ಪ್ರೀತಿಯೆಂದರೆ ಪಾಯಸದೊಳಗಿನ ದ್ರಾಕ್ಷಿ- ಗೋಡಂಬಿ. ಪ್ರೀತಿಯೆಂದರೆ ಕೆ.ಎಸ್. ನರಸಿಂಹಸ್ವಾಮಿ ಕವನ. ಪ್ರೀತಿಯೆಂದರೆ ಯೋಗರಾಜ್ ಭಟ್ಟರ ಸಿನಿಮಾ. ಪ್ರೀತಿಯೆಂದರೆ ಧೋನಿ ಹೊಡೆದ ಸೆಂಚುರಿ…. ಇಲ್ಲಾ… ಪ್ರೀತಿ ಅಂದ್ರೆ ಇವ್ಯಾವೂ ಅಲ್ಲ…
ಆತ್ಮಸಂಗಾತಿ,
ಹೇಳಿಕೇಳಿ ನಮ್ಮಿಬ್ಬರದು ಒಂದೇ ಊರು. ನಮ್ಮ ಮನೆಗಳು ಕೂಡ ಅಕ್ಕ-ಪಕ್ಕದವು. ತೊಟ್ಟಿಲಲ್ಲಿ ಆಡುವಾಗಿನಿಂದ ನಾನು ನೀನು ಜೋಡಿ. ಎತ್ತಿಕೊಂಡರೆ ಕೈತುಂಬಾ ಸಿಗುತ್ತಿದ್ದ ನಾನು ಡುಮ್ಮಣ್ಣ. ನೀನು ಒಣಕಲಿ. ಕಾಲ ಎಂಬುದು ನಿರ್ಧಯಿ. ಅದು ಸರ್ರನೆ ಸರಿದುಬಿಟ್ಟಿತು ನೋಡು. ಆಡುತ್ತಾ ಆಡುತ್ತಾ ಬೆಳೆದುಬಿಟ್ಟೆವು. ನರ್ಸರಿ, ಪ್ರ„ಮರಿ, ಹೈಸ್ಕೂಲ್ ಎಲ್ಲಾ ಚಕಾಚಕ್ ಕಳೆದುಹೋದವು.
ಹೈಸ್ಕೂಲಿನಲ್ಲಿದ್ದಾಗ ನೀನು ಎರಡು ಜಡೆ ಹಾಕಿಕೊಂಡು ಬರುತ್ತಿದ್ದೆಯಲ್ಲ, ಈಗಲೂ ಆ ದೃಶ್ಯ ನನ್ನ ಮನಃಪಟಲದಿಂದ ಮಾಸಿಲ್ಲ. ತುಂಬಾ ಚೊಕ್ಕಟವಾಗಿ ತಲೆಬಾಚುತ್ತಿದ್ದ ನೀನು ಶಿಸ್ತಿನ ಹುಡುಗಿ. ಹಣೆಯ ಮೇಲೆ ಹೆದ್ದಾರಿಯಂತೆ ಗೋಚರಿಸುತ್ತಿದ್ದ ಬೈತಲೆಯಲ್ಲಿ ನನ್ನ ಕನಸುಗಳು ಚೆಲ್ಲಿರುತ್ತಿದ್ದವು. ದುಡಿದು ದಣಿಯದ ದೇಹ, ಪ್ರೀತಿಸಿ ದಣಿದಿದೆ. ಪ್ರೀತಿಯನ್ನು ಆರಾಧಿಸಿ, ಪೂಜಿಸಿ, ಸಂತೈಸಿ ನನ್ನ ಅಂಗೈನ ಗೆರೆಗಳು ಮಾಯವಾಗಿವೆ. ನಿನ್ನ ಪ್ರೀತಿಯನ್ನ ಎದೆಗೂಡಿನ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ತ್ರಿಕಾಲ ಪೂಜೆ ಮಾಡುವ ನಾನು ಅಪ್ಪಟ ಪ್ರೇಮಪೂಜಾರಿ. ಗರ್ಭಗುಡಿಯ ಮುಂದೆ ಬೆಳಗುವ ದೀಪದ ಬೆಳಕಿಗೆ ನಿನ್ನ ಪ್ರೀತಿ ಪ್ರಜ್ವಲಿಸುತ್ತದೆ. ಘಂಟೆಯ ನಿನಾದಕ್ಕೆ ನಿನ್ನ ಪ್ರೀತಿ ವಿಚಲಿತಗೊಳ್ಳದು. ಧೂಪದಾರತಿಗಳಿಂದ ನಿನ್ನ ಪ್ರೀತಿ ಸಂಪನ್ನ. ನಾನು ಮಾತ್ರ ಹದಿನಾರು ವರ್ಷಗಳಿಂದ ವ್ರತ ತಪ್ಪಿಸದೆ ನಿತ್ಯ ಪೂಜಿಸುತ್ತಿರುವ ಕರ್ತವ್ಯನಿಷ್ಠ ಜಗತ್ತಿನ ಏಕೈಕ ಪ್ರೇಮಪೂಜಾರಿ. ನನಗೆ ನೀನೇ ಪ್ರಪಂಚ. ಆ ಪ್ರಪಂಚದಲ್ಲಿ ಇರುವುದಾದರೂ ಎಷ್ಟು ಜನ? ನಾನು- ನೀನು ಮತ್ತು ಕೇವಲ ನಾನು- ನೀನು.
ಎಡ ಮೊಣಕೈ ಮೇಲೆ ನಿನ್ನ ಹೆಸರಿನ ಹಚ್ಚೆ ಸದಾ ನಗುತ್ತಿದೆ. ನಾನು ಹೋದಲ್ಲಿ ಬಂದಲ್ಲಿ ನೀನು ಜೊತೆಗಿದ್ದೀಯಾ ಎಂಬ ಉನ್ಮತ್ತ ಭಾವವನ್ನು ಅದು ಉಕ್ಕಿಸುತ್ತದೆ. ಭೌತಿಕವಾಗಿ ದೂರವಿರುವ ನಿನ್ನನ್ನು ಹಚ್ಚೆ ಮಾನಸಿಕವಾಗಿ ಹತ್ತಿರಗೊಳಿಸಿದೆ. ಈ ವಿರಹ, ಆ ಸನಿಹಗಳ ನಡುವಿನ ಪುನಿತಾ ಅವಧಿಯನ್ನು ಏನೆಂದು ಕರೆಯುವುದು? ನಮಗೆ ಬೇಕಿರುವುದು ಪುಟ್ಟ ಅವಧಿಯ ಬದುಕು. ಹೊಟ್ಟೆಪಾಡಿಗೆಂದು ಹೊರಟು ಬಂದವನು ಊರು ಕಂಡು ವರ್ಷಗಳಾದವು. ಗಾವುದ ಗಾವುದ ದೂರವಿರುವ ನಿನ್ನನ್ನು ಕಾಣಲು ಸದಾ ತವಕಿಸುತ್ತೇನೆ. ನಿನ್ನ ಮಾತು, ನಿನ್ನ ಸನಿಹ, ನಿನ್ನ ಸಾಹಚರ್ಯ ನನ್ನಲ್ಲಿ ಇನ್ನಿಲ್ಲದ ಚೈತನ್ಯವನ್ನು ತುಂಬುತ್ತದೆ. ನೂರಾರು ಜನರ ನಡುವೆ ಇದ್ದರೂ ನಾನಿಲ್ಲಿ ಒಂಟಿ. ನಾನು ಊರುಬಿಟ್ಟು ಬಂದಾಗಿನಿಂದ ಒಂಟಿತನ ಕಾಡಿದೆ. ಈ ಊರಲ್ಲಿ ಬದುಕುವುದಾದರು ಹೇಗೆ ಎಂಬುದೇ ನನಗೆ ಪ್ರಶ್ನೆಯಾಗಿ ಕಾಡಿದೆ.
ಸರಿ ಸರಿ, ಪ್ರೇಮ ನಿವೇದನೆಗೆ ನಿಂತ ನನ್ನನ್ನು ಈ ಹಾಳು ಸಂಗತಿಗಳು ಏಕೆ ಕಾಡುತ್ತಿವೆ ಗೊತ್ತಿಲ್ಲ. ಈ ಎಲ್ಲಾ ದರಿದ್ರ ವ್ಯವಸ್ಥೆಯ ನಡುವೆ ನಮ್ಮ ಪ್ರೀತಿಯ ಪ್ರಣತಿ ಬೆಳಗಬೇಕಲ್ಲವೆ? ನಾನು- ನೀನು ಬದುಕಬೇಕಲ್ಲವೆ? ಪ್ರೀತಿಯೆಂದರೆ ಪ್ರಾಮಾಣಿಕತೆ. ಪ್ರೀತಿಯೆಂದರೆ ನಿಯತ್ತು. ಪ್ರೀತಿಯೆಂದರೆ ನವಿರು ಭಾವ. ಪ್ರೀತೆಯೆಂದರೆ ಎಂದೂ ಮರೆಯದ ಹಾಡು. ಪ್ರೀತಿಯೆಂದರೆ ಮನಸು ಮನಸುಗಳ ಪಿಸುಮಾತು. ಪ್ರೀತಿಯೆಂದರೆ ಪಾಯಸದೊಳಗಿನ ದ್ರಾಕ್ಷಿ- ಗೋಡಂಬಿ. ಪ್ರೀತಿಯೆಂದರೆ ಕೆ.ಎಸ್. ನರಸಿಂಹಸ್ವಾಮಿ ಕವನ. ಪ್ರೀತಿಯೆಂದರೆ ಯೋಗರಾಜ್ ಭಟ್ಟರ ಸಿನಿಮಾ. ಪ್ರೀತಿಯೆಂದರೆ ಧೋನಿ ಹೊಡೆದ ಸೆಂಚುರಿ. ಪ್ರೀತಿಯೆಂದರೆ ಡಾಲರ್ ಎದುರು ರೂಪಾಯಿ ಬೆಲೆಯ ಚೇತರಿಕೆ. ಪ್ರೀತಿಯೆಂದರೆ ರಿಯಲ್ ಎಸ್ಟೇಟ್. ಪ್ರೀತಿಯೆಂದರೆ ಸೀರಿಯಲ್ಲು. ಪ್ರೀತಿಯೆಂದರೆ ಫೇಸ್‌ಬುಕ್ಕು. ಪ್ರೀತಿಯೆಂದರೆ ಐಫೋನು. ಪ್ರೀತಿಯೆಂದರೆ ಬಯೋತ್ಪಾದನೆ. ಪ್ರೀತಿಯೆಂದರೆ ಎನ್‌ಕೌಂಟರ್. ಪ್ರೀತಿಯೆಂದರೆ ವೈರಸ್. ಪ್ರೀತಿಯೆಂದರೆ ದರೋಡೆ… ಇಲ್ಲಾ…
ಪ್ರೀತಿಯೆಂದರೆ ಇವ್ಯಾವುವೂ ಅಲ್ಲ. ಪ್ರೀತಿಯೆಂದರೆ ನೀನು. ಜಸ್ಟ್ ಯು! ಹಾಗಾಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ. ಬಾ ಇಬ್ಬರೂ ಒಂದಾಗೋಣ. ಪ್ರೀತಿಯ ದೋಣಿಯೇರಿ ದೂರತೀರ ಸಾಗೋಣ. ಬದುಕು ಕಟ್ಟಿಕೊಳ್ಳೋಣ. ನನ್ನ ಈ ಪ್ರೇಮಪತ್ರ ಬೇಗ ಸ್ವೀಕರಿಸು ಮತ್ತು ಅಷ್ಟೇ ಬೇಗ ಉತ್ತರಿಸು. ನಿನ್ನ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ.
ಕಂಡಕ್ಟರ್ ಸೋಮು