ಪಣಜಿ: ಕಳೆದ ಕೆಲ ದಿನಗಳ ಹಿಂದೆ ಗೋವಾದ ಪ್ರಸಿದ್ಧ ದೂಧ್ ಸಾಗರ ಜಲಪಾತ ಪ್ರವಾಸೋದ್ಯಮ ಆರಂಭಗೊಂಡಿದ್ದರೂ ನಿರೀಕ್ಷಿತ ಸಂಖ್ಯೆಯಲ್ಲಿ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಆಗಮಿಸದಿರುವುದು ಕಂಡುಬರುತ್ತಿದೆ.
ದೂಧ್ ಸಾಗರ ಜಲಪಾತ ವೀಕ್ಷಣೆಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ವೀಕೆಂಡ್‌ನಲ್ಲಂತೂ ಇಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತಿತ್ತು. ಆದರೆ ಪ್ರಸಕ್ತ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಇದುವರೆಗೂ ಅಂತಾರಾಷ್ಟ್ರೀಯ ವಿಮಾನಗಳ ಓಡಾಟ ಆರಂಭಗೊಂಡಿಲ್ಲ.
ಆದರೂ ಕೂಡ ಜಲಪಾತ ವೀಕ್ಷಣೆಗೆ ದೇಶೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬಹುದು ಎಂಬ ನಿರೀಕ್ಷೆ ಇದೀಗ ಕೊಂಚ ನಿರಾಸೆ ಉಂಟು ಮಾಡುವಂತಾಗಿದೆ.
ವೀಕೆಂಡ್ ಆಗಿದ್ದರೂ ಕೂಡ ಕಳೆದ ಭಾನುವಾರ ದೂಧಸಾಗರ ಜಲಪಾತ ವೀಕ್ಷಣೆಗೆ ಕೇವಲ 110 ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಕುರಿತು ದೂಧಸಾಗರ ಟ್ರಾವೆಲ್ ಸಂಘಟನೆ ಅಧ್ಯಕ್ಷ ದಿಲೀಪ್ ಮಯೇಕರ್ ಪ್ರತಿಕ್ರಿಯೆ ನೀಡಿ, ದೂಧಸಾಗರ ಜಲಪಾತ ಪ್ರವಾಸೋದ್ಯಮ ಆರಂಭ ಗೊಂಡಿರುವುದು ಪ್ರವಾಸಿಗರಿಗೆ ಇದುವರೆಗೂ ಮಾಹಿತಿಯಿಲ್ಲದ ಕಾರಣ ಅಪೇಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿಲ್ಲ. ಮುಂದಿನ ವಾರದವರೆಗೆ ಪ್ರವಾಸಿಗರ ಸಮಖ್ಯೆಯಲ್ಲಿ ಹಂತ ಹಂತವಾಗಿ ಹೆಚ್ಚಳವಾಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ ;ಹಲವು ದಾಖಲೆಗಳಿಗೆ ಸಾಕ್ಷಿಯಾದ ಡೆಲ್ಲಿ-ಹೈದರಾಬಾದ್ ಪಂದ್ಯ: ರಬಾಡ ಅನನ್ಯ ಸಾಧನೆಯೇನು ಗೊತ್ತಾ?
ದೂಧಸಾಗರ ಜಲಪಾತ ವೀಕ್ಷಣೆಗೆ ತೆರಳಲು ಕುಳೆಯಿಂದ 431 ನೋಂದಣೀಕೃತ ಜೀಪ್ ಗಳಿದ್ದು ಒಂದು ಜೀಪ್‌ನಲ್ಲಿ 5 ಪ್ರವಾಸಿಗರು ತೆರಳಬಹುದಾಗಿದೆ. ಪ್ರತಿಯೊಬ್ಬ ಪ್ರವಾಸಿಗರ ಬಳಿ 700 ರೂ. ಶುಲ್ಕ ಪಡೆಯಲಾಗುತ್ತದೆ. ಜಲಪಾತದ ಬಳಿ ಪ್ರವಾಸಿಗರ ಗರ್ದಿ ಉಂಟಾಗಬಾರದು ಎಂಬ ಕಾರಣಕ್ಕೆ ಪ್ರತಿದಿನ 180 ಜೀಪ್ ಗಳಿಗೆ ಮತ್ತು ಶನಿವಾರ ಮತ್ತು ಭಾನುವಾರ 225 ಜೀಪ್‌ಗ್ಳು ತೆರಳಲು ಪರವಾನಗಿ ನೀಡಲಾಗಿದೆ.