Advertisement

Dharwad: ಪ್ರಧಾನಿ ಸ್ಮರಣಿಕೆಗಳ ಹರಾಜಿನಲ್ಲಿ “ಕಲಘಟಗಿ ತೊಟ್ಟಿಲು’

05:37 PM Nov 10, 2023 | Team Udayavani |

ಮಿಶ್ರಿಕೋಟಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಸ್ಮರಣಿಕೆಗಳ ಐದನೇ ವಾರ್ಷಿಕ ಹರಾಜಿನಲ್ಲಿ ಧಾರವಾಡದಲ್ಲಿ ಉಡುಗೊರೆಯಾಗಿ ನೀಡಿದ್ದ ಕಲಘಟಗಿ ತೊಟ್ಟಿಲು ಸ್ಥಾನ ಪಡೆದಿದೆ. ಈ ಬಾರಿಯ ಹರಾಜು ಪ್ರಕ್ರಿಯೆ ಅ.2ರಂದು
ಪ್ರಾರಂಭವಾಗಿದ್ದು, ನ.15ರ ವರೆಗೆ ಇರಲಿದೆ.

Advertisement

ಜಿಲ್ಲೆಯಲ್ಲಿ ಕಳೆದ ಮಾ.12ರಂದು ನಡೆದ ಐಐಟಿ ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದರು. ಅವರಿಗೆ ಕಲಘಟಗಿಯ ತೊಟ್ಟಿಲು ಕಲಾವಿದ ಶ್ರೀಧರ ಸಾವಕಾರ ಅವರು ತಯಾರಿಸಿದ ಕಲಘಟಗಿಯ ಪಾರಂಪರಿಕ ಹೆಮ್ಮೆಯ ಪ್ರತೀಕವಾದ ಕೆಮಿಕಲ್‌ ರಹಿತ ಬಣ್ಣದ ತೊಟ್ಟಿಲನ್ನು ಉಡುಗೊರೆಯಾಗಿ ನೀಡುವ
ಮೂಲಕ ಜಿಲ್ಲೆಯ ಸಂಸ್ಕೃತಿ ಬಿಂಬಿಸಲಾಗಿತ್ತು.

ತೊಟ್ಟಿಲು ವಿಶೇಷತೆ: ಕೃಷ್ಣಾವತಾರ, ದಶಾವತಾರ, ರಾಮಾಯಣ-ಮಹಾಭಾರತದ ಕಥೆಗಳ ಚಿತ್ರಗಳನ್ನು ತೊಟ್ಟಿಲಿನ ಮೇಲೆ ಬಿಡಿಸಲಾಗುತ್ತದೆ. ಮಗು ದೇವರ ಸನ್ನಿಧಾನದಲ್ಲಿ ಆಡಲಿ ಎಂಬ ಉದ್ದೇಶದಿಂದ ಈ ಚಿತ್ರಗಳನ್ನು ಬರೆಯುತ್ತಾರೆ. ಹಿಂದೂ- ಮುಸ್ಲಿಂ-ಕ್ರಿಶ್ಚಿಯನ್‌ ಸೇರಿದಂತೆ ಎಲ್ಲ ಧರ್ಮದವರು ಕಲಘಟಗಿ ತೊಟ್ಟಿಲು ತೆಗೆದುಕೊಂಡು ಹೋಗುತ್ತಾರೆ. ಅರಗು
ಮತ್ತು ನೈಸರ್ಗಿಕ ಬಣ್ಣ ಮಿಶ್ರಣ ಮಾಡಿ ಚಿತ್ರ ಬಿಡಿಸುತ್ತಾರೆ. ಕಲಘಟಗಿಯ ಚಿತ್ರಗಾರ ಗಲ್ಲಿಯಲ್ಲಿ ನೆಲೆಸಿರುವ ಸಾವುಕಾರ ಕುಟುಂಬ ನಾಲ್ಕು ತಲೆಮಾರುಗಳಿಂದಲೂ ಈ ಕೆಲಸದಲ್ಲಿ ತೊಡಗಿದೆ. ಇವರು ತಯಾರಿಸುವ ತೊಟ್ಟಿಲು ಬೆಂಗಳೂರು, ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ಅಮೆರಿಕ, ದುಬೈ, ಫ್ರಾನ್ಸ್‌ ದೇಶಗಳಲ್ಲೂ ತನ್ನ ವೈಶಿಷ್ಟ್ಯ ಸಾರಿದೆ.

ನಮಾಮಿ ಗಂಗೆಗೆ
ಕಲಘಟಗಿ ತೊಟ್ಟಿಲನ್ನು ಕೇಂದ್ರ ಸರ್ಕಾರದ ಜಾಲತಾಣ:  https://pmmementos.gov.in ದಲ್ಲಿ ಪ್ರೊಡಕ್ಟ್ ಕೋಡ್‌: 23A0617 ಅಂತ ಹುಡುಕಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕೊನೆಯ ದಿನಾಂಕ ನ.15 ಆಗಿದೆ. ಈ ಬಾರಿಯ 912 ಸ್ಮರಣಿಕೆಗಳ(ಉಡುಗೊರೆ) “ಇ-ಹರಾಜಿ’ನಿಂದ ಬರುವ ಆದಾಯವು ಪವಿತ್ರ ಗಂಗಾ ನದಿ ಪುನರುಜ್ಜೀವನಗೊಳಿಸುವ “ನಮಾಮಿ ಗಂಗೆ’ ಯೋಜನೆಗೆ ಹೋಗಲಿದೆ.

ನಮ್ಮ ತಂದೆ ಲಕ್ಷ್ಮಣ ಸಾವಕಾರ ಹಾಗೂ ದೊಡ್ಡಪ್ಪ ಗಂಗಾಧರ ಸಾವಕಾರ ಅವರ ಕಾಲದಿಂದ ಇಲ್ಲಿಯವರೆಗೂ ವಿವಿಧ ರಾಜಕಾರಣಿಗಳ ಮನೆಗಳಿಗೆ, ಅಧಿಕಾರಿಗಳ ಕುಟುಂಬಗಳಿಗೆ, ಡಾ| ರಾಜಕುಮಾರ ಅವರಂತಹ ಸಿನಿಮಾ ನಟರಿಗೆ ನಮ್ಮ ಕಲಘಟಗಿ ತೊಟ್ಟಿಲು ತಯಾರಿ ಮಾಡಿಕೊಡುತ್ತ ಬಂದಿದ್ದೇವೆ. ಆದರೆ ಈ ಬಾರಿ ಪ್ರಧಾನಿ ಮೋದಿಯವರಿಗೆ ನಮ್ಮ ಕಲಘಟಗಿಯ ತೊಟ್ಟಿಲು ನೀಡಿದ್ದೇ ಒಂದು ಸೌಭಾಗ್ಯವಾಗಿದೆ.
*ಶ್ರೀಧರ ಸಾವಕಾರ,
ಕಲಘಟಗಿ ತೊಟ್ಟಿಲು ತಯಾರಕರು

Advertisement

*ಗಿರೀಶ ಮುಕ್ಕಲ

Advertisement

Udayavani is now on Telegram. Click here to join our channel and stay updated with the latest news.

Next