Advertisement

ಜೆಡಿಎಸ್‌ ತಾಲೂಕು ಅಧ್ಯಕ್ಷರ ಸಭೆ ಕರೆದು ಬೆಂಬಲ ಕೋರಿದ ಧ್ರುವ

07:44 AM Mar 17, 2019 | Team Udayavani |

ನಂಜನಗೂಡು: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾ.25ರಂದು ತಾವು ನಾಮಪತ್ರ ಸಲ್ಲಿಸುವುದಾಗಿ ಸಂಸದ ಆರ್‌. ಧ್ರುವನಾರಾಯಣ ಘೋಷಿಸಿದರು. ನಗರದ ಕಬಿನಿ ಸಂಗಮದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ  ನಂಜನಗೂಡು, ತಿ. ನರಸೀಪುರ, ಎಚ್‌.ಡಿ. ಕೋಟೆ ತಾಲೂಕು ಜೆಡಿಎಸ್‌ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದರು.

Advertisement

ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿರುವ ತಮಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ಹಾಗೂ ತಿ.ನರಸೀಪುರ ಶಾಸಕ‌ ಅಶ್ವಿ‌ನ್‌ ಅವರೊಂದಿಗೂ ಈಗಾಗಲೇ ಮಾತುಕತೆ ನಡೆಸಲಾಗಿದ್ದು,  ಮೈತ್ರಿ ಪಕ್ಷದ ಅಭ್ಯರ್ಥಿಯಾದ ತನಗೆ ಸಂಪೂರ್ಣ ಸಹಕಾರ  ನೀಡಿ ಎಂದು ಕೋರಿದರು.

ಅಧಿಕಾರ ಶಾಶ್ವತವಲ್ಲ. ಆದರೆ ಪ್ರೀತಿ, ವಿಶ್ವಾಸ ನಂಬಿಕೆಯ ಮಾನವೀಯ ಸಂಬಂಧ ಶಾಶ್ವತ ಎಂದು ಭಾವಿಸಿದ್ದೇನೆ.  ನಾವಿಬ್ಬರೂ ಸೇರಿದರೆ ಗೆಲುವು ಸುಲಭವಾಗಲಿದೆ. ಅಲ್ಲದೇ ರಾಜ್ಯ ಸರ್ಕಾರ ಕೂಡ ಸುಭದ್ರವಾಗಿರಲಿದೆ. ರಾಜ್ಯದಲ್ಲಿ ಈ ಹೊಂದಾಣಿಕೆಯ ಹೊಸಪ್ರಯೋಗವಾಗಿದ್ದು, ಇದರಲ್ಲಿ ನಾವು ಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಶ್ರಮಿಸೋಣ ಎಂದು ಧ್ರುವನಾರಾಯಣ, ಸದ್ಯದಲ್ಲೇ ಇಬ್ಬರು ಸಚಿವರ ನೇತೃತ್ವದಲ್ಲಿ ಚಾಮರಾಜ ನಗರ ಲೋಕಸಭಾ ವ್ಯಾಪ್ತಿಯ ಇನ್ನೊಂದು ಜೆಡಿಎಸ್‌ ಸಭೆ ನಡೆಯಲಿದೆ ಎಂದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಎನ್‌. ನರಸಿಂಹಸ್ವಾಮಿ ಮಾತನಾಡಿ, ಕ್ರಿಯಾಶೀಲ ಸಂಸದರಾಗಿರುವ ಧ್ರುವನಾರಾಯಣ ಪುನರಾಯ್ಕೆಯಾಗುವುದು ಮತದಾರರ ಹೆಮ್ಮೆಯಾಗಿದೆ. ಸರಳ ಸಜ್ಜನಿಕೆಯ ಅವರು ಜನಸಾಮಾನ್ಯರ ಕಷ್ಟಗಳಿಗೆ ಸದಾ ಕಾಲ  ಸ್ಪಂದಿಸುವ ಮನೊಭಾವ ಹೊಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಂಜನಗೂಡು ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌. ಮಹದೇವಸ್ವಾಮಿ, ತಿ.ನರಸೀಪುರ ತಾಲೂಕು ಅಧ್ಯಕ್ಷ ಚಿನ್ನಸ್ವಾಮಿ, ಎಚ್‌.ಡಿ. ಕೋಟೆ ಅಧ್ಯಕ್ಷ ನರಸಿಂಹೇಗೌಡ, ಸರಗೂರು ತಾಲೂಕು ಅಧ್ಯಕ್ಷ ಬಸವಣ್ಣ, ಪಕ್ಷದ ಎಸ್‌ಸಿ ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ಶಿವಕುಮಾರ, ಭಾಸ್ಕರ್‌,  ಎನ್‌.ಶ್ರೀನಿವಾಸ, ಮಾಹದೇವು, ರಾಜೇಂದ್ರ, ಮುಖಂಡ ಬೆಳವಾಡಿ ಶಿವಕುಮಾರ, ಸಣ್ಣಪ್ಪ ಗೌಡ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next