ವಿಜಯಪುರ: ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಅವರು ಮಂಗಳವಾರ ನಗರದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲದೇ ಕರ್ತವ್ಯಕ್ಕೆ ತಡವಾಗಿ ಹಾಜರಾದ 10 ಜನರಿಗೆ ನೋಟಿಸ್ ನೀಡಲು ಸೂಚಿಸಿದ್ದಾರೆ. ದಿಢೀರ್ ಭೇಟಿಯ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಕಚೇರಿ ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿದಾಗ ಕಚೇರಿಗೆ ತಡವಾಗಿ ಹಾಜರಾದ 10 ಜನ ಸಿಬ್ಬಂದಿಗಳಿಗೆ ನೋಟಿಸ್ ನೀಡಲು ಸೂಚಿಸಿದರು. ಅಲ್ಲದೇ ಈ ವೇಳೆ ಡಿಎಚ್‌ಒ ಅವರು ರಜೆಯಲ್ಲಿ ಇರುವ ಕುರಿತು ಮಾಹಿತಿ ಪಡೆದರು.
ಕಚೇರಿ ಸಮಯಕ್ಕೆ ಎಲ್ಲ ಅಧಿಕಾರಿ-ಸಿಬ್ಬಂದಿ ಹಾಜರ ಇರಬೇಕು. ಅಲ್ಲದೇ ಕಚೇರಿ ಬಿಡುವ ಸಂದರ್ಭದಲ್ಲಿ ಹಾಜರಾತಿ ವಹಿಯಲ್ಲಿ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಸಹಿ ಮಾಡುವಂತೆ ನೋಡಿಕೊಳ್ಳಬೇಕು ಎಂದು ಕಾರ್ಯಾಲಯದ ಅಧೀಕ್ಷಕರಿಗೆ ಸೂಚಿಸಿದರು.
ಇಲಾಖೆಗೆ ಸಂಬಂಧಿಸಿದ ನೇಮಕಾತಿ ಮಾಹಿತಿ ಪಡೆದ ಸಿಇಒ ಅವರು, ಕಚೇರಿಗೆ ಹೊಸದಾಗಿ ಬಂದಿರುವ ಆಂಬ್ಯುಲೆನ್ಸ್‌ಗಳನ್ನು ಕೂಡಲೇ ಸಂಬಂಧಪಟ್ಟ ತಾಲೂಕುಗಳಿಗೆ ಹಸ್ತಾಂತರಿಸುವಂತೆ ನಿರ್ದೇಶನ ನೀಡಿದರು.
ಡಿಎಚ್‌ಒ ಕಚೇರಿ ಪಕ್ಕದಲ್ಲೇ ಇರುವ ಮಲೇರಿಯಾ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲಿಸಿದ ಸಿಇಒ, ಸದರಿ ಆಸ್ಪತ್ರೆಯ ಮಾಲಿನ್ಯ ಸ್ಥಿತಿಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಸೂಚಿಸಿದರು. ಈ ಸಂದರ್ಭದಲ್ಲಿ ಡಾ| ಕೆ.ಎಂ. ಗುಂಡಬಾವಡಿ, ಡಾ| ಕವಿತಾ ದೊಡಮನಿ ಸೇರಿದಂತೆ ಇತರರು ಇದ್ದರು.