Advertisement

ಸಂಗೀತ ಲೋಕಕ್ಕೆ ಧಾರವಾಡ ಕೊಡುಗೆ ಅಪಾರ; ಸಚಿವ ಅಶ್ವಿ‌ನಿ

05:41 PM Oct 12, 2022 | Team Udayavani |

ಹುಬ್ಬಳ್ಳಿ: ಸಂಗೀತ ಲೋಕಕ್ಕೆ ಧಾರವಾಡ ನೀಡಿದ ಕೊಡುಗೆ ಬಹುದೊಡ್ಡದಾಗಿದೆ. ಸಂಗೀತ ಕ್ಷೇತ್ರದಲ್ಲಿನ ಮೂವರು ಗಂಧರ್ವದಲ್ಲಿ ಇಬ್ಬರು ಗಂಧರ್ವರು ಧಾರವಾಡ-ಬೆಳಗಾವಿ ಜಿಲ್ಲೆಯವರು ಎಂಬುದು ಹೆಮ್ಮೆಯ ಸಂಗತಿ. ಸಂಗೀತ ಪುಣ್ಯಭೂಮಿಗೆ ಬಂದಿರುವುದು, ಸವಾಯಿ ಗಂಧರ್ವರ ಸ್ಮರಣೆಯ ಅಂಚೆಚೀಟಿ ಬಿಡುಗಡೆ ಅತ್ಯಂತ ಸಂತಸ ಮೂಡಿಸಿದೆ ಎಂದು ಕೇಂದ್ರ ರೈಲ್ವೆ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿ‌ನಿ ವೈಷ್ಣವ್‌ ಹೇಳಿದರು.

Advertisement

ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಅಂಚೆ ಇಲಾಖೆ ಹೊರ ತಂದ ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಗೀತದ ಮೂಲಕ ಜಗತ್ತಿನಲ್ಲಿಯೇ ತಮ್ಮದೇ ಖ್ಯಾತಿ ಹೊಂದಿದವರು ಪಂಡಿತ ಭೀಮಸೇನ ಜೋಶಿಯವರು. ಅವರಿಗೆ ಗುರುವಾಗಿದ್ದವರು ಸವಾಯಿ ಗಂಧರ್ವರು. ಅವರ ಸ್ಮರಣೆಯ ಅಂಚೆಚೀಟಿ ಬಿಡುಗಡೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ ಎಂದರು.

ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ನಾನು ಅವರ ಆಪ್ತ ಕಾರ್ಯದರ್ಶಿಯಾಗಿದ್ದೆ. ಅವರು ಕುಮಾರ ಗಂಧರ್ವರ ಸಂಗೀತ ಇಷ್ಟ ಪಡುತ್ತಿದ್ದರು. ಪಂ|ಭೀಮಸೇನ ಜೋಶಿ, ಕುಮಾರ ಗಂಧರ್ವರ ಅಭಿಮಾನಿಗಳಲ್ಲಿ ನಾನು ಒಬ್ಬ. ಇದೊಂದು ಭಾವನಾತ್ಮಕ ಸಮಾರಂಭ ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸವಾಯಿ ಗಂಧರ್ವರು ಶ್ರೇಷ್ಠ ಸಂಗೀತಗಾರರಷ್ಟೇ ಅಲ್ಲ ಶ್ರೇಷ್ಠ ಸಂಗೀತ ಪರಂಪರೆಯ ಶಿಷ್ಯ ಬಳಗವನ್ನು ಹುಟ್ಟು ಹಾಕಿದರು. ಪಂ|ಭೀಮಸೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್ಲ, ಬಸವರಾಜ ರಾಜಗುರುರಂತಹ ಸಂಗೀತ ದಿಗ್ಗಜರು ಇವರ ಶಿಷ್ಯರಾಗಿದ್ದರು. ಸಂಗೀತ ತಪಸ್ವಿ ಎನಿಸಿದ್ದರು.

ಮೈಸೂರು ಸಂಸ್ಥಾನದಲ್ಲಿದ್ದ ಅಬ್ದುಲ್‌ ಕರೀಂಖಾನ್‌ ಅವರು ಸವಾಯಿ ಗಂಧರ್ವರ ಸಂಗೀತ ಪ್ರತಿಭೆ ಗುರುತಿಸಿ ಅವರಿಗೆ ಗುರುವಾಗಿ ಕಲಿಸುವ ಮೂಲಕ ಜಾತಿ, ಜಾತಿ ಎಂದು ಬಡಿದಾಡುವವರಿಗೆ ಮಾನವೀಯತೆಯ ಉತ್ತರ ನೀಡಿದ್ದರು. ಉತ್ತರ ಕರ್ನಾಟಕ ಸಂಗೀತಕ್ಕೆ ತನ್ನದೇ ಕೊಡುಗೆ ನೀಡಿದೆ. ಗದುಗಿನ ಪಂ|ಪುಟ್ಟರಾಜ ಗವಾಯಿ ಸ್ವತಃ ಸಂಗೀತಗಾರರು ಆಗಿದ್ದರು. ಸಾವಿರಾರು ಅಂಧರಿಗೆ ಸಂಗೀತ ದೀಕ್ಷೆ ಮೂಲಕ ಮಹತ್ವದ ಕಾರ್ಯ ಮಾಡಿದರು. ಅಶ್ವಿ‌ನಿ ವೈಷ್ಣವ್‌ ಅವರದು ಅಹಂ ಇಲ್ಲದ ಸರಳ ವ್ಯಕ್ತಿತ್ವ. ಗಣಿ ಇಲಾಖೆಯಲ್ಲಿ ಸುಧಾರಣೆಗೆ ಮುಂದಾದಾಗ ಕಲ್ಲಿದ್ದಲು ಸಮಸ್ಯೆ ಎದುರಾದಾಗ ನನಗೆ ಅಗತ್ಯ ಸಹಕಾರ ನೀಡಿದವರು ಎಂದರು. ನೇತ್ರತಜ್ಞ ಡಾ| ಎಂ.ಎಂ.ಜೋಶಿ, ಚೀಫ್‌ ಫೋಸ್ಟ್‌ ಮಾಸ್ಟರ್‌ ರಾಜೇಂದ್ರ ಪ್ರಸಾದ, ನಾರಾಯಣ ಹಾನಗಲ್ಲ, ಸವಾಯಿ ಗಂಧರ್ವರ ಕುಟುಂಬಸ್ಥರು ಇದ್ದರು. ಪ್ರವೀಣ ಜೋಶಿ ಸ್ವಾಗತಿಸಿದರು. ಪ್ರಕಾಶ ಹಾನಗಲ್ಲ ವಂದಿಸಿದರು.

Advertisement

ಜೋಶಿ ನನ್ನ ರಾಜಕೀಯ ಗುರು
ಐಎಎಸ್‌ ಅಧಿಕಾರಿಯಾಗಿ ಸಂಸತ್ತಿನ ಗ್ಯಾಲರಿಯಲ್ಲಿ ಕಲಾಪ ವೀಕ್ಷಿಸಿದ್ದ ನಾನು ಸಂಸದನಾಗಿ, ಸಂಸತ್ತು ಪ್ರವೇಶಿಸಿದಾಗ ಅಲ್ಲಿನ ಕಾರ್ಯ ನಿರ್ವಹಣೆ, ಹೇಗೆ ಮಾತನಾಡಬೇಕು ಎಂಬುದನ್ನು ತಿಳಿಸಿಕೊಡುವ ಮೂಲಕ ಪ್ರಹ್ಲಾದ ಜೋಶಿ ಅವರು ನನಗೆ ಗುರುವಾಗಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ಹೇಳಿದರು. ಸಂಪುಟ ದರ್ಜೆ ಸಚಿವ ಎಂಬ ಸಣ್ಣ ಅಹಂ ಸಹ ಅವರಲ್ಲಿ ಇಲ್ಲವೇ ಇಲ್ಲ. ಅವರ ನಿವಾಸ, ಕಚೇರಿಗೆ ಆಡಳಿತ ಪಕ್ಷ ಇಲ್ಲವೆ ವಿಪಕ್ಷ ಸಂಸದರು ಯಾರೇ ಹೋದರೂ ಪ್ರೀತಿ ಪೂರ್ವಕ ಆತಿಥ್ಯ ಇದ್ದೇ ಇರುತ್ತದೆ ಎಂಬುದನ್ನು ಬಹುತೇಕ ಸಂಸದರ ಅನಿಸಿಕೆಯಾಗಿದೆ. ಮನೆಗೆ ಹೋದಾಗ ನನಗೂ ಸಹ ದಕ್ಷಿಣ ಭಾರತದ ಇಡ್ಲಿ, ದೋಸೆ, ಭೋಜನ ನೀಡಿ ಸತ್ಕರಿಸುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next