ಅಹ್ಮದಾಬಾದ್: ಸೋಮವಾರ ಸಂಜೆ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಟಾಸ್ ಹಾರಿಸಲು ಆಗಮಿಸುವುದರೊಂದಿಗೆ ಮಹೇಂದ್ರ ಸಿಂಗ್ ಧೋನಿ ತಮ್ಮ ಐಪಿಎಲ್ ಫೈನಲ್ ಪಂದ್ಯಗಳ ದಾಖಲೆಯನ್ನು 11ಕ್ಕೆ ಏರಿಸಿಕೊಂಡರು. ಇವರಷ್ಟು ಐಪಿಎಲ್ ಫೈನಲ್ ಆಡಿದ ಮತ್ತೂಬ್ಬ ಆಟಗಾರನಿಲ್ಲ ಎಂಬುದು ವಿಶೇಷ.
ಈ 11 ಫೈನಲ್‌ಗಳಲ್ಲಿ ಧೋನಿ 10 ಸಲ ಚೆನ್ನೈ ತಂಡವನ್ನೇ ಪ್ರತಿನಿಧಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಎಲ್ಲದರಲ್ಲೂ ನಾಯಕರಾಗಿದ್ದರು. ಒಮ್ಮೆ ಮಾತ್ರ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ (2017) ಪರ ಆಡಿದ್ದರು. ಆಗ ಚೆನ್ನೈ ತಂಡ ನಿಷೇಧಕ್ಕೊಳಗಾಗಿತ್ತು.
ದ್ವಿತೀಯ ಸ್ಥಾನದಲ್ಲಿರುವವರು ಚೆನ್ನೈಯವರೇ ಆದ ಸುರೇಶ್ ರೈನಾ. ಇವರು 8 ಐಪಿಎಲ್ ಫೈನಲ್‌ಗಳಲ್ಲಿ ಆಡಿದ್ದಾರೆ. ರವಿವಾರ ಚೆನ್ನೈನ ಮತ್ತಿಬ್ಬರು ಆಟಗಾರರಾದ ರವೀಂದ್ರ ಜಡೇಜ ಮತ್ತು ಅಂಬಾಟಿ ರಾಯುಡು ಕೂಡ 8 ಫೈನಲ್‌ಗಳ ಯಾದಿಯಲ್ಲಿ ಕಾಣಿಸಿಕೊಂಡರು. ಆರ್. ಅಶ್ವಿನ್ ಮತ್ತು ಡ್ವೇನ್ ಬ್ರಾವೊ 7 ಸಲ ಪ್ರಶಸ್ತಿ ಸಮರದಲ್ಲಿ ಭಾಗಿಯಾಗಿದ್ದಾರೆ.
ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಆಡುತ್ತಿರುವ 6ನೇ ಐಪಿಎಲ್ ಫೈನಲ್ ಇದಾಗಿದೆ. ಕೈರನ್ ಪೊಲಾರ್ಡ್, ರೋಹಿತ್ ಶರ್ಮ ಕೂಡ 6 ಫೈನಲ್ ಆಡಿದ್ದಾರೆ.
5 ಸಲ ಐಪಿಎಲ್ ಫೈನಲ್ ಆಡಿದ ಕ್ರಿಕೆಟಿಗರೆಂದರೆ ಲಸಿತ ಮಾಲಿಂಗ, ಆಲ್ಬಿ ಮಾರ್ಕೆಲ್ ಮತ್ತು ಎಸ್. ಬದರೀನಾಥ್.
Related Articles
ರೋಹಿತ್ ಅಧಿಕ ಯಶಸ್ಸು
ಅತ್ಯಧಿಕ ಫೈನಲ್ ಆಡಿದ ದಾಖಲೆ ಧೋನಿ ಹೆಸರಲ್ಲಿದ್ದರೂ ಚಾಂಪಿಯನ್ ತಂಡದ ಸದಸ್ಯನಾಗಿ ಹೆಚ್ಚಿನ ಯಶಸ್ಸು ಸಾಧಿಸಿದವರು ರೋಹಿತ್ ಶರ್ಮ. ಇವರು ಆಡಿದ ಆರೂ ಸಂದರ್ಭಗಳಲ್ಲಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. 5 ಸಲ ಮುಂಬೈ ಇಂಡಿಯನ್ಸ್ ಹಾಗೂ ಒಮ್ಮೆ ಡೆಕ್ಕನ್ ಚಾರ್ಜರ್ (2009) ಪ್ರಶಸ್ತಿಯನ್ನು ಎತ್ತಿಹಿಡಿದಿತ್ತು. ಮುಂಬೈ ಕಿರೀಟ ಏರಿಸಿಕೊಂಡಾಗಲೆಲ್ಲ ರೋಹಿತ್ ನಾಯಕರಾಗಿದ್ದರೆಂಬುದು ಕೂಡ ದಾಖಲೆಯೇ ಆಗಿದೆ.