Advertisement

ದುಬೈ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಧಾರವಾಡದ 76 ವರ್ಷದ ಶಿವಪ್ಪ !

05:26 PM Aug 04, 2023 | Team Udayavani |

ಧಾರವಾಡ : ದುಬೈನಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಚಿನ್ನದ ಪದಕವು ಭಾರತ ದೇಶಕ್ಕೆ ಲಭಿಸಿದ್ದು, ಈ ಮೂಲಕ ತ್ರಿವರ್ಣ ಧ್ವಜವು ಹಾರಾಡುವಂತೆ ಮಾಡಿದ್ದಾರೆ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ 76 ವರ್ಷದ ಹಿರಿಯ ಜೀವ ಶಿವಪ್ಪ ಸಲಕಿ..!

Advertisement

ಕೆಲ ದಿನಗಳ ಹಿಂದೆಯಷ್ಟೇ ದುಬೈ ಹಾರಿದ್ದ ಶಿವಪ್ಪ, ಜು.31 ರಿಂದ ಆ.6 ರವರೆಗೆ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಈ ಪೈಕಿ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು, ಪ್ರಥಮ ಸ್ಥಾನ ಗಿಟ್ಟಿಸುವ ಮೂಲಕ ಚಿನ್ನದ ಪದಕ ಪಡೆದಿದ್ದಾರೆ. ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಇದರಿಂದ ಸಲಕಿ ಕುಟುಂಬವಲ್ಲದೇ ಮರೇವಾಡ ಗ್ರಾಮಸ್ಥರೆಲ್ಲರಲ್ಲೂ ಸಂತಸ ಮೂಡಿದೆ.

ಈಗಾಗಲೇ ರಾಜ್ಯಮಟ್ಟದ 26 ಕ್ಕೂ ಅಧಿಕ, ರಾಷ್ಟ್ರ ಮಟ್ಟದ ೨೦ ವಿವಿಧ ಕ್ರೀಟಾಕೂಟಗಳಲ್ಲಿ ಪಾಲ್ಗೊಂಡಿರುವ ಶಿವಪ್ಪ ಮಲೇಶಿಯಾ, ನೇಪಾಳಗಳಲ್ಲಿ ಜರುಗಿದ ಹಿರಿಯ ನಾಗರಿಕರ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಿಟ್ಟಿಸಿದ್ದು ಹಿರಿಮೆ. ಈ ಹಿಂದೆ ನೇಪಾಳದಲ್ಲಿ ಎಸ್‌ಬಿಕೆಎಫ್ (ಸಂಯುಕ್ತ ಭಾರತೀಯ ಖೇಲ್ ಫೆಡರೇಷನ್) ಆಯೋಜಿಸಿದ್ದ ಹಿರಿಯರ ಕ್ರೀಡಾಕೂಟದಲ್ಲಿ ಪಾಲ್ಗೊಂಡು, 100 ಮೀ, 800 ಮೀ ಹಾಗೂ 1500 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು ಎಂದು ಸ್ಮರಿಸಬಹುದು. ಇನ್ನು ದುಬೈಗೆ ತೆರಳಲು ಆರ್ಥಿಕ ಸಂಕಷ್ಟ ಎದುರಿಸಿದ್ದ ಶಿವಪ್ಪ ಅವರಿಗೆ ಶಾಸಕ ವಿನಯ ಕುಲಕರ್ಣಿ, ಮೊಮ್ಮಗಳು ಅನಿತಾ ಮಟ್ಟಿ, ಈಶ್ವರ ಶಿವಳ್ಳಿ ಸೇರಿದಂತೆ ವಿವಿಧ ದಾನಿಗಳು ನೆರವಿನ ಹಸ್ತ ಚಾಚಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next