ಬೆಂಗಳೂರು: ಉತ್ತರ ಭಾರತದಿಂದ ದಕ್ಷಿಣದ ಕಡೆಗೆ ಆಗಮಿಸಿದ ಜೈನರು ಮಹಾ ಕಾವ್ಯದ ಪರಂಪರೆಗೆ ನಾಂದಿ ಹಾಡಿ, ಸಾಹಿತ್ಯದ ಮೂಲಕ ಕನ್ನಡಿಗರಿಗೆ ಸತ್ಯದ ದರ್ಶನ ಮಾಡಿಸಿದ್ದಾರೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.
ಕನ‚°ಡ ಸಾಹಿತ್ಯ ಪರಿಷತ್ತು ಮಂಗಳವಾರ ಕರ್ನಾಟಕ ಜೈನ ಭವನದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಜೈನ ಸಾಹಿತ್ಯದ ಪೋಷಕ ಹಾಗೂ ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್ ಅವರಿಗೆ “ಚಾವುಂಡರಾಯ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
ಸಾಹಿತ್ಯ ಕ್ಷೇತ್ರಕ್ಕೆ ಜೈನರ ಕೂಡಗೆ ಅಪಾರ. ಸಂಸ್ಕೃತದ ಹಾಗೆ ಪ್ರಾಕೃತ ಭಾಷೆಯಲ್ಲಿ ಸಂಶೋಧನೆಗಳು ನಡೆದಿಲ್ಲ. ಹೀಗಾಗಿ ಪ್ರಾಕೃತ ಭಾಷೆಯ ಬಗ್ಗೆ ಬಹುತೇಕರಿಗೆ ಸಮರ್ಪಕ ಮಾಹಿತಿಯಿಲ್ಲ. ಆದ್ದರಿಂದ ಪ್ರಾಕೃತ ಭಾಷೆಯಲ್ಲಿ ಅಧ್ಯಯನ ಹಾಗೂ ಸಂಶೋಧನೆಗೆ ವಿಶ್ವವಿದ್ಯಾಲಯದ ಅಗತ್ಯವಿದೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್.ಜಿತೇಂದ್ರ ಕುಮಾರ್, ನಮ್ಮ ತಂದೆ ರಚಿಸಿದ ಕೃತಿಯನ್ನು ಓದಿ ಬೆಳೆದ ಕಾರಣ ಸಾಹಿತ್ಯದಲ್ಲಿ ಆಸಕ್ತಿ ಮೂಡಿತು. ತಂದೆಯ ಪರವಾಗಿ 67 ವರ್ಷದ ಹಿಂದೆ ಕಸಾಪ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದೆ. ಇದೀಗ ಸ್ವತಃ ನನಗೆ ಪ್ರಶಸ್ತಿ ಬಂದಿರುವುದು ಅತೀವ ಸಂತೋಷವಾಗಿದೆ ಎಂದರು.
ಮಂದಿ ವರ್ಷದಿಂದ ಪ್ರಶಸ್ತಿ ಮೊತ್ತ ಏರಿಕೆ?: ಚಾವುಂಡರಾಯ ಪ್ರಶಸ್ತಿಗೆ ಸದ್ಯ ಕಸಾಪದಲ್ಲಿ 4 ಲಕ್ಷ ರೂ.ದತ್ತಿಯಿಡಲಾಗಿದ್ದು, ಇದರಿಂದ ಬಂದ ಬಡ್ಡಿ ಹಣದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ 30 ಸಾವಿರ ರೂ.ನಗದು ನೀಡಲಾಗುತ್ತಿದೆ. ಈ ಮೊತ್ತವನ್ನು 50 ಸಾವಿರ ರೂ.ಗೆ ಏರಿಕೆ ಮಾಡಬೇಕಿದೆ.
ಈ ವಿಚಾರವಾಗಿ ಕರ್ನಾಟಕ ಜೈನ್ ಅಸೋಸಿಯೇಷನ್ ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಹೆಚ್ಚುವರಿಯಾಗಿ 2 ಲಕ್ಷ ರೂ. ದತ್ತಿ ಮೊತ್ತಕ್ಕೆ ಸೇರ್ಪಡೆ ಮಾಡುವಂತೆ ಶಿಫಾರಸು ಮಾಡಿದೆ. ಇಷ್ಟಾಗಿಯೂ ಆರು ಲಕ್ಷ ರೂ.ಗೆ ವರ್ಷಕ್ಕೆ 48 ಸಾವಿರ ರೂ. ಬಡ್ಡಿ ಬರಲಿದೆ.
ಹೀಗಾಗಿ ನನಗೆ ನೀಡಲಾದ ಪ್ರಶಸ್ತಿಯ 30 ಸಾವಿರ ರೂ.ಗೆ ಇನ್ನೂ 70 ಸಾವಿರ ರೂ. ಸೇರಿಸಿ, ಮೂಲ ದತ್ತಿಗೆ ನೀಡುವೆ. ಇದರಿಂದ ಮುಂದಿನ ವರ್ಷದಿಂದ 50 ಸಾವಿರ ರೂ. ನಗದು ಬಹುಮಾನ ನೀಡಲು ಸಾಧ್ಯ ಎಂದು ಪ್ರಶಸ್ತಿ ಪುರಸ್ಕೃತ ಎಸ್.ಜಿತೇಂದ್ರ ಕುಮಾರ್ 1 ಲಕ್ಷ ರೂ. ಮೊತ್ತದ ಚೆಕ್‌ನ್ನು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ಅವರಿಗೆ ಹಸ್ತಾಂತರಿಸಿದರು. ಹಿರಿಯ ಪತ್ರಕರ್ತ ಡಾ. ಪದ್ಮರಾಜ ದಂಡಾವತಿ ಉಪಸ್ಥಿತರಿದ್ದರು.