Advertisement
1952ರಲ್ಲಿ ಲೋಕಸಭೆಗೆ ನಡೆದ ಮೊದಲ ಚುನಾವಣೆಯಿಂದ ಹಿಡಿದು 2019ರ ವರೆಗೆ ಒಟ್ಟು 17 ಚುನಾವಣೆಗಳು ಆಗಿವೆ. ಆದರೆ ಈ ಕ್ಷೇತ್ರವನ್ನು ಪ್ರತಿನಿಧಿಸಿದವರು ಕೇವಲ ಐವರು ಸಂಸದರು. ಮೂರು, ನಾಲ್ಕು ಬಾರಿ ಸತತವಾಗಿ ಒಬ್ಬರೇ ಆಯ್ಕೆಯಾಗಿರುವುದು ಕ್ಷೇತ್ರದ ವಿಶೇಷ. ಮೂವರು ಕೇಂದ್ರ ಸಚಿವರನ್ನು ಕೊಟ್ಟ ಕ್ಷೇತ್ರವೂ ಇದಾಗಿದೆ. ಈ ಬಾರಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದರೆ ಕ್ಷೇತ್ರದಲ್ಲೇ ಹೆಚ್ಚು ಬಾರಿ ಗೆಲುವು ಸಾಧಿಸಿದ ಕೀರ್ತಿಗೆ ಪಾತ್ರವಾಗಲಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರ ಈ ಹಿಂದೆ ಧಾರವಾಡ ಜಿಲ್ಲೆ, ಗದಗ, ನರಗುಂದ ಸಹಿತ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರವಾಗಿತ್ತು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಧಾರವಾಡ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಸಹಿತ ಒಟ್ಟು 8 ವಿಧಾನಸಭಾ ಕ್ಷೇತ್ರಗಳೊಂದಿಗೆ ಧಾರವಾಡ ಲೋಕಸಭಾ ಕ್ಷೇತ್ರವಾಗಿ ರೂಪುಗೊಂಡಿತ್ತು. ಧಾರವಾಡ ಲೋಕಸಭಾ ಕ್ಷೇತ್ರ ಹುಬ್ಬಳ್ಳಿ- ಧಾರವಾಡ ಕೇಂದ್ರ, ಹುಬ್ಬಳ್ಳಿ- ಧಾರವಾಡ ಪೂರ್ವ, ಹುಬ್ಬಳ್ಳಿ- ಧಾರವಾಡ ಪಶ್ಚಿಮ, ಧಾರವಾಡ ಗ್ರಾಮೀಣ, ನವಲಗುಂದ, ಕುಂದ ಗೋಳ, ಕಲಘಟಗಿ ಹಾಗೂ ಶಿಗ್ಗಾವಿ ಕ್ಷೇತ್ರಗಳ ವ್ಯಾಪ್ತಿ ಒಳಗೊಂಡಿದೆ. 2019ರ ಲೋಕಸಭಾ ಚುನಾವಣೆ ಸಂದರ್ಭ ಹಾವೇರಿ ಜಿಲ್ಲೆಯ ಶಿಗ್ಗಾವಿ ಸಹಿತಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಆರು ಕ್ಷೇತ್ರಗಳಲ್ಲಿ, ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಹೊಂದಿದ್ದವು. 2023ರ ವಿಧಾನಸಭಾ ಚುನಾವಣೆಯಲ್ಲಿ ಸಮಬಲದ ಸಾಧನೆಯಾಗಿದ್ದು, ಬಿಜೆಪಿ-ಕಾಂಗ್ರೆಸ್ ತಲಾ 4 ಕ್ಷೇತ್ರಗಳಲ್ಲಿ ಗೆದ್ದಿವೆ.
Related Articles
ಈ ಕ್ಷೇತ್ರದಲ್ಲಿ ವ್ಯಕ್ತಿ ನಿಷ್ಠೆಗಿಂತ ಪಕ್ಷ ನಿಷ್ಠೆಯೇ ಮೇಲುಗೈ ಸಾಧಿಸುತ್ತಿದೆ. ಕ್ಷೇತ್ರ ಪ್ರತಿನಿಧಿಸಿರುವ ಐವರಲ್ಲಿ ಮೂವರು ತಲಾ ನಾಲ್ಕು ಬಾರಿ ಪ್ರತಿನಿಧಿಸಿದ್ದರೆ, ಒಬ್ಬರು ಮೂರು ಬಾರಿ, ಒಬ್ಬರು ಎರಡು ಬಾರಿ ಪ್ರತಿನಿಧಿಸಿದ್ದಾರೆ. ಇಲ್ಲಿ ಪಕ್ಷ ತೊರೆದು ಇಲ್ಲವೇ ಪಕ್ಷಕ್ಕೆ ಸಡ್ಡು ಹೊಡೆದು ಗೆಲುವು ಸಾಧಿಸಿದ್ದು ಇಲ್ಲ. 1952ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಿ.ಪಿ.ಕರಮಕರ ಗೆಲುವು ಸಾಧಿಸಿದ್ದರು. 1957ರಲ್ಲಿಯೂ ಅವರೇ ಪುನರಾಯ್ಕೆಯಾಗಿದ್ದರು. 1962ರಿಂದ 1977ರ ವರೆಗೆ ಕಾಂಗ್ರೆಸ್‌ನಿಂದ ಸರೋಜಿನಿ ಮಹಿಷಿ ಅವರು ಸತತ ನಾಲ್ಕು ಬಾರಿ ಗೆದ್ದಿದ್ದರು. 1982ರಿಂದ 1991ರ ವರೆಗೆ ಡಿ.ಕೆ.ನಾಯ್ಕರ್ ಕಾಂಗ್ರೆಸ್‌ನಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದರು. 1996ರಿಂದ 1999ರ ವರೆಗೆ ಬಿಜೆಪಿಯ ವಿಜಯ ಸಂಕೇಶ್ವರ ಅವರು ಸತತ ಮೂರು ಬಾರಿ ಗೆದ್ದಿದ್ದರು. 2004ರಿಂದ 2019ರ ವರೆಗೆ ಸತತವಾಗಿ ನಾಲ್ಕು ಬಾರಿ ಬಿಜೆಪಿಯ ಪ್ರಹ್ಲಾದ ಜೋಷಿ ಆಯ್ಕೆಯಾಗಿದ್ದಾರೆ.
Advertisement
ಈ ಕ್ಷೇತ್ರ ಲಿಂಗಾಯತ ಪ್ರಾಬಲ್ಯ ಹೊಂದಿದ್ದು, ಎರಡನೇ ಸ್ಥಾನದಲ್ಲಿ ಮುಸ್ಲಿಮರು ಬರುತ್ತಾರೆ. ಕ್ಷೇತ್ರದಲ್ಲಿ ಅಂದಾಜು 6.50 ಲಕ್ಷದಷ್ಟು ಲಿಂಗಾಯತರು ಇದ್ದರೆ, 3 ಲಕ್ಷದಷ್ಟು ಮುಸ್ಲಿಮರು, 2 ಲಕ್ಷದಷ್ಟು ಪರಿಶಿಷ್ಟ ಜಾತಿ, 1.60 ಲಕ್ಷದಷ್ಟು ಕುರುಬರು, ಒಂದು ಲಕ್ಷದಷ್ಟು ಪರಿಶಿಷ್ಟ ಪಂಗಡದವರು, ಒಂದು ಲಕ್ಷದಷ್ಟು ಎಸ್‌ಎಸ್‌ಕೆ, ಮರಾಠ ಸಮಾಜದವರು, 50 ಸಾವಿರಕ್ಕೂ ಅಧಿಕ ಬ್ರಾಹ್ಮಣರು, ಇತರ ಸಮಾಜದವರು 2ರಿಂದ 2.50 ಲಕ್ಷದಷ್ಟಿದ್ದಾರೆ. ಲಿಂಗಾಯತ ಹಾಗೂ ಮುಸ್ಲಿಂ ಮತದಾರರು ಪ್ರಮುಖ ಸ್ಥಾನದಲ್ಲಿದ್ದರೆ, ಪರಿಶಿಷ್ಟ ಜಾತಿ ಹಾಗೂ ಕುರುಬ ಮತದಾರರು ನಿರ್ಧಾರಕ ಸ್ಥಾನದಲ್ಲಿದ್ದಾರೆ. 1991ರಲ್ಲಿ ಗೆಲುವು ಸಾಧಿಸಿದ್ದು, ಬಿಟ್ಟರೆ ಸುಮಾರು ಮೂರು ದಶಕಗಳಿಂದ ಕಾಂಗ್ರೆಸ್ ಇಲ್ಲಿ ಒಮ್ಮೆಯೂ ಜಯ ಗಳಿಸಿಲ್ಲ. 1996ರಲ್ಲಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ತನ್ನ ಪ್ರಭುತ್ವ ಸಾಧಿಸಿದ ಬಿಜೆಪಿ ಇಂದಿಗೂ ದಿಗ್ವಿಜಯ ಯಾತ್ರೆ ಮುಂದುವರಿಸಿಕೊಂಡು ಬಂದಿದೆ.
-ಅಮರೇಗೌಡ ಗೋನವಾರ