Advertisement

Telangana; ಮಳೆ ಅಬ್ಬರಕ್ಕೆ ತತ್ತರ; ಮಗು ಸೇರಿ 13 ಮಂದಿ ಮೃತ್ಯು

10:52 AM May 08, 2024 | Team Udayavani |

ಹೈದರಾಬಾದ್ :ತೆಲಂಗಾಣದಲ್ಲಿ ಭಾರೀ ಮಳೆ ಅಬ್ಬರಕ್ಕೆ ಒಂದೇ ದಿನ ಮಗು ಸೇರಿ 13 ಮಂದಿ ಬಲಿಯಾಗಿದ್ದಾರೆ. ಹೈದರಾಬಾದ್ ಬಾಚುಪಲ್ಲಿ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿರುವ ಫ್ಲಾಟ್‌ನಲ್ಲಿ ತಡೆಗೋಡೆ ಕುಸಿದು ನಾಲ್ಕು ವರ್ಷದ ಮಗು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಬಾಚುಪಲ್ಲಿ ಪೊಲೀಸರ ಪ್ರಕಾರ, ಮೃತರು ಒಡಿಶಾ ಮತ್ತು ಛತ್ತೀಸ್‌ಗಢದ ವಲಸೆ ಕಾರ್ಮಿಕರರಾಗಿದ್ದಾರೆ. ಮಂಗಳವಾರ ಸಂಜೆ ಈ ಅವಘಡ ನಡೆದಿದೆ.

Advertisement

ಪೊಲೀಸರ ಪ್ರಕಾರ, ಬುಧವಾರ ಬೆಳಗ್ಗೆ ಮೃತ ದೇಹಗಳನ್ನು ಜೆಸಿಬಿ ಯಂತ್ರ ಬಳಸಿ ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ. ಮಂಗಳವಾರ ನಗರ ಮತ್ತು ತೆಲಂಗಾಣದ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದಿದ್ದು, ಕೆಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಕಡೆ ಮರಗಳು ಉರುಳಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಒಂದೇ ದಿನ ಭಾರಿ ಮಳೆ ಸುರಿದ ಪ್ರಮಾಣ ಜನರು ಪರದಾಡಿದ್ದಾರೆ.

ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಳೆ ಮತ್ತು ಬಿರುಗಾಳಿಯಿಂದ ರಾಜ್ಯದ ಹಲವೆಡೆ ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳಿದ ನಂತರ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಹೈದರಾಬಾದ್‌ನಲ್ಲಿ ಗೋಡೆ ಕುಸಿದ ಘಟನೆಯಲ್ಲಿ ಕಾರ್ಮಿಕರು ಸಾವನ್ನಪ್ಪಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ತೆಲಂಗಾಣದ ವಿವಿಧ ಭಾಗಗಳಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಬೇಗಂಪೇಟೆ ಚರಂಡಿಯಲ್ಲಿ ಎರಡು ಅಪರಿಚಿತ ಶವಗಳು ಪತ್ತೆಯಾಗಿವೆ.ಹೈದರಾಬಾದ್‌ನ ಬಹದ್ದೂರ್‌ಪುರದಲ್ಲಿ ಹಣ್ಣು ಮಾರಾಟಗಾರರೊಬ್ಬ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ ಸಿದ್ದಿಪೇಟೆ ಜಿಲ್ಲೆಯ ಕುಕುನೂರಪಲ್ಲಿ ಮಂಡಲದಲ್ಲಿ ನಡೆದಿದೆ. ಮೇದಕ್ ಜಿಲ್ಲೆಯ ರೈಲಾಪುರ ಗ್ರಾಮದಲ್ಲಿ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next