ಧಾರವಾಡ: ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಕೆಲಗೇರಿ ಕೆರೆಗೆ ತ್ಯಾಜ್ಯ, ಕೊಳಚೆ ನೀರು ಸೇರ್ಪಡೆಯಾಗಿ ಕಪ್ಪು ಬಣ್ಣಕ್ಕೆ ತಿರುಗಿ ದುರ್ನಾತ ಬೀರುತ್ತಿದೆ, ಪಾಚಿ ಬೆಳೆದು ಅವಸಾನದಂಚಿಗೆ ತಲುಪಿದೆ. ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ನಿರ್ಮಿಸಿರುವ ಅವಳಿ ನಗರದ ಈ ಅಪರೂಪದ ಕೆರೆ ಒಂದು ಕಾಲದಲ್ಲಿ ಕುಡಿಯುವ ನೀರಿನ ಜಲ ಮೂಲವಾಗಿತ್ತು.ಆದರೆ ಈಗ ದನಗಳೂ ನೀರು ಕುಡಿಯದಷ್ಟು ಕಲುಷಿತಗೊಂಡಿದೆ. ದಿವ್ಯನಿರ್ಲಕ್ಷ್ಯಕ್ಕೊಳಗಾಗಿ ತನ್ನ ಖದರ್ ಕಳೆದುಕೊಂಡಿದೆ.
Advertisement
ವಾರ್ಡ್ ನಂ.1ರ ವ್ಯಾಪ್ತಿಗೆ ಬರುವ ಕೆಲಗೇರಿ ಕೆರೆ ಸುಮಾರು 170 ಎಕರೆ ವಿಸ್ತೀರ್ಣದಲ್ಲಿದೆ. ಇದರ ನಿರ್ವಹಣೆ, ಉಸ್ತುವಾರಿ ಎಲ್ಲವೂ ಕೃಷಿ ವಿವಿಗೆ ಸೇರಿದೆ. ಆದರೆ ಅನುದಾನ ಕೊರತೆಯಿಂದ ಕೆರೆ ಸ್ವಚ್ಛತೆ, ನಿರ್ವಹಣೆ ಮಾಡದೆ ಹಾಗೆ ಬಿಟ್ಟಿದೆ. ಇತ್ತ ಪಾಲಿಕೆ ಕೂಡ ಅಷ್ಟಕ್ಕಷ್ಟೇ ಎಂಬಂತೆ ನಿರ್ಲಕ್ಷ್ಯ ವಹಿಸಿದೆ. ಗಂಡ-ಹೆಂಡಿರ ನಡುವೆ ಕೂಸು ಬಡವಾಯ್ತು ಎಂಬಂತೆ ಪಾಲಿಕೆ-ಕೃಷಿ ವಿವಿ ನಡುವೆ ಅಪರೂಪದ ಹಾಗೂ ಐತಿಹಾಸಿಕ ಕೆರೆ ಕೊಳಚೆಯಿಂದ ತುಂಬಿ ತುಳುಕುತ್ತಿದೆ.
Related Articles
Advertisement
ಪಕ್ಷಿ ಸಂಕುಲಕ್ಕೆ ಕುತ್ತುಒಂದು ಕಾಲದಲ್ಲಿ ಕೆಲಗೇರಿ ಕೆರೆ ದಡದಲ್ಲಿ ಹಕ್ಕಿಗಳ ಕಲರವ ಕೇಳುತ್ತಿತ್ತು. ದೂರದೂರಿನಿಂದ ಬಂದ ಹಕ್ಕಿಗಳು ಕೆಲ ಕಾಲ ಇಲ್ಲೇ ಇದ್ದು, ವಾಪಸ್ ಹೋಗುತ್ತಿದ್ದವು. ಇವು ಪಕ್ಷಿ ಪ್ರಿಯರಿಗೆ ರಂಜನೆ ಜತೆಗೆ ಅಧ್ಯಯನಕ್ಕೂ ಅನುಕೂಲ ಕಲ್ಪಿಸಿದ್ದವು. ದ.ರಾ.ಬೇಂದ್ರೆ ಸೇರಿ ಹಲವು ಕವಿಗಳ ಕವಿತೆಗಳಿಗೆ ಸ್ಫೂರ್ತಿದಾಯಕ ತಾಣವಾಗಿತ್ತು. ಆದರೆ ಈಗ ಪಕ್ಷಿಗಳೂ ಇಲ್ಲ, ಕವಿಗಳೂ ಇತ್ತ ಸುಳಿಯುತ್ತಿಲ್ಲ. ನಾವು ಸಣ್ಣವರಿದ್ದಾಗ ಕೆರೆಯಲ್ಲಿ ನೀರು ಕುಡಿಯುತ್ತಿದ್ದೆವು. ಆದರೀಗ ನಗರದ ಸುತ್ತಮುತ್ತಲಿನ ಮನೆಗಳಿಂದ ಕಲುಷಿತ ನೀರು ಹರಿದು ಬಂದು ಕೆರೆ ಹಾಳು ಮಾಡಿದೆ. ಸೂಕ್ತ ನಿರ್ವಹಣೆ ಇಲ್ಲದಂತಾಗಿದೆ. ಹರಿದು ಬರುವ ತ್ಯಾಜ್ಯ ನೀರನ್ನು ಬೇರೆಡೆಗೆ
ಹೋಗುವಂತೆ ಮಾಡಿ ಕೆರೆ ಉಳಿಸಿ ಕೊಡಬೇಕು. ಮತ್ತೆ ನಮ್ಮ ಕೆರೆಯಲ್ಲಿನ ನೀರು ಕುಡಿವಂತಾಗಬೇಕು.
● ಉಮೇಶ ಶಿರಹಟ್ಟಿಮಠ, ಕೆಲಗೇರಿ ನಿವಾಸಿ ಕೆರೆ ತುಂಬೆಲ್ಲ ಹೂಳು ತುಂಬಿದ್ದು, ಸಂಬಂಧಪಟ್ಟವರು ಈ ಕುರಿತು ಗಮನ ಹರಿಸಬೇಕು. ಸಂಜೆಯಾದರೆ ಸಾಕು ಕೆರೆಯ
ಹತ್ತಿರ ಕುಳಿತುಕೊಳ್ಳುವ ಹಾಗಿಲ್ಲ. ದೊಡ್ಡ ಗಾತ್ರದ ಸೊಳ್ಳೆಗಳು ಕಚ್ಚುತ್ತಿವೆ. ಇದರಿಂದ ಇಲ್ಲಿ ಓಡಾಡುವ ಸಣ್ಣ ಮಕ್ಕಳಿಗೆ, ವೃದ್ಧರಿಗೆ ಸಾಂಕ್ರಾಮಿಕ ರೋಗಗಳು ಹೆಚ್ಚುವ ಭೀತಿ ಉಂಟಾಗಿದೆ. ಸಂಬಂಧಪಟ್ಟವರು ಕೆರೆ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು.
●ಬಸವರಾಜ ಹಿರೇಮಠ, ಕೆಲಗೇರಿ ನಿವಾಸಿ ■ ಸುನೀಲ ತೇಗೂರ್