ಧಾರವಾಡ: ನಗರದ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಬಿದ್ದ ದುರಂತದಲ್ಲಿ ಮೃತರಾದವರ ಸಂಖ್ಯೆ 12ಕ್ಕೇರಿದ್ದು, ಗುರುವಾರ ಐವರ ಶವವನ್ನು ಎನ್ ಡಿಆರ್ ಎಫ್ ಸಿಬ್ಬಂದಿ ಹೊರತೆಗೆದಿದ್ದಾರೆ.
ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರ ಮೃತದೇಹವನ್ನು ಹೊರತೆಗೆಯಲಾಗಿದ್ದು, ಎಂಟು ವರ್ಷದ ದಿವ್ಯಾ ಉಣಕಲ್ ಮತ್ತು 45 ವರ್ಷದ ದಾಕ್ಷಾಯಣಿ ಎಂದು ಗುರುತಿಸಲಾಗಿದೆ.
ಇಲ್ಲಿನ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡ ಕಳೆದ ಮಂಗಳವಾರ ಕುಸಿದು ಬಿದ್ದಿದ್ದು ಹಲವರು ಅವಶೇಷದ ಅಡಿಯಲ್ಲಿ ಸಿಲುಕಿದ್ದರು. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು ಒಳಗೆ ಸಿಲುಕಿಕೊಂಡವರನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ.
ಇಂದಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ ಡಿಆರ್ ಎಫ್ ಸಿಬ್ಬಂದಿ ಪ್ರೇಮಾ ಉಣಕಲ್ ಮತ್ತು ನಬೀಸಾಬ್ ನದಾಫಾರನ್ನು ರಕ್ಷಣೆ ಮಾಡಿದ್ದಾರೆ. ಇವರಿಬ್ಬರು ಒಳಗೆ ಸಿಕ್ಕಿಹಾಕಿಕೊಂಡಿರುವುದನ್ನು ತಿಳಿದು ಎನ್ ಡಿಆರ್ ಎಫ್ ಸಿಬ್ಬಂದಿ ಅವರಿಗೆ ಆಕ್ಸಿಜನ್ ಪೂರೈಕೆ ಮಾಡಿದ್ದರು. ನಂತರ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಸಂಪೂರ್ಣ ಕುಸಿದ ಕಟ್ಟಡದ ಅವಶೇಷದ ಒಳಗೆ ಇನ್ನೂ ಹತ್ತಕ್ಕೂ ಹೆಚ್ಚು ಜನ ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಹತ್ತು ಲಕ್ಷ ಪರಿಹಾರ ನೀಡಿ: ಶೆಟ್ಟರ್
ಘಟನಾ ಸ್ಥಳಕ್ಕೆ ಭೆಟಿ ನೀಡಿದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್, ದುರಂತದಲ್ಲಿ ಮೃತರಾದವರ ಪರಿವಾರಕ್ಕೆ ಸರಕಾರ ತಲಾ ಹತ್ತು ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಘಟನೆಯಲ್ಲಿ ಗಾಯಗೊಂಡವರಿಗೆ ಕೂಡಾ ಪರಿಹಾರ ಒದಗಿಸಬೇಕು. ಪರಿಹಾರ ನಿಡಲು ನೀತಿ ಸಂಹಿತೆಯ ನೆಪ ಬೇಡ ಎಂದರು. ದುರಂತಕ್ಕೆ ಕಾರಣರಾದವರನ್ನು ಬಂಧಿಸಬೇಕು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.