ಧಾರವಾಡ: ನಾಲ್ಕು ವರ್ಷಗಳ ನಂತರ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ತವರು ಧಾರವಾಡಕ್ಕೆ ಪ್ರವೇಶ ಮಾಡಿ ಇಲ್ಲಿನ ಶಾರದಾ ಸ್ಕೂಲ್‌ನ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು.
ಯೋಗೀಶಗೌಡ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವೇಶವಿಲ್ಲದೆ ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಮತದಾನದಿಂದ ವಂಚಿತರಾಗಿದ್ದ ವಿನಯ್ ಅವರಿಗೆ ಈ ಬಾರಿ ಹೈಕೋರ್ಟ್ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮಂಗಳವಾರ ಸಂಜೆ ನಗರಕ್ಕೆ ಆಗಮಿಸಿ ಮತ ಚಲಾಯಿಸಿ ಮತ್ತೆ ಶಿಗ್ಗಾವಿಯತ್ತ ಹೊರಟರು.
ವಿನಯ್ ಆಗಮನ ಹಿನ್ನೆಲೆಯಲ್ಲಿ ಶಾರದಾ ಸ್ಕೂಲ್ ಮತಗಟ್ಟೆ ಸುತ್ತ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹು-ಧಾ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಸ್ಥಳಲ್ಲಿಯೇ ನಿಂತು ಭದ್ರತಾ ವ್ಯವಸ್ಥೆ ನೋಡಿಕೊಂಡರು.
ಮತದಾನದ ನಂತರ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ, ಮತದಾನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟ ನ್ಯಾಯಾಲಯಕ್ಕೆ ಮೊದಲು ನಾನು ಅಭಿನಂದನೆ ಸಲ್ಲಿಸುತ್ತೇನೆ. ಸದ್ಯಕ್ಕೆ ನನಗೆ ಸಂತೋಷ ಮತ್ತು ದುಃಖ ಎರಡೂ ಆಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ನಾಮಿನೇಶನ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ದುರ್ದೈವದಿಂದ ಮತದಾನಕ್ಕೂ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ವಿನೋದ ಅಸೂಟಿ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಸಿಕ್ಕಿದೆ ಎಂದರು.
2ನೇ ಸಲ ಧಾರವಾಡಕ್ಕೆ ಬಂದ ವಿನಯ್: ಜಿಲ್ಲೆಯಲ್ಲಿ ಯೋಗೀಶಗೌಡ ಕೊಲೆ ಪ್ರಕರಣದ ಸಂಬಂಧ 2020 ನ.5 ರಂದು ಅವರ ಬಂಧನವಾಗಿತ್ತು. ಜು.27, 2021ರಂದು ಜಿಪಿಎ ಮಾಡಲು ಉಪ ನೋಂದಣಾಧಿಕಾರಿ ಕಚೇರಿಗೆ ಆಗಮಿಸಿದ್ದ ವಿನಯ ಕುಲಕರ್ಣಿ, ಸುಮಾರು ಮೂರು ವರ್ಷದ ಬಳಿಕ ಧಾರವಾಡ ಜಿಲ್ಲೆಗೆ ಬಂದ ಮತ ಚಲಾಯಿಸಿದರು.
ಸಿಹಿ ಸಿನ್ನಿಸಿದ ಅಭಿಮಾನಿಗಳು: ಮತದಾನಕ್ಕಾಗಿ ಧಾರವಾಡಕ್ಕೆ ವಿನಯ್ ಬರುತ್ತಾರೆ ಎನ್ನುವ ಸುದ್ದಿ ತಿಳಿದ ತಕ್ಷಣವೇ ಸಾವಿರಾರು ಜನ ಅವರ ಅಭಿಮಾನಿಗಳು ಸಪ್ತಾಪೂರ ಶಾರಾದ ಸ್ಕೂಲ್ ಬಳಿ ನೆರೆದಿದ್ದ ದೃಶ್ಯ ಕಂಡು ಬಂದಿತು. ಹೂವಿನ ಮಾಲೆ ಹಾಕಿ, ಧಾರವಾಡ ಫೇಡಾ ತಿನ್ನಿಸಿ ಕೆಲವರು ಅಭಿನಂದಿಸಿದರೆ, ಕೆಲವರು ಅವರ ಕಾಲಿಗೆ ಬಿದ್ದರು. ಈ ವೇಳೆ ವಿನಯ್ ಸ್ವಲ್ಪ ಹೊತ್ತು ಭಾವುಕರಾದರು.
ವಿನಯ್ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೊನೆಗೆ ವಿನಯ್ ಮತದಾನ ಮಾಡಿ ಹೊರಗೆ ಬಂದ ನಂತರ ಸಪ್ತಾಪೂರ ರಸ್ತೆಯುದ್ದಕ್ಕೂ ನೆರೆದಿದ್ದ ತಮ್ಮ ಅಭಿಮಾನಿಗಳತ್ತ ಕಾರಿನಿಂದಲೇ ಕೈ ಬೀಸುತ್ತ ರಸ್ತೆಯುದ್ಧಕ್ಕೂ ಸಾಗಿದರು. ಮತದಾನದ ವೇಳೆ ವಿನಯ್ ಪತ್ನಿ ಶಿವಲೀಲಾ ಕುಲಕರ್ಣಿ, ಪುತ್ರಿ ವೈಶಾಲಿ, ಶಾಸಕ ಎನ್.ಎಚ್.ಕೋನರಡ್ಡಿ, ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ವಿನೋದ್ ಅಸೂಟಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.