Advertisement

Dharwad: ದೇಶದಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿ ಅಗತ್ಯ

05:38 PM Sep 22, 2023 | Team Udayavani |

ಧಾರವಾಡ: ದೇಶದಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆಯ ಜಾರಿ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿ ಮಾಡಿರುವ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿ ಆಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪೂರ ಹೇಳಿದರು.

Advertisement

ದಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಸಭಾಭವನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪೀಪಲ್ಸ್ ಫಾರ್‌ ಕರ್ನಾಟಕ ಎಜುಕೇಶನ್‌ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಣ ತಜ್ಞರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.‌

ಪೂರ್ವ ಪ್ರಾಥಮಿಕ ಹಂತದಿಂದಲೇ ಸಮಾನ ಶಿಕ್ಷಣ ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದಲ್ಲಿ ಭಾರತೀಯ ಜ್ಞಾನ ಪರಪಂಪರೆ ಬೆಳೆಸಲು ಜಾರಿಗೆ ತರಲಾಗಿದೆ. ಇದಲ್ಲದೇ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಎನ್‌ಇಪಿ ಮುಖ್ಯವಾಗಿದೆ. ಇದರಲ್ಲಿ ಕೌಶಲ್ಯ ಅಭಿವೃದ್ಧಿಯೊಂದಿಗೆ ವಿದ್ಯಾರ್ಥಿಗಳಲ್ಲಿ  ಆತ್ಮವಿಶ್ವಾಸ ತುಂಬಲು ಸಹಾಯಕಾರಿ ಅಂಶಗಳಿವೆ ಎಂದರು.

ದೇಶದ ಎಲ್ಲ ರಾಜ್ಯಗಳ ಶಿಕ್ಷಣ ತಜ್ಞರು ಚರ್ಚಿಸಿ, ಜನಾಭಿಪ್ರಾಯ ಪಡೆದು ಮನೋವೈಜ್ಞಾನಿಕ ತಳಹದಿ ಮೇಲೆ ಎನ್‌ಇಪಿ
ಸಿದ್ಧಪಡಿಸಲಾಗಿದೆ. ಆದರೆ ಇಂತಹ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ರದ್ದುಪಡಿಸಿ, ಎಸ್‌ಇಪಿ ಜಾರಿಗೊಳಿಸಲು ಮುಂದಾದ ರಾಜ್ಯ ಕಾಂಗ್ರೆಸ್‌ ಸರಕಾರದ ನಿರ್ಧಾರ ಖಂಡನೀಯ. ರಾಷ್ಟ್ರದಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಯ ಅಗತ್ಯವಿದೆ. ಆದರೆ, ರಾಜ್ಯ ಸರಕಾರ ಮೂಲಸೌಕರ್ಯಗಳು ಇಲ್ಲದೇ ಎನ್‌ಇಪಿ ಜಾರಿ ಆಗುವುದಿಲ್ಲ ಎಂದು ಕುಂಟು ನೆಪ ಹೇಳುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಪ್ರೊ| ಎಸ್‌ .ವಿ. ಸಂಕನೂರ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿ-ಉದ್ದೇಶಗಳನ್ನು
ಸಂಪೂರ್ಣವಾಗಿ ಅಧ್ಯಯನ ಮಾಡದೇ ನೂತನ ರಾಜ್ಯ ಸರಕಾರ ತರಾತುರಿಯಲ್ಲಿ ರದ್ದುಪಡಿಸಲು ನಿರ್ಣಯವನ್ನು ಕೈಗೊಂಡಿದ್ದು ಸರಿಯಲ್ಲ. ಎನ್‌ಇಪಿ ಅನುಷ್ಠಾನಗೊಳಿಸಿ ದೇಶದ ಪ್ರಗತಿಗೆ ಶ್ರಮಿಸಲಾಗುವುದು.

Advertisement

ಇದನ್ನು ಜಾರಿಗೆ ತರುವ ಮುನ್ನ ಎಲ್ಲ ರಾಜ್ಯಗಳ ವಿಜ್ಞಾನಿ, ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಅನುಷ್ಠಾನ ಮಾಡಲಾಗಿದೆ. ಒಂದು ವರ್ಷ ಇಡೀ ರಾಷ್ಟ್ರದಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ಜನರು ಕೊಟ್ಟ ಅಭಿಪ್ರಾಯದ ಮೇಲೆ ಎನ್‌ಇಪಿ ಜಾರಿಗೆ ತರಲಾಗಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಯಬೇಕು ಎಂದರು.

ವಿವಿಧ ಶಿಕ್ಷಣ ತಜ್ಞರು ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಚರ್ಚೆ ನಡೆಸಿದರು. ವಿಶ್ರಾಂತ ಕುಲಪತಿ ಪ್ರೊ| ಶಿವಾನಂದ ಹೊಸಮನಿ, ಸುಧೀಂದ್ರ ದೇಶಪಾಂಡೆ, ಪೀಪಲ್ಸ್‌ ಫೋರಮ್‌ ಫಾರ್‌ ಕರ್ನಾಟಕ ಎಜುಕೇಶನ್‌ ಸಂಚಾಲಕ ಪ್ರತೀಕ್‌ ಮಾಳಿ ಇದ್ದರು.

ಹೊಸ ಶಿಕ್ಷಣ ನೀತಿ ರೂಪಿಸಿದ್ದು ಶಿಕ್ಷಣ ತಜ್ಞರೇ ಹೊರತು ಮೋದಿ ನೇತೃತ್ವದ ಸರ್ಕಾರವಲ್ಲ. ನಮ್ಮಲ್ಲಿ ಪ್ರತಿರೋಧಿಸುವ
ಅಭ್ಯಾಸ ಕಡಿಮೆ ಆಗಿದೆ. ಶಿಕ್ಷಕರ ಸಂಘಟನೆ, ತಜ್ಞರೆಲ್ಲ ಸೇರಿ ಸರ್ಕಾರದ ತಪ್ಪು ನಡೆಯ ಬಗ್ಗೆ ಎಚ್ಚರಿಸುವುದು ಪ್ರಸ್ತುತ ಅನಿವಾರ್ಯ. ರಾಜ್ಯ ಸರ್ಕಾರ ನಿರ್ಧಾರ ಬದಲಿಸದಿದ್ದರೆ ಹೊಸ ಸಮಸ್ಯೆ ಸೃಷ್ಟಿಗೆ ಕಾರಣವಾಗುತ್ತದೆ. ಹೊಸತನ ಇದ್ದಾಗ ಒಂದಿಲ್ಲ ಒಂದು ಕೊರತೆ ಇರುತ್ತದೆ, ಅದನ್ನು ಮುಕ್ತವಾಗಿ ಚರ್ಚಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕೆ ಹೊರತು ವಿರೋಧಿಸಬಾರದು.
ಅರುಣ ಶಹಾಪೂರ,
ಕಾರ್ಯಾಧ್ಯಕ್ಷರು, ಮಾಧ್ಯಮಿಕ ಶಿಕ್ಷಕ ಸಂಘ

Advertisement

Udayavani is now on Telegram. Click here to join our channel and stay updated with the latest news.

Next