Advertisement

ಧಾರವಾಡ: ಸಮಾಜವಾದಿ ಕ್ರಾಂತಿ ಅನಿವಾರ್ಯ: ರಾಧಾಕೃಷ್ಣ

05:49 PM Jul 13, 2023 | Team Udayavani |

ಧಾರವಾಡ: ದೇಶದಲ್ಲಿ ಶೋಷಕ ಬಂಡವಾಳಶಾಹಿ ವರ್ಗ ಹಾಗೂ ಶೋಷಿತ ಕಾರ್ಮಿಕ ವರ್ಗಗಳು ಅಸ್ತಿತ್ವದಲ್ಲಿರುವುದನ್ನು ಯಾರೂ ಮರೆಮಾಚಲಾಗದು ಎಂದು ಎಸ್‌ಯುಸಿಐ(ಕಮ್ಯುನಿಸ್ಟ್‌) ಪಕ್ಷದ ಕೇಂದ್ರ ಪಾಲಿಟ್‌ ಬ್ಯೂರೋ ಸದಸ್ಯರಾದ ಕಾ.ಕೆ.ರಾಧಾಕೃಷ್ಣ ಹೇಳಿದರು.

Advertisement

ನಗರದ ಸರಕಾರಿ ನೌಕರರ ಭವನದಲ್ಲಿ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಮಾರ್ಕ್ಸ್ವಾದಿ ಚಿಂತಕ, ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಸಂಸ್ಥಾಪಕ ಶಿವದಾಸ್‌ ಘೋಷ ಅವರ ಜನ್ಮಶತಮಾನೋತ್ಸವ ಸಮಾರೋಪ ಅಂಗವಾಗಿ ಹಮ್ಮಿಕೊಂಡಿದ್ದ ಧಾರವಾಡ ವಲಯ ಮಟ್ಟದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ದೇಶವನ್ನಾಳಿದ ಎಲ್ಲಾ ಪಕ್ಷಗಳು ಬಂಡವಾಳಶಾಹಿಗಳ ಹಿತಾಸಕ್ತಿ ಕಾಪಾಡಲು
ಅವರ ಪರ ನೀತಿಗಳನ್ನು ರೂಪಿಸುತ್ತ ದೇಶದ ಬಹುಸಂಖ್ಯಾತ ದುಡಿಯುವ ಜನರ ಬದುಕನ್ನು ಬೀದಿಗೆ ತಂದಿವೆ.

ಸ್ವಾತಂತ್ರ್ಯ ಸಂದರ್ಭದಲ್ಲಿ ಕೆಲವು ಕೋಟಿಗಳಿದ್ದ ಬಂಡವಾಳಗಾರರ ಸಂಪತ್ತು ಇಂದು ಲಕ್ಷಾಂತರ ಕೋಟಿ ದಾಟಲು ಈ ಬಂಡವಾಳಶಾಹಿಪರ ಪಕ್ಷಗಳ ನೀತಿಗಳೇ ಕಾರಣ. ಈ ಸತ್ಯವನ್ನು ಎಲ್ಲಿಯವರೆಗೆ ದುಡಿಯುವ ವರ್ಗ ಗ್ರಹಿಸುವುದಿಲ್ಲವೋ ಹಾಗೂ
ಚುನಾವಣಾ ಭ್ರಮೆಯಲ್ಲಿ ಮುಳುಗಿರುತ್ತಾರೋ ಅಲ್ಲಿಯವರೆಗೆ ಸಮಾಜವಾದಿ ಕ್ರಾಂತಿ ಸಾಧಿಸಲು ಸಾಧ್ಯವಿಲ್ಲ ಎಂದರು.

ದುಡಿಯುವ ಜನರು ತಮ್ಮ ದಿನನಿತ್ಯದ ಬೇಡಿಕೆ ಗಳನ್ನು ಈಡೇರಿಸಲು ಪ್ರಜಾತಾಂತ್ರಿಕ ಚಳವಳಿಗಳನ್ನು ಬೆಳೆಸುತ್ತ, ವರ್ಗಸಂಘರ್ಷ ತೀವ್ರಗೊಳಿಸುತ್ತ, ಅಂತಿಮವಾಗಿ ಶೋಷಣಾರಹಿತ ಸಮಾಜವಾದಿ ವ್ಯವಸ್ಥೆಗೆ ಜನ್ಮ ನೀಡಲು ಸಮಾಜವಾದಿ ಕ್ರಾಂತಿ ನೆರವೇರಿಸಬೇಕಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪಕ್ಷದ ರಾಜ್ಯ ಸೆಕ್ರೆಟೇರಿಯಟ್‌ ಸದಸ್ಯರಾದ ಕಾ.ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ದೇಶದ ಪಶ್ಚಿಮ ಬಂಗಾಳದ ಒಂದು ಪುಟ್ಟ ಜಿಲ್ಲೆಯಲ್ಲಿ ಕೆಲವೇ ಸಂಗಾತಿಗಳೊಂದಿಗೆ ಕಾ.ಶಿವದಾಸ್‌ ಘೋಷ್‌ ರವರು ಆರಂಭಿಸಿದ ಪಕ್ಷ ಇಂದು 27 ರಾಜ್ಯಗಳಲ್ಲಿ ಹೋರಾಟಗಳನ್ನು ಬೆಳೆಸುತ್ತಿದೆ. ದೇಶದಲ್ಲಿ ಬಂಡವಾಳಶಾಹಿ ವರ್ಗ ತನ್ನ ಹಿತಾಸಕ್ತಿ ಕಾಪಾಡಲು ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಹಲವಾರು ಪಕ್ಷಗಳನ್ನು ಪೋಷಿಸುತ್ತಾ ಬಂದಿದೆ. ಅದೇ ರೀತಿ ದುಡಿಯುವ ವರ್ಗ ತನ್ನ ವಿಮೋಚನೆಗಾಗಿ ನೈಜ ಕಮ್ಯುನಿಸ್ಟ್‌ ಪಕ್ಷ ಬಲಪಡಿಸಬೇಕು ಎಂದರು.

ದೇಶದಲ್ಲಿ ಎಸ್‌ಯುಸಿಐ(ಸಿ)ಪಕ್ಷ ಅಂತಹ ನೈಜ ಕಮ್ಯುನಿಸ್ಟ್‌ ಪಕ್ಷವಾಗಿ ಹೊರಹೊಮ್ಮಿದೆ. ಸುತ್ತಮುತ್ತಲಿನ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ ಎಲ್ಲರೂ ಶಿವದಾಸ್‌ ಘೋಷ್‌ರ ಚಿಂತನೆಗಳನ್ನು ಅಳವಡಿಸಿಕೊಂಡು ತಮ್ಮ ಸ್ಥಳಗಳಲ್ಲಿ ಪಕ್ಷ ಬಲಪಡಿಸುವ ಕಾರ್ಯದಲ್ಲಿ ತೊಡಗಬೇಕು. ಅದೇ ನಾವು ಶಿವದಾಸ್‌ ಘೋಷ್‌ರವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.

Advertisement

ಪಕ್ಷದ ಧಾರವಾಡ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗನ್ನವರ, ಜಿಲ್ಲಾ ಸಮಿತಿ ಸೆಕ್ರೆಟ್ರಿಯೇಟ್‌ ಸದಸ್ಯರಾದ ಗಂಗಾಧರ ಬಡಿಗೇರ ಸೇರಿದಂತೆ ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಉತ್ತರಕನ್ನಡ, ಕೊಪ್ಪಳ ಜಿಲ್ಲೆಗಳ ನೂರಾರು ಕಾರ್ಯಕರ್ತರು, ಬೆಂಬಲಿಗರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next