ಬಸವರಾಜ ಹೊಂಗಲ್
ಧಾರವಾಡ: ಕೊರೊನಾ ಅಲೆ ಕಡಿಮೆಯಾಗುತ್ತಿದ್ದಂತೆಯೇ ಪ್ರಕಟಗೊಂಡ ಸ್ಥಳೀಯ ಸಂಸ್ಥೆ ಮೀಸಲಾತಿ ಪಟ್ಟಿ, ಇದೀಗ ಗ್ರಾಮಗಳ ಅರಳಿಕಟ್ಟೆ, ಚಹಾ ಅಂಗಡಿಯಲ್ಲಿ ಮತ್ತೆರಡು ಚುನಾವಣೆ ಲೆಕ್ಕಾಚಾರ ಮತ್ತು ಚರ್ಚೆ, ಮುಖ ಅರಳಿಸಿಕೊಂಡ ಗ್ರಾಪಂ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು, ಧಾರವಾಡ ಪೇಢಾ, ಮುತ್ತಿನ ಹಾರದೊಂದಿಗೆ ಮುಖಂಡರ ಮುಂದೆ ಸಾಷ್ಟಾಂಗ ಹಾಕುತ್ತಿರುವ ಆಕಾಂಕ್ಷಿಗಳು, ಟಿಕೆಟ್ ಪಡೆಯಲು ಈಗಲೇ ಟವೆಲ್ ಹಾಕುತ್ತಿರುವ ಸ್ಥಳೀಯ ನಾಯಕರು, ನಾವು ಒಂದು ಕೈ ನೋಡೇ ಬಿಡೋಣ ಎನ್ನುತ್ತಿರುವ ಪಕ್ಷೇತರರು.
ಹೌದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೀಸಲಾತಿ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೆ ಇದೀಗ ಜಿಲ್ಲೆಯಲ್ಲಿನ 27 ಜಿಪಂ ಕ್ಷೇತ್ರಗಳು ಮತ್ತು 86 ತಾಪಂ ಕ್ಷೇತ್ರಗಳ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಚುನಾವಣಾ ಆಕಾಂಕ್ಷಿಗಳ ಮುಖ ಅರಳುವಂತೆ ಮಾಡಿದೆ. ಕಳೆದ ಬಾರಿ ಅವಕಾಶ ವಂಚಿತರಾದವರು, ಗ್ರಾಪಂ ಚುನಾವಣೆಯಲ್ಲಿ ಸೋತವರು, ರಾಜಕೀಯ ಮಹಾತ್ವಾಕಾಂಕ್ಷೆ ಹೊಂದಿರುವ ಮರಿ ರಾಜಕಾರಣಿಗಳು ಕಳೆದ ಎರಡು ತಿಂಗಳಿನಿಂದ ಕೋವಿಡ್ ಸಂಕಷ್ಟದ ಸಂದರ್ಭವನ್ನೇ ರಾಜಕೀಯ ವೇದಿಕೆ ಮಾಡಿಕೊಂಡು ಕೆಲಸ ಮಾಡಿದವರು ಇದೀಗ ಜಿಪಂ, ತಾಪಂನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಲಭ್ಯವಿರುವ 113 ಸ್ಥಾನಗಳಿಗೆ ಸಾವಿರ ಸಾವಿರ ಆಕಾಂಕ್ಷಿಗಳು ನೂತನ ರಾಜಕೀಯ ಸೀಟುಗಳಿಗೆ ಟವೆಲ್ ಹಾಕಲು ಸಜ್ಜಾಗಿದ್ದಾರೆ. ಕೈ-ಕಮಲ ಪಾರುಪತ್ಯ: ಜಿಪಂ ಮತ್ತು ತಾಪಂ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಪಕ್ಷಾಧಾರಿತ ಅಭ್ಯರ್ಥಿಗಳಿಗೆ ಹೆಚ್ಚಿನ ಮಣೆ ಹಾಕುವ ಸಂಪ್ರದಾಯ ಬೆಳೆದು ಬಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪಕ್ಷದ ಮುಖಂಡರ ಎಡಗೈ ಬಲಗೈಗಳಾಗಿ ಅವರ ಏಳ್ಗೆಗೆ ಸತತ ಶ್ರಮಿಸಿದ ಸ್ಥಳೀಯ ಲೀಡರ್‌ಗಳಿಗೆ ಹೆಚ್ಚಿನ ಅವಕಾಶ ಲಭ್ಯವಾಗುವುದು ಸಾಮಾನ್ಯ. ಈ ನಿಟ್ಟಿನಲ್ಲಿ ಸದ್ಯಕ್ಕೆ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ರಾಜಕೀಯ ನಾಯಕರ ನೆಚ್ಚಿನ ಮತ್ತು ಒಳಸುಳಿಯ ಮರ್ಮಬಲ್ಲ ಯುವ ಹುರಿಯಾಳುಗಳೇ ಅಖಾಡಕ್ಕೆ ಇಳಿಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ನಿರ್ಣಾಯಕ ಹಣಾಹಣಿಯಲ್ಲಿ ತೊಡಗುವುದು ಸಾಮಾನ್ಯ.
ಕಳೆದ ಐದಾರು ಚುನಾವಣೆಗಳಲ್ಲಿ ಈ ಎರಡೂ ಪಕ್ಷಗಳ ಮಧ್ಯೆಯೇ ಬಿಗ್‌ಫೈಟ್ ನಡೆಯುತ್ತಿದೆ. ಒಮ್ಮೆ ಬಿಜೆಪಿ ಗೆದ್ದರೆ ಮತ್ತೂಮ್ಮೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುತ್ತದೆ. ಈ ಮಧ್ಯೆ ತಾಪಂಗಳಲ್ಲಿ ಮಾತ್ರ ಜೆಡಿಎಸ್ ಪಕ್ಷ ನಿರ್ಣಾಯಕ ಪಕ್ಷವಾಗಿ ಹೊರಹೊಮ್ಮುತ್ತ ಬಂದಿದೆ. ಇನ್ನು ಅಲ್ಲಲ್ಲಿ ಪಕ್ಷೇತರರು ಗೆದ್ದರೂ ಅವರು ಮರಳಿ ಸಮಯಕ್ಕೆ ತಕ್ಕಂತೆ ಕೈ ಅಥವಾ ಕಮಲ ಪಾಳೆಯಕ್ಕೆ ಸೇರಿ ಬಿಡುತ್ತಾರೆ.