ಲಕಮಾಪುರ: ಕಳೆದ ವರ್ಷ ಹಿಂಗಾರು ಮಳೆ ಅಭಾವದಿಂದ ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಪ್ರಸಕ್ತ ವರ್ಷ ಅತಿಯಾದ ಮಳೆಯಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳುವಂತೆ ಆಗಿವೆ. ಮೊದಲು ಮಾನ್ಸೂನ್ ಮಾರುತಗಳು ರೈತರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದವು. ಆದರೆ ಪ್ರಸಕ್ತ ವರ್ಷ ಹಿಂಗಾರು ಮಳೆ ಎಡೆಬಿಡದೇ ಕಾಡುತ್ತಿವೆ. ಹೀಗಾಗಿ ಈಗಾಗಲೇ ಬೀಜ, ಗೊಬ್ಬರ ಖರೀದಿಸಿ ಬಿತ್ತನೆಗೆ ಸಜ್ಜಾಗಿದ್ದ ರೈತರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.
Advertisement
ಭೂಮಿ ಹದವೂ ಆಗಿಲ್ಲ: ಮಳೆಯಿಂದ ಹೊಲಗಳಲ್ಲಿ ನೀರು ನಿಂತು ಕೆರೆಗಳಂತೆ ಕಾಣುತ್ತಿವೆ. ಕೊರಕಲುಗಳು ಬಿದ್ದಿವೆ. ಹೊಲಗಳಿಗೆ ಹೋಗುವ ಕಾಲುದಾರಿಗಳು ತಗ್ಗುಗಳಿಂದ ಕೂಡಿದ್ದು, ನೀರು ತುಂಬಿ ಸಂಪೂರ್ಣ ಹಾಳಾಗಿವೆ. ಟ್ರಾಕ್ಟರ್, ಚಕ್ಕಡಿಗಳು ಸಾಗುವ ದಾರಿಗಳು ಕೆಸರುಮಯವಾಗಿವೆ. ಇದರಿಂದ ವಾಹನಗಳ ಮೂಲಕ ಕೃಷಿ ಚಟುವಟಿಕೆಯೂ ಅಸಾಧ್ಯ ಎನ್ನುವಂತಾಗಿದೆ. ಈ ವೇಳೆಗಾಗಲೇ ಹಿಂಗಾರಿನ ಬೆಳೆಗಳ ಎಡೆ ಹೊಡೆಸಿಕೊಳ್ಳುವ ಕಾರ್ಯ ನಡೆಯುತ್ತಿದ್ದವು. ಆದರೆ ಈವರೆಗೆ ಭೂಮಿಯನ್ನು ಹದ ಸಹಿತ ಮಾಡಲು ಸಾಧ್ಯವಾಗಿಲ್ಲ. ಬಿತ್ತನೆ ದೂರದ ಮಾತು. ಸದ್ಯ 10-12 ದಿನಗಳ ಕಾಲ ಮಳೆ ನಿಂತರೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿಯಾಗುತ್ತದೆ.
ಅತಿಯಾದ ಮಳೆಗೆ ಆಲೂಗಡ್ಡೆ ಬೆಳೆ ಮಣ್ಣಿನಲ್ಲಿಯೇ ಶೇ.75 ಕೊಳೆತು ಹೋಗಿದೆ. ಕಡಲೆ ಬಿತ್ತನೆ ಮಾಡಿದ್ದರಲ್ಲಿ ಶೇ.20 ಹುಟ್ಟಿಲ್ಲ. ಕೆಲವು ರೈತರು ಬಿತ್ತಿದ ಕಡಲೆ ಬೀಜಗಳು ಮೊಳಕೆ ಒಡೆದಿದ್ದು, ಅತಿಯಾದ ಮಳೆಯಿಂದ ಕೆಂಪಾಗಿವೆ. ಕೆಲವು ವರ್ಷಗಳಿಂದ ಲಕಮಾಪುರದಲ್ಲಿ ಹತ್ತಿ ಬೆಳೆಗಾರರ ಸಂಖ್ಯೆ ಗಣನೀಯವಾಗಿದೆ. ಶೇ.4 ಹತ್ತಿ ಬೆಳೆಗಾರರು ಇದ್ದಾರೆ. ಹತ್ತಿ ಗಿಡಗಳೆಲ್ಲ ಅತಿಯಾದ ತಂಪಿನಿಂದ ಕೆಂಪಾಗಿವೆ. ಕಾಯಿ ಸಮೇತ ಹತ್ತಿ ಗಿಡಗಳು ನೆಲಕ್ಕುರುಳಿವೆ. ತರಕಾರಿ ಬೆಳೆಗಳಾದ ಟೊಮ್ಯಾಟೋ, ಸೌತೆಕಾಯಿ, ಮೆಣಸಿನ ಕಾಯಿಗಿಡಗಳು ಶೇ.5 ಹಾಳಾಗಿವೆ.
Related Articles
ಬಿಟ್ಟರೂ ಉಪಯೋಗವಿಲ್ಲ. ಸಾಲಸೋಲ ಮಾಡಿ ಲಾವಣಿಗೆ ಪಡೆದ ಹೊಲಗಳು ಮೈಮೇಲೆ ಬಂದಿವೆ. ಮತ್ತೆ ಹರಗಿ ಬಿತ್ತಲು ಸಾಕಷ್ಟು ಖರ್ಚಾಗುತ್ತದೆ. ಬೀಜ-ಗೊಬ್ಬರ ಮತ್ತೆ ಖರೀದಿಸುವುದು ಕಷ್ಟ.
*ಚಂದ್ರಪ್ಪ ಗಬ್ಬೂರು, ರೈತ
Advertisement
ಒಂಭತ್ತು ಎಕರೆ ಆಲೂಗಡ್ಡೆ ಬೆಳೆ ಬಂದಿದೆ. ಆದರೆ ಆಲೂಗಡ್ಡೆ ತೆಗೆಯಲು ಮಳೆ ಬಿಡುತ್ತಿಲ್ಲ. ಇದರಿಂದ ಭೂಮಿ ಒಳಗೆ ಕೊಳೆಯುತ್ತಿದೆ. ಲಕ್ಷಗಟ್ಟಲೆ ಖರ್ಚು ಮಾಡಲಾಗಿದೆ. ಮಳೆ ಸಡಿಲವಾಗುವಂತೆ ಕಾಣುತ್ತಿಲ್ಲ. ಹೀಗಾದರೆ ಸುಮಾರು 14 ಲಕ್ಷ ರೂ. ಮೌಲ್ಯದ ಬೆಳೆ ಕೈತಪ್ಪಲಿದೆ.*ಕಾಂತಪ್ಪ ಗಬ್ಬೂರು, ರೈತ ಅತಿಯಾದ ಮಳೆಯಿಂದ ಹೊಲದಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ಎಷ್ಟೇ ಕಷ್ಟಪಟ್ಟು ದುಡಿದರೂ ಫಲ ಕೈಗೆ ಹತ್ತುತ್ತಿಲ್ಲ. ಇದರಿಂದ ಮಾಡಿದ ಸಾಲವನ್ನು ತೀರಿಸಲು ಆಗುತ್ತಿಲ್ಲ. ಸರ್ಕಾರ ಹಾನಿಗೆ ಪರಿಹಾರ ಒದಗಿಸಬೇಕು.
*ಮಹಾಂತೇಶ ಬೆಟಗೇರಿ,
ಯುವ ರೈತ, ಲಕಮಾಪೂರ ನಾಲ್ಕು ತಿಂಗಳ ಕಾಲ ಕಷ್ಟಪಟ್ಟು ಬೆಳೆಸಿದ ಮೆಣಸಿನ ಗಿಡಗಳು ಮಳೆಯಿಂದ ಹಾಳಾಗಿವೆ. ಇದರಿಂದ ಆರ್ಥಿಕ ಹೊರೆಯಾಗಿದೆ.
ಸಾಕಷ್ಟು ಖರ್ಚು ಮಾಡಿ ಬೆಳೆದ ಬೆಳೆಗಳು ಫಲ ನೀಡಲಿಲ್ಲವೆಂದರೆ ಬಹಳಷ್ಟು ನೋವಾಗುತ್ತದೆ. ಮತ್ತೆ ಸಾಲದ ಬರೆ ಹೆಚ್ಚಾಗುತ್ತದೆ.
*ಚನ್ನಬಸಪ್ಪ ಮೂಲಿಮನಿ, ರೈತ *ಸುನೀಲ ತೇಗೂರ