Advertisement

ಮೇ 19ರಿಂದ ಮೂರು ದಿನ ಕಾಲ ಧೃತಿ ಉತ್ಸವ; ವಿವಿಧ ತಿನಿಸು, ಉಡುಪು, ಕಲಾಕೃತಿಗಳ ಮಾರಾಟ

03:14 PM May 12, 2023 | Team Udayavani |

ಬೆಂಗಳೂರು: ಪ್ರಾದೇಶಿಕ ಸೊಗಡನ್ನು ಪ್ರತಿಬಿಂಬಿಸುವ ಉಪ್ಪಿನ ಕಾಯಿ, ಹಪ್ಪಳ, ಸಂಡಿಗೆ, ಚಟ್ನಿಪುಡಿ, ಕೇಕ್‌ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು, ನೇಯ್ಗೆ ಸೀರೆ ಉಡುಪುಗಳು, ಕಲಾಕೃತಿಗಳು, ಪೇಂಟಿಂಗ್‌ ಹೀಗೆ ವಿವಿಧ ಗೃಹ ಅಲಂಕಾರಿಕ ವಸ್ತುಗಳು ಒಂದೇ ಸೂರಿನಡಿ ಸಿಗಲಿವೆ.

Advertisement

ಹೌದು! ಅದು ಎಲ್ಲಿ ಅಂತೀರಾ, ಧೃತಿ ಮಹಿಳಾ ಮಾರುಕಟ್ಟೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಸಿಗಲಿವೆ. ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ, ಇದೀಗ ಮೇ 19, 20 ಹಾಗೂ 21ರಂದು ಮೂರು ದಿನಗಳ ಕಾಲ ವಿವಿ ಪುರಂನ ಬಿಐಟಿ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿರುವ ಮೂರನೇ ವಾರ್ಷಿಕ “ಧೃತಿ ಉತ್ಸವ’ ಪ್ರಯುಕ್ತ ಆಫ್
ಲೈನ್‌ ಮಾರಾಟ ಲಭ್ಯವಿರಲಿದೆ.

ಏನಿದು ಧೃತಿ ಮಹಿಳಾ ಮಾರುಕಟ್ಟೆ?: ಕಳೆದ ಎರಡು ವರ್ಷಗಳ ಹಿಂದೆ ಇಡೀ ಜಗತ್ತೇ ಒಮ್ಮೆ ತಿರುಗಿನೋಡುವಂತೆ “ಕೋವಿಡ್‌-19’ಗೆ ಅನೇಕರು ಬಲಿಯಾದರು. ಇನ್ನೂ ಕೆಲವು ಕೆಲಸ ಕಳೆದುಕೊಂಡು
ನಿರುದ್ಯೋಗಿಗಳಾದರು. ಈ ಸಮಯದಲ್ಲಿ ಮಹಿಳಾ ಉದ್ಯಮಿ ಅಪರ್ಣಾ ರಾವ್‌ ಅವರು ಒಂದಿಷ್ಟು ಮಹಿಳೆಯರನ್ನು ಒಗ್ಗೂಡಿಸಿ ಅವರನ್ನು ಸ್ವಾವಲಂಬಿಗಳನ್ನಾಗಿಸಲು 2020ರ ಮೇ 25ರಂದು ಜಾಲತಾಣ ವೇದಿಕೆಯ ಮೂಲಕ ಮಹಿಳಾ ಗುಂಪನ್ನು ಕಟ್ಟಿದರು. ಈ ಗುಂಪಿಗೆ ರಾಜ್ಯಾದ್ಯಂತ ನೂರಾರು ಮಹಿಳೆಯರು ಸೇರಿಕೊಂಡು ಪ್ರಸ್ತುತ 48 ಸಾವಿರಕ್ಕೂ ಹೆಚ್ಚು ಆನ್‌ಲೈನ್‌ ಗ್ರಾಹಕರನ್ನು ಹೊಂದಿದ್ದಾರೆ.

ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಸ್ವಾವಲಂಬಿ ಮಹಿಳೆಯರಾಗುವ ಜತೆಗೆ ಮಾರಾಟಗಾರರಾಗಿ ಮತ್ತು ಗ್ರಾಹಕರಾಗಿಯೂ ಪರಸ್ಪರ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಈ ಗುಂಪಿನ ವಿಶೇಷವಾಗಿದೆ.
ಈ ಗುಂಪಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರು ಇದ್ದರೂ, ಕೊರೊನಾ ಸಮಯದಲ್ಲಿ ಅನೇಕರು ಕೆಲಸ ಕಳೆದುಕೊಂಡರೂ ಧೃತಿಗೆಡದೇ, ಅವರವರ ಕಲೆ ಮತ್ತು ಆಸಕ್ತಿಯ ಮೇಲೆ ಕರಕುಶಲ ವಸ್ತುಗಳ ತಯಾರಿಕೆ, ವಿವಿಧ ಚಟ್ನಿಪುಡಿ, ಚಿಪ್ಸ್‌, ಸಂಡಿಗೆ, ಹಪ್ಪಳ, ಗೃಹ ಅಲಂಕಾರಿಕ ವಸ್ತುಗಳು, ಕುಶಲ ವಿನ್ಯಾಸ,
ಪೇಂಟಿಂಗ್‌ ಮುಂತಾದ ವಸ್ತುಗಳನ್ನು ತಯಾರಿಸಿ, ಮಾರಾಟ ಮಾಡಲು ಪ್ರಾರಂಭಿಸಿದರು. ಇದೀಗ ಯಶಸ್ವಿಗಳಿಸಿದೆ. ಧೃತಿ ಇಂದು ವಾಣಿಜ್ಯೋದ್ಯಮದ ವಹಿವಾಟನ್ನು ಮೀರಿದ ಮಹಿಳೆಯರ ಸಂಘಟಿತ ಶಕ್ತಿಯಾಗಿ ಪರಿವರ್ತನೆಯಾಗಿದೆ.

ಈ ಧೃತಿಯು ಚಿಕ್ಕ-ಚಿಕ್ಕ ಹಳ್ಳಿಯ ಮಹಿಳೆಯನ್ನು ಹೊಂದಿದ್ದು, ಬಹುತೇಕ ಮಹಿಳೆಯರು ಆನ್‌ಲೈನ್‌
ಮಾರಾಟ ವ್ಯವಸ್ಥೆಯ ಮೂಲಕ ಉದ್ಯೋಗದ ಕೌಶಲ್ಯಗಳನ್ನು ಕಲಿಯುತ್ತಾ, ಉತ್ಪನ್ನಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದರಿಂದ ಪ್ಯಾಕಿಂಗ್‌, ಅಂಚೆ ಅಥವಾ ಕೊರಿಯರ್‌ ಸೇವೆ ಮೂಲ ವಸ್ತುಗಳನ್ನು ಗ್ರಾಹಕರಿಗೆ ವ್ಯವಸ್ಥಿತವಾಗಿ ತಲುಪಿಸುವುದರಲ್ಲಿ ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. “ಎಲ್ಲರೂ ಒಟ್ಟಾಗಿ ಬೆಳೆಯೋಣ,
ಬೆಳೆಸೋಣ’ ಎನ್ನುವುದು ಪ್ರತೀ ಉದ್ಯಮಿಗಳ ಘೋಷ ವಾಕ್ಯ ಎಂದು ಧೃತಿ ಮಹಿಳಾ ಮಾರುಕಟ್ಟೆ ಸಂಸ್ಥಾಪಕಿ ಅಪರ್ಣಾ ರಾವ್‌ ತಿಳಿಸುತ್ತಾರೆ. ಈ ಕಾರ್ಯಕ್ರಮವನ್ನು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ. ಎನ್‌ ಮಂಜುನಾಥ್‌
ಉದ್ಘಾಟಿಸಲಿದ್ದು, ಬಿ.ಜೆ. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ. ಪುಟ್ಟ ಸ್ವಾಮಿ ಹಾಗೂ ಪ್ರಾಂಶುಪಾಲರಾದ ಡಾ. ಅಶ್ವಥ್‌ ಎಂ.ಯು. ಭಾಗವಹಿಸಲಿದ್ದಾರೆ.

Advertisement

ಫ್ಯಾಶನ್‌ ಶೋ, ಅಡುಗೆ ಸಡಗರ ಜತೆಗೆ ವಿವಿಧ ಸ್ಪರ್ಧೆ
ಧೃತಿ ಮಹಿಳಾ ಮಾರುಕಟ್ಟೆ ಪ್ರಾರಂಭವಾಗಿ 3 ವರ್ಷಗಳು ಕಳೆದ ಹಿನ್ನೆಲೆ ನಗರದ ವಿವಿಪುರಂನ ಬೆಂಗಳೂರು ತಾಂತ್ರಿಕ ಶಿಕ್ಷಣ ಸಂಸ್ಥೆ(ಬಿಐಟಿ) ಕ್ಯಾಂಪಸ್‌ನಲ್ಲಿ ಮೇ.19, 20 ಹಾಗೂ 21 ಮೂರು ದಿನಗಳ ಕಾಲ “ಧೃತಿ ಉತ್ಸವ’ವನ್ನು ಆಯೋಜಿಸಲಾಗಿದ್ದು, ಧೃತಿ ಮಹಿಳೆಯರು ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ
ಮಾರಾಟ ಮೇಳ ನಡೆಯಲಿದೆ. ಅಷ್ಟೇ ಅಲ್ಲದೇ, ಧೃತಿ ಮಹಿಳೆಯರೇ ನಿರ್ದೇಶಿಸಿ, ತಯಾರಿಸಿದ ವಸ್ತುಗಳನ್ನು ಪ್ರದರ್ಶಿಸಲು “ಧೃತಿ- ಸಾಮಾನ್ಯ ಮಹಿಳೆ’ ಫ್ಯಾಶನ್‌ ಶೋ ಕೂಡ ಇರಲಿದೆ. ಈ ಬಾರಿ, ಆಹಾರ ಪದ್ಧತಿಗಳ ಬಗ್ಗೆ ಮಾಹಿತಿ, ಅನುಭವ ಮುಂತಾದ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಲು “ಅಡುಗೆ ಸಡಗರ’ ಎಂಬ ವಿಶೇಷ ವೇದಿಕೆಯನ್ನು ಸಿದ್ಧಪಡಿಸಲಾಗಿದೆ.

ಧೃತಿ ಉತ್ಸವದಲ್ಲಿ ನೂರಕ್ಕೂ ಹೆಚ್ಚು ವಿಶಿಷ್ಟ ವಸ್ತುಗಳ ಮಾರಾಟ ಮಳಿಗೆಗಳು ಇರುವುದಷ್ಟೇ ಅಲ್ಲದೆ, ಪ್ರಾದೇಶಿಕ ಆಟಗಳು, ಯುವ ಮನೋರಂಜನಾ ಕಾರ್ಯಕ್ರಮ, ಮಣ್ಣಿನ ಆಕೃತಿ, ಮಡಿಕೆ ತಯಾರಿಕಾ ಶಿಬಿರ, ವಾಣಿಜ್ಯೋದ್ಯಮ
ಅಭಿವೃದ್ಧಿ ತರಬೇತಿ ಶಿಬಿರ, ಅಡುಗೆ ಸ್ಪರ್ಧೆ, ವಿನೂತನ ಗೃಹೋದ್ಯಮ ಸ್ಪರ್ಧೆ ಮುಂತಾದವುಗಳನ್ನು ಆಯೋಜಿಸಲಾಗಿದೆ.

ಧೃತಿ ಮಹಿಳಾ ಮಾರುಕಟ್ಟೆಯ ಹೆಚ್ಚಿನ ಮಾಹಿತಿಗಾಗಿ dhrutimahilamarukatte.com / https://facebook.com/
dhruti-mahila- marukatte / 9082015664 ಸಂಪರ್ಕಿಸಬಹುದಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next