Advertisement

Dharwad:ಹಿಂಗಾರಿ ಮಾವಿಗೆ ಮುಂಗಾರಿನಲ್ಲೇಕೆ ವಿಮೆ?ಆ್ಯಪ್‌, ಮಿಸ್‌ ಮ್ಯಾಚ್‌ ಕಥೆ ಹೇಳುತ್ತಿದೆ

06:50 PM Aug 25, 2023 | Team Udayavani |

ಧಾರವಾಡ: ಮಾವು ಹಿಂಗಾರಿ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಈ ಬಾರಿ ಮಾವಿನ ಬೆಳೆಗೆ ಮುಂಗಾರಿನಲ್ಲಿಯೇ ಹವಾಮಾನ ಆಧಾರಿತ ಬೆಳೆವಿಮೆ ಇರಿಸುವಂತೆ ಸರ್ಕಾರ ರೈತರಿಗೆ ದುಂಬಾಲು ಬಿದ್ದಿದೆ.

Advertisement

ಪ್ರತಿವರ್ಷ ಅಕ್ಟೋಬರ್‌ ತಿಂಗಳಿನಲ್ಲಿ ವಿಮೆ ಕಂತು ಪಾವತಿಸುತ್ತಿದ್ದ ರೈತರು ಈ ವರ್ಷ ಆ.31ರೊಳಗೆ ಪಾವತಿಸುವಂತೆ ಗಡುವು ನೀಡಿದ್ದು, ಇದು ಮಾವು ಬೆಳೆಗಾರರಲ್ಲಿ ತೀವ್ರ ಗೊಂದಲ ಸೃಷ್ಟಿಸುತ್ತಿದೆ.

ಹೌದು. ರಾಜ್ಯದಲ್ಲಿಯೇ ಅತಿ ಹೆಚ್ಚು ಆಲ್ಫೋನ್ಸೋ ಮಾವು ಉತ್ಪಾದಿಸುವ ಧಾರವಾಡ ಜಿಲ್ಲೆಯ ಮಾವು ಬೆಳೆಗಾರರಿಗೆ ಇದೀಗ ತೋಟಗಾರಿಕೆ ಇಲಾಖೆ ತೀವ್ರ ಒತ್ತಡ ತಂದಿಟ್ಟಿದೆ. ಆ.22ಕ್ಕೆ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಕೇವಲ ಎಂಟು ದಿನಗಳಲ್ಲಿ ಮಾವು ಬೆಳೆಗಾರರಿಗೆ ಪ್ರಿಮಿಯಂ ಹಣ ಪಾವತಿಸುವಂತೆ ಹೇಳಿದೆ. ಮಾವು ಹಿಂಗಾರು ಬೆಳೆಯಾಗಿದ್ದು, ಅಧಿಕಾರಿಗಳು ಮತ್ತು ಸರ್ಕಾರ ತಮ್ಮ ಅನುಕೂಲಕ್ಕಾಗಿ ಇದೇ ನೆಪದಲ್ಲಿ ರೈತರಿಂದ ಆರು ತಿಂಗಳು ಮೊದಲೇ ಹಣ ವಸೂಲಿ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಮಾವು ವಿಮೆ ಪ್ರತಿವರ್ಷ ಹಿಂಗಾರಿಗೆ ತುಂಬಲು ರೈತರಿಗೆ ಮುಂಗಾರು ಬೆಳೆ ಕೈ ಹಿಡಿಯುತ್ತಿತ್ತು. ಮುಂಗಾರಿನಲ್ಲಿ ಸೋಯಾ, ಭತ್ತದ ಬೆಳೆ ಬೆಳೆದು ಅದನ್ನು ಮಾರಾಟ ಮಾಡಿದ ಹಣದಿಂದಲೇ ಹೆಚ್ಚು ರೈತರು ಮಾವು ವಿಮೆ ಕಂತು ತುಂಬುತ್ತಿದ್ದರು. ಆದರೆ ಇದೀಗ ಮತ್ತೆ ಸಾಲ ಮಾಡಿಯಾದರೂ ಮಾವು ವಿಮೆ ಕಂತು ತುಂಬುವ ಸ್ಥಿತಿ ನಿರ್ಮಾಣವಾಗಿದೆ.

ಮೊಬೈಲ್‌ ಮತ್ತು ಮಿಸ್‌ಮ್ಯಾಚ್‌ ತಪ್ಪುವುದೇ?:
ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಹಿಂಗಾರಿ ಬೆಳೆಗೆ ಮುಂಗಾರಿನಲ್ಲೇಕೆ ವಿಮೆ ಕಂತು ಪಾವತಿಸಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು ಇಲ್ಲಸಲ್ಲದ ಕಥೆ ಹೇಳುತ್ತಿದ್ದಾರೆ. ದಕ್ಷಿಣ ಕರ್ನಾಟಕ ಭಾಗದ ರಾಮನಗರ, ಕೋಲಾರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಈ ಹಿಂದಿನಿಂದಲೂ ಅಲ್ಲಿನ ರೈತರು ಮುಂಗಾರು ಸಂದರ್ಭದಲ್ಲಿಯೇ ಮಾವು ವಿಮೆ ಪಾವತಿಸುತ್ತ ಬಂದಿದ್ದಾರೆ.

Advertisement

ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ಹಾವೇರಿ, ಉತ್ತರಕನ್ನಡ, ಬಾಗಲಕೋಟೆ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಮಾತ್ರ ಆಲ್ಫೋನ್ಸೋ ಅತೀ ಹೆಚ್ಚು ಬೆಳೆಯುತ್ತಿದ್ದು, ಇಲ್ಲಿ ಪ್ರತಿವರ್ಷ ಹಿಂಗಾರಿನಲ್ಲಿ ವಿಮೆ ಕಂತು ಪಾವತಿಸಲಾಗುತ್ತಿತ್ತು. ಇದು ಸರ್ಕಾರಿ ಅಧಿಕಾರಿಗಳಿಗೆ ಲೆಕ್ಕಪತ್ರ ಇಡಲು ತೊಂದರೆಯಾಗುತ್ತಿತ್ತಂತೆ. ಮೊಬೈಲ್‌ ಆಪ್‌ಗಳಲ್ಲಿ ಡೌನ್‌ಲೋಡ್‌ ಸಮಸ್ಯೆ ಸರಿಪಡಿಸಲು ಮತ್ತು ಜಿಪಿಎಸ್‌ ಮಿಸ್‌ ಮ್ಯಾಚ್‌ ಆಗುತ್ತಿತ್ತಂತೆ. ಅಲ್ಲದೇ ಹಳೆಮೈಸೂರು ರೈತರ ವಿಮಾ ಪರಿಹಾರ ಪ್ರತಿವರ್ಷದ ಜೂನ್‌-ಜುಲೈಗೆ ಬಿಡುಗಡೆಯಾಗುತ್ತಿದ್ದರೆ ಉತ್ತರ ಕರ್ನಾಟಕ ಭಾಗದ ರೈತರದ್ದು ನವೆಂಬರ್‌-ಡಿಸೆಂಬರ್‌ ತಿಂಗಳಿನಲ್ಲಿ ಆಗುತ್ತಿತ್ತು. ಇದು ಕೂಡ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿತ್ತು.

ಅಲ್ಲದೇ ದಾಖಲೆಗಳ ಕೊರತೆ ಮತ್ತು ಮೊಬೈಲ್‌ ಆ್ಯಪ್‌ನಿಂದ ಉಂಟಾದ ತಾಂತ್ರಿಕ ಸಮಸ್ಯೆಗಳಿಂದ ಧಾರ ವಾಡ ಜಿಲ್ಲೆಯ ನೂರಾರು ರೈತರು ಪ್ರತಿವರ್ಷ ಪರದಾಟ ನಡೆಸುತ್ತಲೇ ಇದ್ದಾರೆ. ಈ ಪೈಕಿ 2020ನೇ ಸಾಲಿನಲ್ಲಿ 58 ಮಾವು ಬೆಳೆಗಾರರ 35.18 ಲಕ್ಷ ರೂ. ಹಾಗೂ 2021ನೇ ಸಾಲಿನ 62 ಮಾವು ಬೆಳೆಗಾರರ 31.12 ಲಕ್ಷ ರೂ.ನಷ್ಟು ಮಾವು ವಿಮೆ ರೈತರ ಕೈಸೇರಲು ಪರದಾಡುವಂತಾಗಿದೆ.

25 ಕೋಟಿ ರೂ.ಗೆ ಏರಿದ ವಿಮೆ: ಜಿಲ್ಲೆಯಲ್ಲಿ ಮಾವು ವಿಮೆ ಮಾಡಿಸುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2020-21ನೇ ಸಾಲಿನಲ್ಲಿ ಜಿಲ್ಲೆಯಿಂದ ಒಟ್ಟು 4221 ರೈತರು 1.65 ಕೋಟಿ ರೂ.ಗಳ ಪ್ರೀಮಿಯಂ ಹಣ ತುಂಬಿದ್ದರು. ಮಾವು ಬೆಳೆ ತೀವ್ರ ವಿಫಲತೆ ಕಂಡಿದ್ದರಿಂದ ಶೇ.68ರ ಹಾನಿ ಆಧಾರದಲ್ಲಿ ಜಿಲ್ಲೆಯ 21.05 ಕೋಟಿ ರೂ.ಗಳಷ್ಟು
ವಿಮೆ ಪರಿಹಾರ ಲಭಿಸಿತ್ತು. ಅದೇ ರೀತಿ 2021-22 ರಲ್ಲಿ ಜಿಲ್ಲೆಯ 6764 ಮಾವು ಬೆಳೆಗಾರರು ಒಟ್ಟು 2.66 ಕೋಟಿ ರೂ.ಗಳಷ್ಟು ವಿಮೆ ಪ್ರೀಮಿಯಂ ಕಟ್ಟಿದ್ದರು.

ಮಾವು ತೀವ್ರ ಹವಾಮಾನ ವೈಪರೀತ್ಯದಿಂದ 25.87 ಕೋಟಿ ರೂ.ಗಳಷ್ಟು ವಿಮಾ ಪರಿಹಾರ ಮೊತ್ತ ಬಂದಿತ್ತು. ಕಳೆದ ವರ್ಷ ಅಂದರೆ 2022-23ನೇ ಸಾಲಿಗಾಗಿ ಕೂಡ ರೈತರು 3.21ಕೋಟಿ ರೂ.ಗಳಷ್ಟು ವಿಮೆ ಹಣ ಪಾವತಿಸಿದ್ದಾರೆ. ಇದರ ಪರಿಹಾರ ಇನ್ನು ಡಿಸೆಂಬರ್‌ ಸುತ್ತ ಬರಬೇಕಿದ್ದು, ಇದೀಗ ಈ ಪರಿಹಾರ ಹಣ ಬರದೇ ಮತ್ತೆ 2023-24ನೇ ಸಾಲಿನ ಮಾವು ಬೆಳೆ ಪ್ರೀಮಿಯಂ ತುಂಬುವ ಅನಿವಾರ್ಯತೆ ರೈತರಿಗೆ ಎದುರಾಗಿದೆ.

ಫೋರ್ಟಲ್‌ನಲ್ಲಿ ಮಿಶ್ರ ಬೆಳೆ ಫಜೀತಿ: ಧಾರವಾಡ ರಾಜ್ಯದಲ್ಲಿಯೇ ಅತೀ ಹೆಚ್ಚು ಆಲ್ಫೋನ್ಸೋ ಮಾವಿನ ಹಣ್ಣು ಉತ್ಪಾದಿಸುವ ಜಿಲ್ಲೆ. ಇಲ್ಲಿ 10,568 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಉತ್ತಮ ಫಸಲು ಬಂದರೆ 87 ರಿಂದ 98 ಸಾವಿರ ಟನ್‌ ಮಾವು ಉತ್ಪಾದನೆಯಾಗುತ್ತಿದೆ. ಇಲ್ಲಿ ಮಾವಿನ ತೋಟಗಳಲ್ಲಿ ಮುಂಗಾರು ಬೆಳೆಗಳಾದ ಗೋವಿನಜೋಳ, ಸೋಯಾ, ಭತ್ತ, ಅಷ್ಟೇಯಲ್ಲ ಕಬ್ಬು ಕೂಡ ಬೆಳೆಯುತ್ತಾರೆ. ಆದರೆ ಈಗಾಗಲೇ ಇದೇ ಸರ್ವೇ ನಂ.ನಲ್ಲಿ ಮುಂಗಾರಿ ಬೆಳೆಗಳಿಗೆ
ಹವಾಮಾನ ಆಧಾರಿತ ಬೆಳೆವಿಮೆ ಇರಿಸಲಾಗಿದ್ದು, ಅಂತಹ ಸರ್ವೇ ನಂ.ಗಳಲ್ಲಿ ಇರುವ ಮಾವಿನ ಬೆಳೆಗೆ ಮತ್ತೆ ವಿಮೆ ಪ್ರೀಮಿಯಂ ಇರಿಸಲು ವೆಬ್‌ ಸೈಟ್‌ನಲ್ಲಿ ತಾಂತ್ರಿಕ ದೋಷಗಳು ಕಂಡು ಬರುತ್ತಿವೆ.

ಇಲ್ಲಿ ಮಿಶ್ರಬೆಳೆ ಪದ್ಧತಿ ಎಂಬ ವಿಭಾಗ ತೆರೆದು ಅಲ್ಲಿ ವಿಮೆ ಇರಿಸುವ ವ್ಯವಸ್ಥೆ ಮಾಡಲಾಗಿದೆ. ಎರಡು ದಿನವಾದರೂ ವಿಮಾ ಪ್ರೀಮಿಯಂ ಅನ್ನು ಪೋರ್ಟಲ್‌ ತಿರಸ್ಕರಿಸುತ್ತಿದ್ದು, ಇದು ಮಾವು ಬೆಳೆಗಾರರನ್ನು ಕಂಗಾಲು ಮಾಡಿದೆ. ಆದರೆ ಇದನ್ನು ಸರಿಪಡಿಸುವುದಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ

ಮಾವಿಗಿಲ್ಲ ಸುಸ್ಥಿರ ಪರಿಹಾರ ಮಾರ್ಗ
ವಿಮೆ ಸಿಕ್ಕರೂ ಸಿಗಬಹುದು, ಸಿಗಲಿಕ್ಕೂ ಇಲ್ಲ. ಆದರೆ ಮಾವು ಬೆಳೆಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರ್ಕಾರ ಮಾವು ಉತ್ಪಾದನೆ ಮತ್ತು ಮೌಲ್ಯವರ್ಧನೆಗೆ ಸುಸ್ಥಿರವಾದ ಯೋಜನೆ ರೂಪಿಸುತ್ತಿಲ್ಲ. ಎರಡು ವರ್ಷಗಳ ಹಿಂದೆ ಪರಿಚಯಿಸಿರುವ ಮ್ಯಾಂಗೋ ಟೂರಿಸಂಗೆ (ಮಾವು ಮತ್ತು ಪ್ರವಾಸ)ಉತ್ತಮ ಸ್ಪಂದನೆ ಸಿಕ್ಕರೂ ಮತ್ತೆ ಅದನ್ನು ನಿಲ್ಲಿಸಲಾಗಿದೆ. ಮಾವಿನಿಂದ ತಂಪು ಪಾನೀಯ ತಯಾರಿಸುವ ಘಟಕ ಸ್ಥಾಪನೆ ವಿಚಾರದಲ್ಲೂ ಮೀನಾಮೇಷ ಎನಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪನ್ನದಡಿ ಆಲ್ಫೋನ್ಸೋ ಮಾವು ಸ್ಥಾನ ಪಡೆದಿದ್ದನ್ನು ಬಿಟ್ಟರೆ ಹೆಚ್ಚೇನೂ ಆಗಿಲ್ಲ.

ಸರ್ಕಾರ ಇಡೀ ರಾಜ್ಯಕ್ಕೆ ಒಂದೇ ಬಗೆಯ ಹವಾಮಾನ ಆಧಾರಿತ ವಿಮೆ ಜಾರಿಗೊಳಿಸುವ ನಿಟ್ಟಿನಲ್ಲಿ ಈ ಬಾರಿ ಧಾರವಾಡ
ಜಿಲ್ಲೆಗೆ ಮುಂಗಾರಿನಲ್ಲಿಯೇ ಮಾವು ಬೆಳೆ ವಿಮೆ ಕಂತು ಪಾವತಿಸಲು ಹೇಳಿದೆ. ಸಣ್ಣಪುಟ್ಟ ದೋಷಗಳೇನೇ ಇದ್ದರೂ ಅವುಗಳನ್ನು
ಸರಿಪಡಿಸಲಾಗುವುದು.
ಕಾಶಿನಾಥ ಭದ್ರಣ್ಣವರ,
ಡಿಡಿ, ತೋಟಗಾರಿಕೆ ಇಲಾಖೆ, ಧಾರವಾಡ

ಕೇವಲ ಎಂಟು ದಿನಗಳಲ್ಲಿ ಧಾರವಾಡ ಜಿಲ್ಲೆಯ 10 ಸಾವಿರ ಹೆಕ್ಟೇರ್‌ನ ಆರು ಸಾವಿರ ಬೆಳೆಗಾರರು ಮಾವು ವಿಮೆ ತುಂಬಬೇಕು ಎಂದರೆ ಹೇಗೆ?. ಈ ದಿನಾಂಕವನ್ನು ಇನ್ನಷ್ಟು ಸಡಿಲಿಸಿ ಹೆಚ್ಚಿನ ಸಮಯಾವಕಾಶ ಕೊಡಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ.
ದೇವೆಂದ್ರ ಜೈನರ್‌,
ಮಾವು ಬೆಳೆಗಾರರ ಸಂಘದ ಅಧ್ಯಕ್ಷ

*ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next