಕಲು ಪೊಲೀಸರು ಬಳಸಿಕೊಳ್ಳುತ್ತಾರೆ. ಅಂತಿಮವಾಗಿ ಈ ತಂತ್ರ, ಪ್ರತಿತಂತ್ರ ಹೇಗಿರುತ್ತದೆ? ಕಳ್ಳ-ಪೊಲೀಸರ ಆಟದಲ್ಲಿ ಕೊನೆಗೂ ಗೆದ್ದು ಬೀಗುವವರು ಯಾರು ಎಂಬುದೇ “ಡೈಮಂಡ್‌ ಕ್ರಾಸ್‌’ ಸಿನಿಮಾದ ಕಥಾಹಂದರ. “ಡೈಮಂಡ್‌ ಕ್ರಾಸ್‌’ ಔಟ್‌ ಆ್ಯಂಡ್‌ ಔಟ್‌ ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರದ ಸಿನಿಮಾ. ದಿನನಿತ್ಯ ಕೇಳುವ, ಮಾಧ್ಯಮಗಳಲ್ಲಿ ವರದಿಯಾಗುವ ಸೈಬರ್‌ ಕ್ರೈಂ ವಿಷಯವನ್ನು ರೋಚಕವಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

ಸೈಬರ್‌ ಲೋಕದ, ಖತರ್‌ನಾಕ್‌ ಹ್ಯಾಕರ್ಸ, ಪೊಲೀಸರ ಹುಡುಕಾಟ, ತಂತ್ರಲೋಕದ ಸವಾಲುಗಳು ಎಲ್ಲವನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಇತ್ತೀಚೆಗೆ ಬಂದಿರುವ ಮಾಮೂಲಿ ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾಗಳಿ ಗಿಂತ “ಡೈಮಂಡ್‌ ಕ್ರಾಸ್‌’ ಸಿನಿಮಾ ತನ್ನ ಸಬ್ಜೆಕ್ಟ್ ಮತ್ತು ನಿರೂಪಣೆಯ ಕಾರಣಕ್ಕೆ ವಿಭಿನ್ನವಾಗಿ ನಿಲ್ಲುತ್ತದೆ.

ಇನ್ನು ರೋಜರ್‌ ನಾರಾಯಣ್‌, ರಜತ್‌ ಅಣ್ಣಪ್ಪ ಪಾತ್ರಗಳು ಇಡೀ ಸಿನಿಮಾವನ್ನು ಆವರಿಸಿಕೊಂಡಿವೆ. ಕಥೆಯಲ್ಲಿ ನಾಯಕಿ ರೂಪಿಕಾಗೆ ಹೆಚ್ಚಿನ ಜಾಗವಿಲ್ಲ. ಉಳಿದಂತೆ ಒಂದಷ್ಟು ಹೊಸ ಕಲಾವಿದರು ತೆರೆಮೇಲೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಿನಿಮಾದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ತಾಂತ್ರಿಕವಾಗಿ ಹೈಲೈಟ್ಸ್‌ ಎನ್ನಬಹುದು.

ಸಂಕಲನ ಮತ್ತು ಕಲರಿಂಗ್‌ ಕಡೆಗೆ ಇನ್ನಷ್ಟು ಗಮನ ಕೊಡಬಹುದಿತ್ತು. ಅದೆಲ್ಲವನ್ನು ಬದಿಗಿಟ್ಟು ಹೇಳುವುದಾದರೆ, “ಡೈಮಂಡ್‌ ಕ್ರಾಸ್‌’ ಬೆನ್ನು ತಟ್ಟಬಹುದಾದ ಹೊಸಬರ ಪ್ರಯತ್ನ ಎನ್ನಬಹುದು. ಸಸ್ಪೆನ್ಸ್‌-ಥ್ರಿಲ್ಲರ್‌ ಕಣ್ಣಾಮುಚ್ಚಾಲೆ ಆಟವನ್ನು ಕಣ್ತುಂಬಿಕೊಳ್ಳುವ ಕುತೂಹಲವಿದ್ದರೆ, ನೀವು ಒಮ್ಮೆ “ಡೈಮಂಡ್‌ ಕ್ರಾಸ್‌’ ಕಡೆಗೆ ಮುಖ ಮಾಡಿ ಬರಬಹುದು

Advertisement

ಕಾರ್ತಿಕ್‌

Advertisement

Udayavani is now on Telegram. Click here to join our channel and stay updated with the latest news.

Next