ದಾವಣಗೆರೆ: ಸಾರ್ವಜನಿಕರು, ವಾಯುವಿಹಾರಿಗಳ ಅನುಕೂಲಕ್ಕಾಗಿ ಇನ್ನೆರಡು ತಿಂಗಳಲ್ಲಿ ನಗರದ 30 ಕಡೆ ಸ್ಮಾರ್ಟ್ ಟಾಯ್ಲೆಟ್ ನಿರ್ಮಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ ತಿಳಿಸಿದ್ದಾರೆ. ಶನಿವಾರ, ಪಾಲಿಕೆಯಲ್ಲಿ ಮೇಯರ್ ಅಧ್ಯಕ್ಷತೆಯಲ್ಲಿ ನಡೆದ ಮಹಾನಗರಪಾಲಿಕೆ 2019-20ನೇ ಸಾಲಿನ ಆಯ-ವ್ಯಯ ಪಟ್ಟಿ ತಯಾರಿ ಸಂಬಂಧ ಎರಡನೇ ಸಲಹಾ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಈಗಾಗಲೇ ಎಂ.ಸಿಸಿ ಬಿ ಬ್ಲಾಕ್‌ನ ಕಾಸಲ್ ಶ್ರೀನಿವಾಸ ಶ್ರೇಷ್ಠಿ ಉದ್ಯಾನದಲ್ಲಿ ಸ್ಮಾರ್ಟ್‌ಸಿಟಿಗೆ ತಕ್ಕಂತೆ ಸ್ಮಾರ್ಟ್ ಟಾಯ್ಲೆಟ್ ನಿರ್ಮಿಸಲಾಗಿದೆ. ಇದೇ ರೀತಿ ಇನ್ನೆರಡು ತಿಂಗಳಲ್ಲಿ 30 ಕಡೆ ನಿರ್ಮಿಸಲಾಗುವುದು ಎಂದು ಮೂತ್ರಾಲಯಗಳ ಸ್ಥಾಪನೆಗೆ ಬಗ್ಗೆ ಶಿವಯೋಗಿಸ್ವಾಮಿ ನೀಡಿದ ಸಲಹೆಗೆ ಪ್ರತಿಕ್ರಿಯಿಸಿದರು.
ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಿ. ಶಂಭುಲಿಂಗಪ್ಪನವರ ಮನವಿ ಸ್ವೀಕರಿಸಿ ಉತ್ತರಿಸಿದ ಆಯುಕ್ತರು, ಮಹಾನಗರಪಾಲಿಕೆ ವ್ಯಾಪ್ತಿಯ ಕೈಗಾರಿಕೋದ್ಯಮಿಗಳನ್ನು ವಾಪಸ್ ಹೋಗಲು ಬಿಡುವುದಿಲ್ಲ. ಕೈಗಾರಿಕೆಗಳಿಗೆ ಕಂದಾಯ ವಿನಾಯಿತಿ ನೀಡುವ ಬಗ್ಗೆ ಪರಿಶೀಲಿಸುತ್ತೇವೆ. ಜೊತೆಗೆ ಕೈಗಾರಿಕೆಗೆ ಸಹಕಾರಿ ಆಗುವ ವಾತಾವರಣವನ್ನು ಕಲ್ಪಿಸಿಕೊಟ್ಟು ನಗರದ ಜನರ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದರು.
ಎಸ್‌ಸಿ, ಎಸ್‌ಟಿ ಜನರ ಮನೆಗಳಿಗೆ ಸೌರಫಲಕ ಅಳವಡಿಸಲು 20 ಲಕ್ಷ ರೂ, ಶುದ್ಧ ನೀರಿನ ಘಟಕಗಳಿಗಾಗಿ 25 ಲಕ್ಷ ರೂ. ಮೀಸಲಿರಿಸಲಾಗಿದೆ. ಎಸ್‌ಸಿ, ಎಸ್‌ಟಿ ಜನರ ಗೃಹ ಬಳಕೆ ನಳಗಳನ್ನು ಸಕ್ರಮಗೊಳಿಸಿ ತಿಂಗಳಿಗೆ 20 ರೂ. ಪಡೆಯಲಾಗುವುದು ಎಂದು ತಿಳಿಸಿದರು. ರಾಜ್ಯ, ರಾಷ್ಟ್ರೀಯ ಕ್ರೀಡಾಪಟುಗಳಿಗೆ ಹತ್ತು ಸಾವಿರ ಧನಸಹಾಯ ನೀಡಲಾಗುವುದು. 5 ಕಡೆ ಪ್ಯಾಡ್ ದಹಿಸುವ ಯಂತ್ರಗಳನ್ನು ಅಳವಡಿಸಲಾಗುವುದು. ಪಿ.ಜೆ. ಬಡಾವಣೆಯ ಸರ್.ಎಂ. ವಿಶ್ವೇಶ್ವರಯ್ಯ ಉದ್ಯಾನದ ಸ್ವಚ್ಛತೆಗಾಗಿ ಐವರು ಕಾರ್ಮಿಕರನ್ನು ನೇಮಿಸಲಾಗುವುದು. ಪೌರಕಾರ್ಮಿಕರಿಗೆ ಟವೆಲ್, ಜರ್ಕಿನ್, ಹೆಲ್ಮೆಟ್, ಶೂ ಅಥವಾ ಚರ್ಮದ ಚಪ್ಪಲಿಗಳನ್ನು ಇನ್ನೊಂದು ತಿಂಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ನಂತರ ವಿಜ್ಞಾನ ಪರಿಷತ್‌ನ ಎಂ. ಗುರುಸಿದ್ದಸ್ವಾಮಿ, ಮಕ್ಕಳ ವಿಜ್ಞಾನ ಚಟುವಟಿಕೆಗೆ 5 ಲಕ್ಷ ರೂ. ಮೀಸಲಿಡಿ ಎಂದು ಮನವಿ ಮಾಡಿದರು. ಕೊಳಗೇರಿಗಳ ನಿವಾಸಿಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಮಂಡಕ್ಕಿ ಭಟ್ಟಿ ಪಾರ್ಕ್ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸ್ಲಂ ಜನಾಂದೋಲನ ಸಂಘಟನೆಯ ರೇಣುಕಾ ಎಲ್ಲಮ್ಮ ಮನವಿ ಮಾಡಿದರು. ಚನ್ನಗಿರಿ ರಂಗಪ್ಪ ರಾಧಮ್ಮ ರಂಗಮಂದಿರದಲ್ಲಿ ಅವ್ಯವಹಾರಕ್ಕೆ ಆಸ್ಪದವಾಗದಂತೆ ಕ್ರಮ ವಹಿಸಲು ಕನ್ನಡಪರ ಹೋರಾಟಗಾರ ಕೆ.ಜಿ. ಶಿವಕುಮಾರ್ ಕೋರಿದರು.
ಪರಿಸರ ಸಂರಕ್ಷಣೆ ವೇದಿಕೆ ಜಿಲ್ಲಾ ಅಧ್ಯಕ್ಷ ಗಿರೀಶ್ ದೇವರಮನಿ ಮಾತನಾಡಿ, ಕುಂದುವಾಡ ಕೆರೆಯಲ್ಲಿ ಎಮ್ಮೆ ತೊಳೆಯುವುದು, ಮೀನು ಹಿಡಿಯುವುದಕ್ಕೆ ಕಡಿವಾಣ ಹಾಕಬೇಕು. ಈ ಕೆರೆಯನ್ನು ಮೀಸಲು ಸಂರಕ್ಷಿತ ಕೆರೆ ಪ್ರದೇಶವಾಗಿಸಲು ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಆಯುಕ್ತರು, ಜನರು ಕೆರೆಯನ್ನು ಮಲೀನ ಮಾಡಬಾರದು. ಈ ರೀತಿ ಮಾಡುವುದರಿಂದ ವಾಯುವಿಹಾರಿಗಳಿಗೆ ತೊಂದರೆ ಆಗುತ್ತದೆ. ಕೆರೆಯ ಸುತ್ತಮುತ್ತ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದ್ದು, ನೀರುಕಾಗೆಗಳಿಗಾಗಿ ಜಾಲಿ ಮರಗಳನ್ನು ಉಳಿಸಲಾಗಿದೆ ಎಂದರು. ಅಶೋಕರಸ್ತೆಯ ಲಿಂಗೇಶ್ವರ ದೇವಸ್ಥಾನದ ಹತ್ತಿರ ಅಂಡರ್‌ಪಾಸ್ ನಿರ್ಮಿಸಬೇಕು ಎಂದು ಅಸ್ಲಂಖಾನ್ ಮನವಿ ಮಾಡಿದರು.
ಗಾಂಧಿ ನಗರದಲ್ಲಿ ಗ್ರಂಥಾಲಯ, ಪೌರಕಾರ್ಮಿಕರ ಮಕ್ಕಳಿಗೆ ಪ್ರತ್ಯೇಕ ಶಾಲೆ, ಶಾಲಾವಾಹನ, ಶೈಕ್ಷಣಿಕ ಸಾಲ ಯೋಜನೆ ಜಾರಿಗೊಳಿಸಲು ಚಿದಾನಂದ್ ಕೋರಿದರು. ಅಕ್ರಮ ನಲ್ಲಿಗಳ ಸಂಪರ್ಕಕ್ಕೆ ಕಡಿವಾಣ ಹಾಕಬೇಕು. ಕೆಟಿಜೆ ನಗರದ ಸಮುದಾಯ ಭವನ ಪೂರ್ಣಗೊಳಿಸಬೇಕು ಎಂದು ಸೋಮಲಾಪುರ ಹನುಮಂತಪ್ಪ ಸಲಹೆ ನೀಡಿದರು. ಉಪಮೇಯರ್ ಚಮನ್‌ಸಾಬ್, ಪಾಲಿಕೆ ಸದಸ್ಯರಾದ ಗೋಣೆಪ್ಪ, ಎಂ. ಹಾಲೇಶ್ ಕುಂದುವಾಡ ತಿಪ್ಪಣ್ಣ, ಇತರರು ಸಭೆಯಲ್ಲಿ ಭಾಗವಹಿಸಿದ್ದರು.